50 ಕೋಟಿ ರೂಪಾಯಿ ಸಂಭಾವನೆ ಕಡಿಮೆ ಮಾಡಿಕೊಂಡ ಪ್ರಭಾಸ್; ಕಾರಣ ಏನು?
ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರು ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ‘ದಿ ರಾಜಾ ಸಾಬ್’ ಚಿತ್ರಕ್ಕಾಗಿ ಅವರು ತಮ್ಮ ಸಂಭಾವನೆಯಲ್ಲಿ 50 ಕೋಟಿ ರೂಪಾಯಿ ಕಡಿಮೆ ಮಾಡಿಕೊಂಡಿದ್ದಾರೆ. ಈ ಸಿನಿಮಾಗೆ ಪ್ರಭಾಸ್ ಅವರು ಪಡೆದ ಸಂಭಾವನೆ ಎಷ್ಟು? ಆ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ..

ನಟ ಪ್ರಭಾಸ್ (Prabhas) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೋಲು-ಗೆಲುವು ಏನೇ ಇದ್ದರೂ ಪ್ರಭಾಸ್ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಈಗ ಅವರು ‘ದಿ ರಾಜಾ ಸಾಬ್’ (The Raja Saab) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಪ್ರಭಾಸ್ ಅವರ ವೃತ್ತಿ ಜೀವನದಲ್ಲಿ ಡಿಫರೆಂಟ್ ಸಿನಿಮಾ. ಹಾರರ್ ಕಹಾನಿ ಇರುವ ಈ ಸಿನಿಮಾ ಮೇಲೆ ಪ್ರಭಾಸ್ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ಪ್ರಭಾಸ್ ಅವರು ‘ದಿ ರಾಜಾ ಸಾಬ್’ ಸಿನಿಮಾಗೆ ಕಡಿಮೆ ಸಂಬಳ (Remuneration) ಪಡೆದಿದ್ದಾರೆ ಎನ್ನಲಾಗಿದೆ.
‘ಬಾಹುಬಲಿ’ ಸಿನಿಮಾ ಗೆದ್ದ ಬಳಿಕ ಪ್ರಭಾಸ್ ಅವರಿಗೆ ಇದ್ದ ಬೇಡಿಕೆ ಒಮ್ಮೆಲೆ ಹೆಚ್ಚಾಯಿತು. ಏಕಾಏಕಿ ಅವರು ಸಂಭಾವನೆ ಜಾಸ್ತಿ ಮಾಡಿಕೊಂಡರು. ಒಂದು ಸಿನಿಮಾಗೆ ಪ್ರಭಾಸ್ ಅವರು ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ‘ದಿ ರಾಜಾ ಸಾಬ್’ ಸಿನಿಮಾ ವಿಚಾರದಲ್ಲಿ ಅವರು ವಿನಾಯಿತಿ ನೀಡಿದ್ದಾರೆ. ಈ ಚಿತ್ರಕ್ಕೆ ಅವರು ಕೇವಲ 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಸುದ್ದಿ ಆಗಿದೆ.
ಅಷ್ಟಕ್ಕೂ ಪ್ರಭಾಸ್ ಅವರು 50 ಕೋಟಿ ರೂಪಾಯಿ ಸಂಭಾವನೆ ಕಡಿಮೆ ಮಾಡಿಕೊಳ್ಳಲು ಕಾರಣ ಏನು? ಈ ಸಿನಿಮಾವನ್ನು ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಸಂಸ್ಥೆಯು ನಿರ್ಮಾಣ ಮಾಡುತ್ತಿದೆ. ಈ ಹಿಂದೆ ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾದ ತೆಲುಗು ವಿತರಣೆ ಹಕ್ಕುಗಳನ್ನು ಪಡೆದು ಈ ಸಂಸ್ಥೆ ಕೈ ಸುಟ್ಟುಕೊಂಡಿತ್ತು. ಆ ಕಾರಣದಿಂದ ಪ್ರಭಾಸ್ ಅವರು ಈಗ ಸಂಭಾವನೆ ಕಡಿಮೆ ಮಾಡಿಕೊಂಡಿರಬಹುದು.
ಕಾರಣಾಂತರಗಳಿಂದ ‘ದಿ ರಾಜಾ ಸಾಬ್’ ಸಿನಿಮಾದ ಕೆಲಸಗಳು ವಿಳಂಬ ಆದವು. ಈ ಚಿತ್ರಕ್ಕೆ ಮಾರುತಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಅವರಿಗೆ ಈ ಚಿತ್ರದಲ್ಲಿ ಡಿಫರೆಂಟ್ ಗೆಟಪ್ ಇದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 10ರಂದು ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಬಿಡುಗಡೆ ದಿನಾಂಕ ಮುಂದೂಡಿಕೆ ಆಯಿತು. ಡಿಸೆಂಬರ್ 5ರಂದು ‘ದಿ ರಾಜಾ ಸಾಬ್’ ಸಿನಿಮಾ ರಿಲೀಸ್ ಆಗಲಿದೆ.
ಇದನ್ನೂ ಓದಿ: ‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್ಗೆ ಜೋಡಿಯಾದ ‘ಅನಿಮಲ್’ ನಟಿ ತೃಪ್ತಿ ದಿಮ್ರಿ
ಇದೇ ಮೊದಲ ಬಾರಿಗೆ ಪ್ರಭಾಸ್ ಅವರು ಹಾರರ್ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ‘ದಿ ರಾಜಾ ಸಾಬ್’ ಸಿನಿಮಾದ ಮೊದಲ ವಿಶೇಷತೆ. ‘ಕಣ್ಣಪ್ಪ’ ಸಿನಿಮಾದಲ್ಲಿ ಅವರು ವಿಶೇಷ ಪಾತ್ರ ಮಾಡಿದ್ದಾರೆ. ಅಲ್ಲದೇ, ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಸ್ಪಿರಿಟ್’ ಸಿನಿಮಾಗೂ ಪ್ರಭಾಸ್ ಅವರು ಹೀರೋ ಆಗಿದ್ದಾರೆ. ಆ ಸಿನಿಮಾ ಇನ್ನಷ್ಟೇ ಸೆಟ್ಟೇರಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.