
ಪ್ರಭಾಸ್ (Prabhas) ನಟನೆಯ ‘ಸ್ಪಿರಿಟ್’ ಸಿನಿಮಾದ ಚಿತ್ರೀರಕಣ ಚಾಲ್ತಿಯಲ್ಲಿದೆ. ಸಿನಿಮಾದ ಚಿತ್ರೀಕರಣ ಆರಂಭ ಆಗುವುದಕ್ಕೆ ಮುಂಚಿನಿಂದಲೂ ಸಿನಿಮಾದ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಪ್ರಭಾಸ್ ನಟಿಸಿ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡುತ್ತಿರುವ ಈ ಸಿನಿಮಾನಲ್ಲಿ ಮೊದಲಿಗೆ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಬೇಕಿತ್ತು. ಆದರೆ ದೀಪಿಕಾರ ಕೆಲವು ನಿಯಮಗಳಿಗೆ ಒಪ್ಪದೆ ಅವರನ್ನು ಸಿನಿಮಾದಿಂದ ಕೈಬಿಡಲಾಯ್ತು. ಬಳಿಕ ಸಿನಿಮಾನಲ್ಲಿ ಪ್ರಕಾಶ್ ರೈ, ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಕೊನೆಗೆ ಕೆಲ ಅಭಿಪ್ರಾಯ ಭೇದಗಳಿಂದಾಗಿ ಅವರನ್ನೂ ಸಹ ಸಿನಿಮಾದಿಂದ ಹೊರಗೆ ಇಡಲಾಯ್ತು. ಈಗ ಮತ್ತೊಬ್ಬ ಸೂಪರ್ ಸ್ಟಾರ್ ಅನ್ನು ಸಿನಿಮಾದಿಂದ ಕೈಬಿಡಲಾಗಿದೆ.
‘ಸ್ಪಿರಿಟ್’ ಸಿನಿಮಾ ಶುರುವಾದಾಗ ಈ ಸಿನಿಮಾನಲ್ಲಿ ಕೊರಿಯನ್ ಚಿತ್ರರಂಗದ ಸೂಪರ್ ಸ್ಟಾರ್, ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಡಾನ್ ಲೀ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಖುದ್ದು ಡಾನ್ ಲೀ ಅವರೇ ಪ್ರಭಾಸ್ ಅವರ ಸಿನಿಮಾದ ಪೋಸ್ಟರ್ಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಪರೋಕ್ಷವಾಗಿ ತಾವು ‘ಸ್ಪಿರಿಟ್’ ಸಿನಿಮಾನಲ್ಲಿ ನಟಿಸುತ್ತಿರುವುದಾಗಿಯೂ ಹೇಳಿದ್ದರು. ಆದರೆ ಇದೀಗ ಹಠಾತ್ತನೆ ಡಾನ್ ಲೀ ‘ಸ್ಪಿರಿಟ್’ ಸಿನಿಮಾನಲ್ಲಿ ನಟಿಸುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.
ಆರಂಭದಲ್ಲಿ ಡಾನ್ ಲೀ ಅವರನ್ನು ಸಿನಿಮಾನಲ್ಲಿ ಹಾಕಿಕೊಳ್ಳಲು ಸಂದೀಪ್ ರೆಡ್ಡಿ ವಂಗಾ ಆಸಕ್ತರಾಗಿದ್ದರಂತೆ. ಆ ಬಗ್ಗೆ ಮಾತುಕತೆಯೂ ಆಗಿತ್ತಂತೆ. ಆದರೆ ಚಿತ್ರಕತೆ ಬೆಳೆದಂತೆ ಕತೆಯಲ್ಲಿ ಡಾನ್ ಲೀ ಅವರಿಗೆ ಹೊಂದಿಕೆ ಆಗುವ ಪಾತ್ರವೇ ಇಲ್ಲವಾಯ್ತಂತೆ. ಆರಂಭದಲ್ಲಿ ಇದ್ದ ಕತೆ ಚಿತ್ರಕತೆ ಹಂತಕ್ಕೆ ಬಂದಾಗ ಬದಲಾವಣೆ ಆಗಿದ್ದು, ಡಾನ್ ಲೀ ಅವರಿಗಾಗಿ ಯೋಜಿಸಿದ್ದ ಪಾತ್ರ ಇಲ್ಲವಾಯ್ತಂತೆ. ಈಗ ‘ಸ್ಪಿರಿಟ್’ ಹೈದರಾಬಾದ್ ಹಿನ್ನೆಲೆಯುಳ್ಳ ಸಿನಿಮಾ ಮಾತ್ರವೇ ಆಗಿದ್ದು, ಈ ಸಿನಿಮಾನಲ್ಲಿ ಡಾನ್ ಲೀ ಅವರಂಥ ವಿದೇಶಿ ವ್ಯಕ್ತಿಯ ಪಾತ್ರಕ್ಕೆ ಅವಕಾಶ ಇಲ್ಲವಾಗಿದೆ. ಡಾನ್ ಲೀ ಕೊರಿಯನ್ ಚಿತ್ರರಂಗದ ಬಲು ದೊಡ್ಡ ನಟ. ‘ಟ್ರೈನ್ ಟು ಬೂಸಾನ್’, ‘ನೇಮ್ಲೆಸ್ ಗ್ಯಾಂಗ್ಸ್ಟರ್’, ಹಾಲಿವುಡ್ನ ‘ಎಟರ್ನಲ್ಸ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ಸಲ್ಮಾನ್ ಖಾನ್ – ನಯನತಾರಾ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್
‘ಸ್ಪಿರಿಟ್’ ಸಿನಿಮಾನಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ದೀಪಿಕಾ ಪಡುಕೋನೆ ಬದಲಿಗೆ ಬಾಲಿವುಡ್ ನಟಿ ತೃಪ್ತಿ ದಿಮ್ರಿ ಈ ಸಿನಿಮಾದ ನಾಯಕಿ ಆಗಿದ್ದಾರೆ. ಸಿನಿಮಾವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ‘ಅರ್ಜುನ್ ರೆಡ್ಡಿ’, ‘ಅನಿಮಲ್’ ಸಿನಿಮಾಗಳ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ