
ನಟ ಕಮಲ್ ಹಾಸನ್ (Kamal Haasan) ಅವರು ‘ಥಗ್ ಲೈಫ್’ ಸಿನಿಮಾ ಮೇಲೆ ಸಖತ್ ಭರವಸೆ ಇಟ್ಟುಕೊಂಡಿದ್ದರು. ತಮ್ಮ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟ ಆಗಲಿದೆ ಎಂದು ಅವರು ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ. ಇಂದು (ಜೂನ್ 5) ಕರ್ನಾಟಕ ಹೊರತುಪಡಿಸಿ ಇನ್ನುಳಿದ ಕಡೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘ಥಗ್ ಲೈಫ್’ (Thug Life) ಸಿನಿಮಾ ನೋಡಿದ ಅನೇಕರು ನೆಗೆಟಿವ್ ವಿಮರ್ಶೆ ನೀಡಿದ್ದಾರೆ. ಇನ್ನೂ ಕೆಲವರು ಹೀನಾಯವಾಗಿ ಟ್ರೋಲ್ ಮಾಡುತ್ತಿದ್ದಾರೆ. ಇದರ ನಡುವೆ ದುಲ್ಕರ್ ಸಲ್ಮಾನ್ (Dulquer Salmaan) ಮತ್ತು ರವಿ ಮೋಹನ್ ಅವರ ಹೆಸರುಗಳನ್ನು ಕೂಡ ಎಳೆದು ತರುತ್ತಿದ್ದಾರೆ. ಅದಕ್ಕೆ ಕಾರಣ ಇದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಥಗ್ ಲೈಫ್’ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಮತ್ತು ರವಿ ಮೋಹನ್ ಅವರು ನಟಿಸಬೇಕಿತ್ತು. 2023ರಲ್ಲಿ ಈ ಸಿನಿಮಾ ಅನೌನ್ಸ್ ಆಯಿತು. ಬಳಿಕ ಕಮಲ್ ಹಾಸನ್ ಜೊತೆ ನಟಿಸಲು ದುಲ್ಕರ್ ಸಲ್ಮಾನ್ ಮತ್ತು ರವಿ ಮೋಹನ್ ಅವರಿಗೆ ಆಫರ್ ನೀಡಲಾಗಿತ್ತು. ಮೊದಲಿಗೆ ಅವರು ಒಪ್ಪಿಕೊಂಡಿದ್ದರು. ಆದರೆ ನಂತರ ಚಿತ್ರತಂಡದಿಂದ ಹೊರನಡೆದರು.
ಡೇಟ್ಸ್ ಹೊಂದಾಣಿಕೆ ಆಗುತ್ತಿಲ್ಲ ಎಂಬ ಕಾರಣಕ್ಕೆ ‘ಥಗ್ ಲೈಫ್’ ಸಿನಿಮಾವನ್ನು ದುಲ್ಕರ್ ಸಲ್ಮಾನ್ ಹಾಗೂ ರವಿ ಮೋಹನ್ ಕೈಬಿಟ್ಟರು. ಆ ಸಂದರ್ಭದಲ್ಲಿ ಅವರನ್ನು ಕೆಲವರು ಟೀಕಿಸಿದ್ದರು. ನಿರ್ದೇಶಕ ಮಣಿರತ್ನಂ ಮತ್ತು ನಟ ಕಮಲ್ ಹಾಸನ್ ಅವರಂತಹ ಹಿರಿಯರ ಜೊತೆ ಕೆಲಸ ಮಾಡುವ ಅವಕಾಶವನ್ನು ದುಲ್ಕರ್ ಸಲ್ಮಾನ್ ಹಾಗೂ ರವಿ ಮೋಹನ್ ಕಳೆದುಕೊಂಡರು ಎಂದು ಟೀಕಿಸಲಾಗಿತ್ತು. ಆದರೆ ಈಗ ಪ್ರೇಕ್ಷಕರ ಅಭಿಪ್ರಾಯ ಬದಲಾಗಿದೆ.
Overseas reviews for #ThugLife are turning out to be disappointing❗
Looks like #DulquerSalmaan and #RaviMohan dodged a bullet.pic.twitter.com/c70NRbIohO
— Mohammed Ihsan (@ihsan21792) June 5, 2025
‘ಥಗ್ ಲೈಫ್’ ಸಿನಿಮಾ ನೋಡಿ ಬಂದ ಬಳಿಕ ಜನರು ವಿವಿಧ ಬಗೆಯಲ್ಲಿ ಪ್ರತಿಕ್ರಿಯೆ ತಿಳಿಸುತ್ತಿದ್ದಾರೆ. ದುಲ್ಕರ್ ಸಲ್ಮಾನ್ ಮತ್ತು ರವಿ ಮೋಹನ್ ಅವರು ಈ ಸಿನಿಮಾದಿಂದ ಹೊರಬಂದಿದ್ದು ಒಳ್ಳೆಯದೇ ಆಯಿತು ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹಲವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ
ಈ ಸಿನಿಮಾದ ಪ್ರಚಾರದ ವೇಳೆ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದರಿಂದ ಕನ್ನಡಿಗರು ಗರಂ ಆದರು. ಪರಿಣಾಮವಾಗಿ ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾದ ಬಿಡುಗಡೆಗೆ ಅಡ್ಡಿ ಆಯಿತು. ಇದರಿಂದ, ನಿರ್ಮಾಪಕರೂ ಆಗಿರುವ ಕಮಲ್ ಹಾಸನ್ ಅವರಿಗೆ ಬಹುಕೋಟಿ ರೂಪಾಯಿ ನಷ್ಟ ಆಗಿದೆ. ಅದರ ಬೆನ್ನಲ್ಲೇ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಕೂಡ ಸಿಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.