ಪ್ರಭಾಸ್ ಮುಂದಿಟ್ಟುಕೊಂಡು ಬಾಲಿವುಡ್ ಮೇಲೆ ಪ್ರತೀಕಾರಕ್ಕೆ ಮುಂದಾದರೇ ಸಂದೀಪ್ ರೆಡ್ಡಿ ವಂಗಾ
Sandeep Reddy Vanga: ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ತಮ್ಮ ಸಿನಿಮಾಗಳ ರೀತಿಯೇ ಅವರು ಸಹ ವೈಯಲೆಂಟ್. ‘ಅನಿಮಲ್’ ಸಿನಿಮಾದ ಬಳಿಕ ಹಲವು ಬಾರಿ ಅವರು ಬಾಲಿವುಡ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ‘ಸ್ಪಿರಿಟ್’ ಸಿನಿಮಾ ಮಾಡುತ್ತಿರುವ ಸಂದೀಪ್ ರೆಡ್ಡಿ ವಂಗಾ, ಬಾಲಿವುಡ್ ಬಗ್ಗೆ ತಮಗಿರುವ ಸಿಟ್ಟನ್ನು ಸಿನಿಮಾ ಮೂಲಕ ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಸಂದೀಪ್ ರೆಡ್ಡಿ ವಂಗಾ (Sandeep Reddy Vanga), ಅವರ ಸಿನಿಮಾಗಳ ರೀತಿಯಲ್ಲಿಯೇ ಅವರ ವ್ಯಕ್ತಿತ್ವವೂ ತುಸು ವೈಯಲೆಂಟ್. ಮೊದಲಿಗೆ ಸಿಬಿಎಫ್ಸಿ ಆ ನಂತರ ಸಿನಿಮಾ ವಿಮರ್ಶಕರು ಬಳಿಕ ನಿರ್ಮಾಣ ಸಂಸ್ಥೆಗಳು, ಸ್ಯಾಟಲೈಟ್ ಹಕ್ಕು ಖರೀದಿದಾರರು ಹೀಗೆ ಹಲವರ ಮೇಲೆ ಮಾತಿನ ದಾಳಿ ನಡೆಸಿದ ಬಳಿಕ ಈಗ ಇಡೀ ಬಾಲಿವುಡ್ ಮೇಲೆ ಪ್ರತೀಕಾರಕ್ಕೆ ಮುಂದಾಗಿದ್ದಾರೆ ಸಂದೀಪ್ ರೆಡ್ಡಿ ವಂಗಾ. ಅದೂ ಪ್ರಭಾಸ್ ಅಂಥಹಾ ಸ್ಟಾರ್ ನಟನ ಮುಂದಿಟ್ಟುಕೊಂಡು!
ಸಂದೀಪ್ ರೆಡ್ಡಿ ವಂಗಾ, ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡುತ್ತಿರುವ ವಿಷಯ ಗೊತ್ತಿರುವುದೇ. ಈ ಸಿನಿಮಾದ ನಾಯಕಿಯನ್ನಾಗಿ ದೀಪಿಕಾ ಪಡುಕೋಣೆಯನ್ನು ಆಯ್ಕೆ ಮಾಡಿದ್ದರು ಸಂದೀಪ್. ಆದರೆ ದೀಪಿಕಾ, ಇತ್ತೀಚೆಗಷ್ಟೆ ತಾಯಿ ಆಗಿರುವ ಕಾರಣ ಶಿಫ್ಟ್ನಲ್ಲಿ ಬದಲಾವಣೆ, ಸೆಟ್ ವಾತಾವರಣ, ಸಂಭಾವನೆ ಇತ್ಯಾದಿ ವಿಷಯವಾಗಿ ಕೆಲ ಬೇಡಿಕೆಗಳನ್ನು ಇರಿಸಿದರಂತೆ. ಇದೇ ಕಾರಣಕ್ಕೆ ದೀಪಿಕಾರನ್ನು ಕೈಬಿಟ್ಟು ಈಗ ತೃಪ್ತಿ ದಿಮ್ರಿಯನ್ನು ಹಾಕಿಕೊಂಡಿದ್ದಾರೆ.
ಅದು ಒತ್ತಟ್ಟಿಗಿರಲಿ, ‘ಸ್ಪಿರಿಟ್’ ಸಿನಿಮಾವನ್ನು ಪ್ಯಾನ್ ವರ್ಲ್ಡ್ ಮಾಡಲು ಮುಂದಾಗಿರುವ ಸಂದೀಪ್ ರೆಡ್ಡಿ ವಂಗಾ, ತೆಲುಗು, ತಮಿಳು, ಮಲಯಾಳಂ, ಚೀನಾ, ಮಲಯಾಳಂ, ಜಪಾನಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆದರೆ ‘ಸ್ಪಿರಿಟ್’ ಸಿನಿಮಾವನ್ನು ಹಿಂದಿಗೆ ಮಾತ್ರ ಡಬ್ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ತೆಲುಗು ಸಿನಿಮಾಗಳಿಗೆ ಹಿಂದಿ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಹಾಗಿದ್ದರೂ ಸಹ ಸಂದೀಪ್ ರೆಡ್ಡಿ ವಂಗಾ ‘ಸ್ಪಿರಿಟ್’ ಸಿನಿಮಾ ಅನ್ನು ಹಿಂದಿಯಲ್ಲಿ ಬಿಡುಗಡೆ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಇನ್ನಷ್ಟೆ ಖಾತ್ರಿ ಸಿಗಬೇಕಿದೆ. ಮಾತ್ರವಲ್ಲದೆ, ಬಾಲಿವುಡ್ನ ಕೆಲ ವ್ಯಕ್ತಿಗಳನ್ನು, ಕೆಲ ಪದ್ಧತಿಗಳನ್ನು ‘ಸ್ಪಿರಿಟ್’ ಸಿನಿಮಾನಲ್ಲಿ ಟೀಕೆ ಮಾಡಲಿದ್ದಾರಂತೆ.
ಇದನ್ನೂ ಓದಿ:‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್ಗೆ ಜೋಡಿಯಾದ ‘ಅನಿಮಲ್’ ನಟಿ ತೃಪ್ತಿ ದಿಮ್ರಿ
ಈಗಾಗಲೇ ಅವರು ಹಿಂದಿ ಚಿತ್ರರಂಗದ ಬಗ್ಗೆ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಅನಿಮಲ್’ ಸಿನಿಮಾ ಅನ್ನು ಹೇಗೆ ತುಳಿಯಲು ಬಾಲಿವುಡ್ನ ಕೆಲವರು ಯತ್ನಿಸಿದರು. ನನ್ನ ಜೊತೆಗೆ ಕೆಲಸ ಮಾಡಿದ ನಟರಿಗೆ ಬೇರೆ ಸಿನಿಮಾದಲ್ಲಿ ಅವಕಾಶ ಕೊಡಲಿಲ್ಲ. ನನ್ನನ್ನು ಹೇಗೆಲ್ಲ ಗೋಳು ಹೊಯ್ದುಕೊಂಡರು ಎಂದೆಲ್ಲ ಈಗಾಗಲೇ ಸಂದೀಪ್ ಹೇಳಿದ್ದಾರೆ. ಅದೇ ಕಾರಣಕ್ಕೆ ಈಗ ತಮ್ಮ ಸಿನಿಮಾವನ್ನು ಹಿಂದಿಗೆ ಡಬ್ ಮಾಡದೇ ಇರಲು ಆ ಮೂಲಕ ಪ್ರಚಾರಕ್ಕೂ ಸಹ ಬಾಲಿವುಡ್ಗೆ ಹೋಗದೇ ಇರಲು ಸಂದೀಪ್ ರೆಡ್ಡಿ ವಂಗಾ ನಿರ್ಧಾರ ಮಾಡಿದ್ದಾರೆ.
‘ಸ್ಪಿರಿಟ್’ ಸಿನಿಮಾ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಕತೆಯನ್ನು ಒಳಗೊಂಡಿದ್ದು, ಪ್ರಾಮಾಣಿಕ ಅಧಿಕಾರಿ ಅಂತರಾಷ್ಟ್ರೀಯ ಡಾನ್ ಒಬ್ಬನಿಂದಾಗಿ ಉದ್ಯೋಗ ಕಳೆದುಕೊಂಡು ಕೊನೆಗೆ ಆ ಡಾನ್ ಅನ್ನು ಹುಡುಕಾಡಿಕೊಂಡು ಹೋಗಿ ಭೇಟೆ ಆಗುವ ಕತೆಯನ್ನು ಒಳಗೊಂಡಿದೆ. ಸಿನಿಮಾದ ಚಿತ್ರೀಕರಣ ಇದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭ ಆಗಲಿದೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




