
ನಟ ವಿಜಯ್ ದೇವರಕೊಂಡ (Vijay Deverakonda) ಅವರು ಒಂದು ಬಿಗ್ ಹಿಟ್ ಸಲುವಾಗಿ ಕಾದಿದ್ದಾರೆ. ಈ ಹಿಂದೆ ಅವರು ನಟಿಸಿದ್ದ ‘ಲೈಗರ್’ ಸಿನಿಮಾ ಮಕಾಡೆ ಮಲಗಿತು. ಆ ಬಳಿಕ ಬಂದ ‘ಖುಷಿ’ ಚಿತ್ರ ಕೂಡ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ಈಗ ಅವರು ನಟಿಸಿರುವ ‘ಫ್ಯಾಮಿಲಿ ಸ್ಟಾರ್’ ಸಿನಿಮಾ (Family Star Movie) ಬಿಡುಗಡೆ ಆಗಿದೆ. ಏಪ್ರಿಲ್ 5ರಂದು ತೆರೆಕಂಡಿರುವ ಈ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ವಿಜಯ್ ದೇವರಕೊಂಡ ಅವರ ಅಪ್ಪಟ ಅಭಿಮಾನಿಗಳು ಈ ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಒಂದಷ್ಟು ಜನರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಟ್ವಿಟರ್ ಮೂಲಕ ನೆಟ್ಟಿಗರು ತಮ್ಮ ವಿಮರ್ಶೆ (Family Star Twitter Review) ತಿಳಿಸುತ್ತಿದ್ದಾರೆ.
‘80ರ ದಶಕದ ಹಳೇ ಕಥೆ. ಸಿಲ್ಲಿ ಎನಿಸುವ ಸನ್ನಿವೇಶಗಳ ಜೊತೆ ಸಿಕ್ಕಾಪಟ್ಟೆ ಬೋರಿಂಗ್ ಆದಂತಹ ನಿರೂಪಣೆ. ಸುಮಾರು 3 ಗಂಟೆ ಅವಧಿಯ ಈ ಸಿನಿಮಾದಲ್ಲಿ 2 ಹಾಡು, ಮಧ್ಯಂತರದ ದೃಶ್ಯ, ಕೆಲವು ಕಾಮಿಡಿ ಸನ್ನಿವೇಶ ಮಾತ್ರ ಚೆನ್ನಾಗಿವೆ. ಭಾವನಾತ್ಮಕವಾಗಿ ಕಿಂಚಿತ್ತೂ ಕನೆಕ್ಟ್ ಆಗುವುದಿಲ್ಲ. ಕಳಪೆಯಾಗಿದೆ’ ಎಂದು ಪ್ರೇಕ್ಷಕರೊಬ್ಬರು ಖಾರವಾಗಿ ‘ಫ್ಯಾಮಿಲಿ ಸ್ಟಾರ್’ ಚಿತ್ರವನ್ನು ವಿಮರ್ಶೆ ಮಾಡಿದ್ದಾರೆ.
ಹಲವು ಕಡೆಗಳಲ್ಲಿ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಹೌಸ್ಫುಲ್ ಆಗಿದೆ. ಕೆಲವರಿಗೆ ಈ ಸಿನಿಮಾ ಕಿಂಚಿತ್ತೂ ಇಷ್ಟ ಆಗಿಲ್ಲ. ವಿಜಯ್ ದೇವರಕೊಂಡ ಸಾಲು ಸಾಲು ಡಿಸಾಸ್ಟರ್ ಅನುಭವಿಸುತ್ತಿದ್ದಾರೆ ಎಂದು ಅನೇಕರು ಪೋಸ್ಟ್ ಮಾಡಿದ್ದಾರೆ. ಅವರ ಮುಂದಿನ ಸಿನಿಮಾಗಳ ಮೇಲೆ ಇದು ಪರಿಣಾಮ ಬೀರಲಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಅಪ್ಪಟ ಅಭಿಮಾನಿಗಳು ಮಾತ್ರ ಈ ಚಿತ್ರಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
‘ಇದು ಅನಗತ್ಯ ಫ್ಯಾಮಿಲಿ ಡ್ರಾಮಾದ ರೀತಿ ಇದೆ. ಮೊದಲಾರ್ಧ ಚನ್ನಾಗಿದೆ. ಆದರೆ ದ್ವಿತೀಯಾರ್ಧವನ್ನು ಉತ್ತಮಗೊಳಿಸಬಹುದಿತ್ತು’ ಎಂದು ಪ್ರೇಕ್ಷಕರೊಬ್ಬರು ಅನಿಸಿಕೆ ಹಂಚಿಕೊಂಡಿದ್ದಾರೆ.
ನಟಿ ಮೃಣಾಲ್ ಠಾಕೂರ್ ಅವರಿಗೆ ಇದು ತೆಲುಗಿನಲ್ಲಿ ಮೂರನೇ ಸಿನಿಮಾ. ಈ ಮೊದಲು ಅವರು ‘ಸೀತಾ ರಾಮಂ’ ಮತ್ತು ‘ಹಾಯ್ ನಾನ್ನ’ ಚಿತ್ರಗಳ ಮೂಲಕ ಗೆಲುವು ಕಂಡಿದ್ದರು. ಆದರೆ ಈಗ ಅವರಿಗೆ ಟಾಲಿವುಡ್ನಲ್ಲಿ ಮೊದಲ ಬಾರಿ ಸೋಲು ಎದುರಾಗುತ್ತಿದೆ ಎಂದು ಕೂಡ ನೆಟ್ಟಿಗರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ‘ಅವತಾರ ಪುರುಷ 2’ ವಿಮರ್ಶೆ: ಓವರ್ ಆ್ಯಕ್ಟಿಂಗ್ ಅನಿಲನ ವಾಮಾಚಾರದ ಅಧ್ಯಾಯ
‘ಸಿನಿಮಾದ ಚಿತ್ರಕಥೆ ಔಟ್ಡೇಟೆಡ್ ಆಗಿದೆ. ತುಂಬ ಬೋರಿಂಗ್ ಆಗಿದೆ. ವಿಶೇಷವಾದದ್ದು ಈ ಸಿನಿಮಾದಲ್ಲಿ ಏನೂ ಇಲ್ಲ’ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಈ ಸಿನಿಮಾಗೆ ‘ಗೀತ ಗೋವಿಂದಂ’ ಖ್ಯಾತಿಯ ಪರಶುರಾಮ್ ಅವರು ನಿರ್ದೇಶನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದುನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.