‘ಚಿರಂಜೀವಿ ಸಿನಿಮಾದ ಆ ಸೀನ್​ನಿಂದ ವೈದ್ಯರ ನೆಮ್ಮದಿ ಹಾಳಾಗಿದೆ’

|

Updated on: Oct 20, 2024 | 3:04 PM

Chiranjeevi movie: ಮೆಗಾಸ್ಟಾರ್ ಚಿರಂಜೀವಿ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾದ ಬಗ್ಗೆ ಆಂಧ್ರ-ತೆಲಂಗಾಣದ ಅತ್ಯಂತ ಜನಪ್ರಿಯ ವೈದ್ಯರೊಬ್ಬರು ತಕರಾರು ತೆಗೆದಿದ್ದಾರೆ. ತೆಲುಗು ಚಿತ್ರ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸೀನ್ ಎಂದು ಸಿನಿಮಾದ ಸೀನ್ ಒಂದನ್ನು ವಿಮರ್ಶೆ ಮಾಡಿದ್ದಾರೆ.

‘ಚಿರಂಜೀವಿ ಸಿನಿಮಾದ ಆ ಸೀನ್​ನಿಂದ ವೈದ್ಯರ ನೆಮ್ಮದಿ ಹಾಳಾಗಿದೆ’
Follow us on

ಸಿನಿಮಾಗಳಲ್ಲಿ ಥ್ರಿಲ್ಲಿಂಗ್ ಅಂಶ ಸೃಷ್ಟಿಸಲು, ರೋಮಾಂಚಕತೆ, ನಾಯಕನನ್ನು ಎಲಿವೇಟ್ ಮಾಡಲು ತೋರಿಸಲಾಗುವ ಸನ್ನಿವೇಶಗಳು ಕೆಲವು ಬಾರಿ ಒಂದು ವೃತ್ತಿಯನ್ನು, ಇಡೀ ಸಮುದಾಯವನ್ನು ಸಮಸ್ಯೆಗೆ ನೂಕಬಹುದು. ಇದಕ್ಕೆ ಹಲವು ಉದಾಹರಣೆಗಳು ಇವೆ. ‘ದಂಡುಪಾಳ್ಯ’ ಸಿನಿಮಾ ಬಂದಾಗ ಈಗ ದಂಡುಪಾಳ್ಯದಲ್ಲಿ ವಾಸಿಸುತ್ತಿರುವ ಜನರು ಸಮಾಜದಲ್ಲಿ ಅವಮಾನ ಎದುರಿಸುವಂತಾಗಿತ್ತು. ‘ಟೈಗರ್’, ‘ಜವಾನ್’, ‘ವಾರ್’ ಅಂಥಹಾ ಸಿನಿಮಾಗಳನ್ನು ನೋಡಿ, ರಾ ಏಜೆಂಟ್​ಗಳ ಕೆಲಸ ಹೀಗೆಯೇ ಇರುತ್ತದೆ ಎಂದು ಅಂದುಕೊಂಡ ಜನರಿದ್ದಾರೆ. ತಮಿಳಿನ ‘ವಿಸಾರಣೈ’ ಸಿನಿಮಾ ನೋಡಿ ಪೊಲೀಸರೆಂದರೆ ಕ್ರೂರ ಜನ ಅಂದುಕೊಂಡವರೂ ಇದ್ದಾರೆ. ಹಾಗೆಯೇ ಕೆಲವೊಮ್ಮೆ ಕತೆಯ ಕಾರಣಕ್ಕೆ ಸೃಷ್ಟಿಸಿದ ಸೀನ್​ಗಳು ಒಂದು ವೃತ್ತಿಯ ಮೇಲೆ ಪ್ರಭಾವ ಬೀರಿದ್ದು ಇದೆ. ಮೆಗಾಸ್ಟಾರ್ ಚಿರಂಜೀವಿಯ ಸಿನಿಮಾ ಒಂದರಿಂದಾಗಿ ವೈದ್ಯರು ನೆಮ್ಮದಿ ಕಳೆದುಕೊಂಡಿರುವ ಸನ್ನಿವೇಶದ ಬಗ್ಗೆ ಖ್ಯಾತ ವೈದ್ಯರೊಬ್ಬರು ಮಾತನಾಡಿದ್ದಾರೆ.

ಆಂಧ್ರ, ತೆಲಂಗಾಣದ ಅತ್ಯಂತ ಜನಪ್ರಿಯ ಹೃದ್ರೋಗ ತಜ್ಞ ಗುರುವ ರೆಡ್ಡಿ ಇತ್ತೀಚೆಗೆ ಪಾಡ್​ಕಾಸ್ಟ್ ಒಂದರಲ್ಲಿ ಭಾಗಿಯಾಗಿ ಆರೋಗ್ಯ, ಹೃದಯ ಸಮಸ್ಯೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ವೈದ್ಯರ ಮೇಲಾಗುತ್ತಿರುವ ದಾಳಿಗಳು, ವೈದ್ಯ ವೃತ್ತಿಯಲ್ಲಿರುವವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿಯೂ ಮಾತನಾಡಿದ್ದು, ಚಿರಂಜೀವಿ ಸಿನಿಮಾದ ದೃಶ್ಯವೊಂದನ್ನು ಉಲ್ಲೇಖಿಸಿ ಆ ಸಿನಿಮಾ ಬಿಡುಗಡೆ ಆದಾಗಿನಿಂದಲೂ ವೈದ್ಯರ ನೆಮ್ಮದಿ ಹಾಳಾಗಿದೆ ಎಂದಿದ್ದಾರೆ.

ಚಿರಂಜೀವಿ ನಟಿಸಿರುವ ‘ಠಾಗೂರ್’ ಸಿನಿಮಾ 2003 ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಚಿರಂಜೀವಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಹೋರಾಟಗಾರನ ಪಾತ್ರ ನಿರ್ವಹಿಸಿದ್ದರು. ಸಿನಿಮಾದ ಒಂದು ಸೀನ್​ನಲ್ಲಿ ಸತ್ತ ಹೆಣವನ್ನು ವೈದ್ಯರು ಐಸಿಯುನಲ್ಲಿ ಇಟ್ಟುಕೊಂಡು ಚಿಕಿತ್ಸೆ ನೀಡುತ್ತಿರುವಂತೆ ನಾಟಕ ಮಾಡಿ ಲಕ್ಷಾಂತರ ರೂಪಾಯಿ ಹಣ ಕಟ್ಟಿಸಿಕೊಳ್ಳುತ್ತಾರೆ. ಚಿರಂಜೀವಿ ಅಂತಿಮದಲ್ಲಿ ಆ ವೈದ್ಯರಿಗೆ ಬುದ್ಧಿಹೇಳಿ, ಆಸ್ಪತ್ರೆಗೆ ಬಾಗಿಲು ಹಾಕಿಸುವ ದೃಶ್ಯವಿದೆ. ಆ ಸೀನ್​ನಿಂದಾಗಿ ವೈದ್ಯರು, ಆಸ್ಪತ್ರೆಗಳು ನೆಮ್ಮದಿ ಕಳೆದುಕೊಂಡಿವೆ ಎಂದು ಗುರುವ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ:ಊಟಿಯಲ್ಲಿ 6 ಎಕರೆ ಖರೀದಿಸಿದ ಚಿರಂಜೀವಿ; ಬೆಲೆ ಎಷ್ಟು?

‘ಆ ಸಿನಿಮಾ ಬಂದ ಬಳಿಕ ವೈದ್ಯರು ರೋಗಿಯನ್ನು ಐಸಿಯುಗೆ ಕರೆದುಕೊಂಡು ಹೋದರೆ ಸಾಕು ಅನುಮಾನ ಮೂಡುವಂತೆ ಆಗಿದೆ. ಒಂದೊಮ್ಮೆ ಐಸಿಯುನಲ್ಲಿ ರೋಗಿ ನಿಧನ ಹೊಂದಿದರಂತೂ ವೈದ್ಯರುಗಳು ಆ ವ್ಯಕ್ತಿ ಯಾವಾಗ ಸತ್ತ, ಏಕೆ ಸತ್ತ ಎಂದೆಲ್ಲ ರೋಗಿಗಳ ಕಡೆಯವರಿಗೆ ಪ್ರೂವ್ ಮಾಡಿ ತೋರಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಅಲ್ಲದೆ, ರೋಗಿಯನ್ನು ಹಣಕ್ಕಾಗಿಯೇ ಐಸಿಯುಗೆ ವರ್ಗಾಯಿಸಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ವಿವಿ ವಿನಾಯಕ್ ಸೃಷ್ಟಿಸಿರುವ ಅತ್ಯಂತ ಪೇಲವ ಮತ್ತು ಕೆಟ್ಟ ಸೀನ್ ಅದು’ ಎಂದಿದ್ದಾರೆ ಗುರುವಾ ರೆಡ್ಡಿ.

ಮಾತು ಮುಂದುವರೆಸಿ, ‘ಚಿರಂಜೀವಿ ನನ್ನ ಆತ್ಮೀಯ ಮಿತ್ರರು. ನಾವು ಆಗಾಗ್ಗೆ ಭೇಟಿ ಮಾಡುತ್ತಲೇ ಇರುತ್ತೇವೆ. ಸಿನಿಮಾದಲ್ಲಿ ಆ ದೃಶ್ಯ ಇನ್ನೂ ಕೆಟ್ಟದಾಗಿತ್ತಂತೆ ಚಿರಂಜೀವಿ ಅವರೇ ಸೀನ್ ಅನ್ನು ತುಸು ಟೋನ್ ಡೌನ್ ಮಾಡಿದ್ದಾರೆ. ಚಿರಂಜೀವಿ ಅವರಿಗೆ ವೈದ್ಯರ ಬಗ್ಗೆ ಅಪಾರ ಗೌರವ ಇದೆ’ ಎಂದಿದ್ದಾರೆ ಗುರುವಾ ರೆಡ್ಡಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ