ಮೊದಲ ದಿನ ‘ಥಗ್ ಲೈಫ್’ ಕಲೆಕ್ಷನ್ ಎಷ್ಟು? ಕಮಲ್ ಹಾಸನ್ ಚಿತ್ರಕ್ಕೆ ಮುಂದಿದೆ ಕಷ್ಟ
ವಿವಾದದಿಂದಲೇ ಸಖತ್ ಸುದ್ದಿ ಆಗಿದ್ದ ‘ಥಗ್ ಲೈಫ್’ ಚಿತ್ರವು ಕರ್ನಾಟಕ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಬಿಡುಗಡೆ ಆಗಿದೆ. ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕಿದೆ. ತಮಿಳು ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ತೆಗಳುತ್ತಿದ್ದಾರೆ. ಮೊದಲ ದಿನ ಉತ್ತಮ ಕಲೆಕ್ಷನ್ ಆಗಿದ್ದರೂ ಕೂಡ ಮುಂದಿನ ದಿನಗಳಲ್ಲಿ ಕಲೆಕ್ಷನ್ ತಗ್ಗುವ ಸಾಧ್ಯತೆ ದಟ್ಟವಾಗಿದೆ.

ಕಾಲಿವುಡ್ ನಟ ಕಮಲ್ ಹಾಸನ್ (Kamal Haasan) ಅಭಿನಯದ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗಿಲ್ಲ. ಆದರೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮುಂತಾದ ಕಡೆಗಳಲ್ಲಿ ಇಂದು (ಜೂನ್ 5) ತೆರೆಕಂಡಿದೆ. ಮಣಿರತ್ನಂ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕೆಲವು ಕಾರಣಗಳಿಂದಾಗಿ ಈ ಸಿನಿಮಾ ಸಖತ್ ಸುದ್ದಿ ಆಗಿತ್ತು. ಮೊದಲ ದಿನ ಎಷ್ಟು ಕಲೆಕ್ಷನ್ (Thug Life Box Office Collection) ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಮೊದಲ ದಿನ ‘ಥಗ್ ಲೈಫ್’ (Thug Life) ಸಿನಿಮಾಗೆ 14.94 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.
ಕಮಲ್ ಹಾಸನ್ ಮತ್ತು ಮಣಿರತ್ನಂ ಅವರು ಅನೇಕ ವರ್ಷಗಳ ಬಳಿಕ ಒಟ್ಟಾಗಿ ಸಿನಿಮಾ ಮಾಡಿದ್ದಾರೆ. ಆದ್ದರಿಂದ ಅಭಿಮಾನಿಗಳು ‘ಥಗ್ ಲೈಫ್’ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರು. ಪರಿಣಾಮವಾಗಿ, ತಮಿಳುನಾಡಿನಲ್ಲಿ ಫಸ್ಟ್ ಡೇ ಫಸ್ಟ್ ಶೋ ಬಹುತೇಕ ಕಡೆಗಳಲ್ಲಿ ಹೌಸ್ಫುಲ್ ಆಗಿದೆ. ಆದರೆ ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
Sacnilk ವರದಿ ಪ್ರಕಾರ, ‘ಥಗ್ ಲೈಫ್’ ಸಿನಿಮಾಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಅಂದಾಜು ಶೇಕಡ 50ರಷ್ಟು ಆಕ್ಯುಪೆನ್ಸಿ ಇತ್ತು. ಆದರೆ ಸಂಜೆ ವೇಳೆಗೆ ಪ್ರೇಕ್ಷಕರ ಪ್ರಮಾಣ ಕಡಿಮೆ ಆಯಿತು. ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಗಲು ಆರಂಭಿಸಿದ್ದರಿಂದ ಜನರ ಆಸಕ್ತಿ ಕಡಿಮೆ ಆಯಿತು. ಹಾಗಾಗಿ ಮುಂದಿನ ದಿನಗಳಲ್ಲಿ ಈ ಚಿತ್ರದ ಕಲೆಕ್ಷನ್ ಗಣನೀಯವಾಗಿ ಕುಸಿಯುವ ಸಾಧ್ಯತೆ ಇದೆ. ಮೊದಲ ದಿನ 14.94 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದರೂ ಕೂಡ ಚಿತ್ರತಂಡದವರು ಭಾರಿ ಸಂಭ್ರಮಪಡುವ ಪರಿಸ್ಥಿತಿ ಸದ್ಯಕ್ಕಿಲ್ಲ.
ಕನ್ನಡದ ಬಗ್ಗೆ ಕಮಲ್ ಹಾಸನ್ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾದ ಬಿಡುಗಡೆಗೆ ವಿರೋಧ ವ್ಯಕ್ತವಾಯಿತು. ಅದನ್ನು ಪ್ರಶ್ನಿಸಿ ಕಮಲ್ ಹಾಸನ್ ಅವರು ಹೈಕೋರ್ಟ್ ಮೆಟ್ಟಿಲೇರಿದರು. ಅಲ್ಲಿಯೂ ಕೂಡ ಅವರಿಗೆ ಹಿನ್ನಡೆ ಆಯಿತು. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಆಗದ ಕಾರಣ ಕಮಲ್ ಹಾಸನ್ ಅವರಿಗೆ 40 ಕೋಟಿ ರೂಪಾಯಿ ನಷ್ಟ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ‘ಥಗ್ ಲೈಫ್’ ಸಿನಿಮಾ ರಿಲೀಸ್ ವೇಳೆ ಬೆಂಗಳೂರಿಗರ ನೆನೆದು ಮರುಗಿದ ಕಮಲ್ ಹಾಸನ್
ಈ ಸಿನಿಮಾದಲ್ಲಿ ತ್ರಿಶಾ ಕೂಡ ನಟಿಸಿದ್ದಾರೆ. ಕಮಲ್ ಹಾಸನ್ ಅವರಿಗೆ ಈ ಸಿನಿಮಾ ಮೇಲೆ ತುಂಬ ಭರವಸೆ ಇತ್ತು. ಆದರೆ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟ ಆಗಿಲ್ಲ. ತಮಿಳಿನಾಡಿನಲ್ಲಿ ಕೂಡ ಜನರು ನೆಗೆಟಿವ್ ವಿಮರ್ಶೆ ನೀಡಿದ್ದಾರೆ. ಹಾಗಾಗಿ ಚಿತ್ರದ ಬಾಕ್ಸ್ ಆಫೀಸ್ ಭವಿಷ್ಯ ಕಷ್ಟದಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








