
ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ (RRR Movie) ಚಿತ್ರ ದೇಶ-ವಿದೇಶದಲ್ಲಿ ಹೆಸರು ಮಾಡುತ್ತಿದ್ದು. ರಿಲೀಸ್ ಆಗಿ ಬಹಳಷ್ಟು ಸಮಯವಾದರೂ ಕೂಡ ಜನರು ಇಷ್ಟಪಟ್ಟು ಚಿತ್ರಗಳನ್ನು ನೋಡುತ್ತಿದ್ದಾರೆ. ವಿಶೇಷವಾಗಿ ನೆಟ್ಫ್ಲಿಕ್ಸ್ನಲ್ಲಿ ಚಿತ್ರ ತೆರೆಕಂಡ ಮೇಲೆ ಇದು ವಿದೇಶಿಗರ ಗಮನ ಸೆಳೆದಿದೆ. ರಾಮ್ ಚರಣ್ (Ram Charan) ಹಾಗೂ ಜ್ಯೂ.ಎನ್ಟಿಆರ್ (Jr NTR) ನಟನೆಯ ಚಿತ್ರವನ್ನು ಕೆಲ ವಿದೇಶಿಗರು ತಮ್ಮದೇ ದೃಷ್ಟಿಯಲ್ಲಿ ವಿಶ್ಲೇಷಿಸಿದ್ದು ಸಖತ್ ಸುದ್ದಿಯಾಗಿತ್ತು. ಇದೀಗ ‘ಆರ್ಆರ್ಆರ್’ ಚಿತ್ರಕ್ಕೆ ಹಾಲಿವುಡ್ನ ಖ್ಯಾತ ಬರಹಗಾರನಿಂದ ವಿಶೇಷ ಮನ್ನಣೆ ಸಿಕ್ಕಿದೆ. ಹಾಲಿವುಡ್ನಲ್ಲಿ ‘ಡಾಕ್ಟರ್ ಸ್ಟ್ರೇಂಜ್’ (Doctor Strange) ಸರಣಿ ಅಪಾರ ಜನಪ್ರಿಯತೆ ಗಳಿಸಿದೆ. ಇತ್ತೀಚೆಗೆ ಆ ಫ್ರಾಂಚೈಸ್ನ ಎರಡನೇ ಚಿತ್ರ ರಿಲೀಸ್ ಆಗಿದ್ದು, ಎಲ್ಲೆಡೆ ಅತ್ಯುತ್ತಮ ಪ್ರತಿಕ್ರಿಯೆ ಗಳಿಸಿಕೊಳ್ಳುತ್ತಿದೆ. ಆ ಚಿತ್ರಗಳ ಸಹ-ಬರಹಗಾರ ಸಿ.ರಾಬರ್ಟ್ ಕಾರ್ಗಿಲ್ ಇದೀಗ ‘ಆರ್ಆರ್ಆರ್’ ಚಿತ್ರ ನೋಡಿ ಮೆಚ್ಚಿದ್ದಾರೆ.
ರಾಬರ್ಟ್ ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರ ನೋಡಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ‘‘ಸ್ನೇಹಿತರು ಹೇಳಿದ ನಂತರ ಚಿತ್ರ ವೀಕ್ಷಿಸಿದೆ. ನಾನು ನೋಡಿದ್ದರಲ್ಲೇ ಇದು ಅತ್ಯಂತ ಪ್ರಾಮಾಣಿಕವಾದ ಪ್ರಯತ್ನ ಹಾಗೂ ಅದ್ಭುತವಾದ ಬ್ಲಾಕ್ಬಸ್ಟರ್ ಚಿತ್ರ. ಈ ವಾರ ಮತ್ತೊಮ್ಮೆ ಚಿತ್ರ ವೀಕ್ಷಿಸುತ್ತೇನೆ’’ ಎಂದು ರಾಬರ್ಟ್ ಟ್ವೀಟ್ ಮಾಡಿದ್ದಾರೆ.
ರಾಬರ್ಟ್ ಟ್ವೀಟ್ಗೆ ಹಲವು ಜನ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಒಂದು ಕಾಮೆಂಟ್ಗೆ ಪ್ರತಿಕ್ರಿಯೆ ನೀಡುತ್ತಾ ರಾಬರ್ಟ್ ಅವರು, ‘ಚಿತ್ರವನ್ನು ಮೂಲ ಭಾಷೆಯಲ್ಲಿ ಮತ್ತೊಮ್ಮೆ ನೋಡಬೇಕು’ ಎಂದು ಹೇಳಿಕೊಂಡಿದ್ದಾರೆ.
ಸಿ.ರಾಬರ್ಟ್ ಕಾರ್ಗಿಲ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:
ಬಾಕ್ಸಾಫೀಸ್ನಲ್ಲಿ ಇದುವರೆಗೆ ಸುಮಾರು 1,150 ಕೋಟಿ ರೂ ಗೂ ಅಧಿಕ ಮೊತ್ತವನ್ನು ಚಿತ್ರ ಬಾಚಿಕೊಂಡಿದೆ. ವಿಎಫ್ಎಕ್ಸ್ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಲಾಗಿರುವ ಈ ಚಿತ್ರದಲ್ಲಿ ರಾಮ್ ಚರಣ್, ಜ್ಯೂ ಎನ್ಟಿಆರ್ ಜತೆಗೆ ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್ ಮೊದಲಾದವರು ಅಭಿನಯಿಸಿದ್ದಾರೆ.
ಕಳೆದ ತಿಂಗಳು ಓಟಿಟಿಗೆ ‘ಆರ್ಆರ್ಆರ್’ ಕಾಲಿಟ್ಟಿತ್ತು. ನೆಟ್ಫ್ಲಿಕ್ಸ್ನಲ್ಲಿ ಹಿಂದಿ ಅವತರಣಿಕೆ ಪ್ರದರ್ಶನವಾಗುತ್ತಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಅವತರಣಿಕೆಗಳು ಜೀ5ನಲ್ಲಿ ಬಿತ್ತರವಾಗುತ್ತಿವೆ. ನೆಟ್ಫ್ಲಿಕ್ಸ್ನಲ್ಲಿ ಈ ಚಿತ್ರ ಟ್ರೆಂಡಿಂಗ್ ಪಟ್ಟಿಯಲ್ಲಿದ್ದು, ಇಂಗ್ಲೀಷ್ ಅಲ್ಲದ ಭಾಷೆಗಳಲ್ಲಿ ಮೊದಲ ಸಾಲಿನಲ್ಲಿತ್ತು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ