
‘ರಾಮಾಯಣ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವಿಶ್ವಶ್ರೇಷ್ಠ ಸಂಗೀತ ನಿರ್ದೇಶಕರುಗಳಾಗಿರುವ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಅವರುಗಳು ಈ ಅದ್ಭುತ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ನಿನ್ನೆ (ಅಕ್ಟೋಬರ್ 21) ಚೆನ್ನೈನಲ್ಲಿ ಸಿನಿಮಾದ ಆಲ್ಬಂ ಲಾಂಚ್ ಇವೆಂಟ್ ಅನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ತಮಗೆ 12 ವರ್ಷದ ಹಿಂದೆ ಅಭಿಮಾನಿಯೊಬ್ಬ ಕಳಿಸಿದ್ದ ಇ-ಮೇಲ್ ಅನ್ನು ಓದಿ ಹೇಳಿದರು. ಅಭಿಮಾನಿ 12 ವರ್ಷದ ಹಿಂದೆಯೇ ರೆಹಮಾನ್ ಬಗ್ಗೆ ಭವಿಷ್ಯವೊಂದನ್ನು ನುಡಿದಿದ್ದು, ಅದು ಈಗ ನಿಜವಾಗಿದೆ. ಏನದು ಭವಿಷ್ಯ?
ರೆಹಮಾನ್ ಹೇಳಿದಂತೆ, ಅಭಿಮಾನಿಯೊಬ್ಬ 2014 ರಲ್ಲಿ ಅವರಿಗೆ ಇ-ಮೇಲ್ ಮಾಡಿ, ‘ನೀವು ‘ರಾಮಾಯಣ’ ಸಿನಿಮಾಕ್ಕೆ ಸಂಗೀತ ನೀಡುತ್ತೀರಿ’ ಎಂದಿದ್ದನಂತೆ. ಆ ಭವಿಷ್ಯ ಈಗ ನಿಜವಾಗಿದೆ. ಚೆನ್ನೈ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ರಹಮಾನ್, ‘ನಾನು ಒಂದಷ್ಟು ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. 2014ರಲ್ಲಿ ಸತೀಶ್ ಎಂಬುವರು, ನಾನು ಮುಂದೆ ‘ರಾಮಾಯಣ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದೇನೆ ಎಂದು ಭವಿಷ್ಯ ನುಡಿದಿದ್ದರು’ ಎಂದು ಹೇಳಿದರು. ಬಳಿಕ ಅವರು ಆ ಇಮೇಲ್ ಸಂದೇಶವನ್ನು ಓದಿಡಿದರು.
ಸತೀಶ್ ಬರೆದಿದ್ದ ಆ ಇಮೇಲ್‌ನಲ್ಲಿ ಹೀಗಿತ್ತು, ‘ಬೆಳಗ್ಗೆ ನೀವು ನನ್ನ ಕನಸಿನಲ್ಲಿ ಬಂದಿದ್ದೀರಿ. ಇದು ನಿಜವಾಗುತ್ತದೆ ಎಂದು ನಾನು ನಂಬುತ್ತೇನೆ. ನೀವು ಭಾರತಾದ್ಯಂತ ಮತ್ತು ವಿಶ್ವದಾದ್ಯಂತ ಮಹಾನ್ ಮಹಾಕಾವ್ಯವಾದ ‘ರಾಮಾಯಣ’ವನ್ನು ಪ್ರಸ್ತುತಪಡಿಸುತ್ತಾ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೀರಿ’ ಎಂದು ಬರೆಯಲಾಗಿತ್ತು. ಸತೀಶ್ ಎಂಬುವರು 2014 ರಲ್ಲೇ ಈ ಸಂದೇಶವನ್ನು ರೆಹಮಾನ್ ಅವರಿಗೆ ಕಳಿಸಿದ್ದರು. ಅದು ಈಗ ನಿಜವಾಗಿದೆ.
ಇದನ್ನೂ ಓದಿ:‘ರಾಮಾಯಣ’ ಮುಂಗಡ ಟಿಕೆಟ್ ಬುಕಿಂಗ್ ಶುರು, ನಿರೀಕ್ಷೆಗಿಂತಲೂ ಉತ್ತಮ ಆರಂಭ
‘ರಾಮಾಯಣ’ ಸಿನಿಮಾಕ್ಕೆ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡಿದ್ದಾರೆ. ಇಬ್ಬರೂ ಸಹ ಆಸ್ಕರ್ ವಿಜೇತರಾಗಿದ್ದು ವಿಶ್ವದ ಅತ್ಯುತ್ತಮ ಸಂಗೀತ ಸಂಯೋಕರಲ್ಲಿ ಪ್ರಮುಖರಾಗಿದ್ದಾರೆ. ಹಾಗಾಗಿ ಸಿನಿಮಾದ ಸಂಗೀತದ ಮೇಲೆ ಭಾರಿ ನಿರೀಕ್ಷೆಗಳು ಪ್ರೇಕ್ಷಕರಿಗೆ ಇದೆ. ಈಗಾಗಲೇ ಬಿಡುಗಡೆ ಆಗಿರುವ ‘ರಾಮಾಯಣ’ ಸಿನಿಮಾದ ಕೆಲ ಹಾಡುಗಳು ಮೆಚ್ಚುಗೆ ಗಳಿಸಿವೆ. ಆದರೆ ಇತ್ತೀಚೆಗೆ ಬಿಡುಗಡೆ ಆದ ‘ರಾವಣ ತಾಂಡವಂ’ಗೆ ನೀಡಿರುವ ಸಂಗೀತದ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಅದಕ್ಕೆ ಮುಂಚೆ ಬಿಡುಗಡೆ ಆದ ಕೆಲ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ.
‘ರಾಮಾಯಣ’ ಸಿನಿಮಾ ನವೆಂಬರ್ 5 ರಂದು ರಿಲೀಸ್ ಆಗುತ್ತಿದ್ದು, ನಿತೀಶ್ ತಿವಾರಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಮಿತ ಮಲ್ಹೋತ್ರಾ ನಿರ್ಮಾಣ ಮಾಡಿದ್ದಾರೆ. ಸಿನಿಮಾನಲ್ಲಿ ಯಶ್ ರಾವಣನ ಪಾತ್ರದಲ್ಲಿ ನಟನೆ ಮಾಡಿರುವ ಜೊತೆಗೆ ಸಹ ನಿರ್ಮಾಪಣವನ್ನೂ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ