ಬ್ರಿಟೀಷರ ವಿರುದ್ಧ ಹೋರಾಡುವ ‘ಫೌಜಿ’; ಸ್ವತಂತ್ರ ಪೂರ್ವ ಕಥೆಯಲ್ಲಿ ಪ್ರಭಾಸ್
ನಟ ಪ್ರಭಾಸ್ ಹುಟ್ಟುಹಬ್ಬದ ವಿಶೇಷವಾಗಿ ಅವರ ಹೊಸ ಸಿನಿಮಾ 'ಫೌಜಿ'ಯ ಟೀಸರ್ ಬಿಡುಗಡೆಯಾಗಿದೆ. ಹನು ರಾಘವಪುಡಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಬ್ರಿಟಿಷರ ವಿರುದ್ಧ ಹೋರಾಡುವ ಗುಪ್ತಚರ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಾರ್ಚ್ 2027ರಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಆ ಬಗ್ಗೆ ಇಲ್ಲಿದೆ ವಿವರ.

ಮುಖ್ಯಾಂಶಗಳು
- ಫೌಜಿ ಟೀಸರ್ ರಿಲೀಸ್
- ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಭಾಸ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್
- ರೋಚಕ ಹಿನ್ನೆಲೆಯೊಂದಿಗೆ ಅನಾವರಣಗೊಂಡ ಪ್ರಭಾಸ್ ಪಾತ್ರ
ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ನಟನೆಯ ಬಹುನಿರೀಕ್ಷಿತ ‘ಫೌಜಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಹನು ರಾಘವಪುಡಿ ನಿರ್ದೇಶನದ ಈ ಚಿತ್ರವು ಎರಡನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಸಾಗುವ ಪೀರಿಯಡ್ ಸ್ಪೈ ಥ್ರಿಲ್ಲರ್ ಆಗಿದೆ. ಬ್ರಿಟಿಷರ ವಿರುದ್ಧ ಹೋರಾಡುವ ಭಾರತೀಯ ಗೂಢಚಾರನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ.
ಜರ್ಮನಿಯಲ್ಲಿ ಟೀಸರ್ ಆರಂಭ ಆಗುತ್ತದೆ. ಸುಭಾಷ್ ಚಂದ್ರ ಬೋಸ್ ಹಾಗೂ ಅಡಾಲ್ಫ್ ಹಿಟ್ಲರ್ ನಡುವಿನ ಮಾತುಕತೆ ಇದೆ. ಭಾರತೀಯರ ಸ್ವಾತಂತ್ರ್ಯ ಹೋರಾಟದ ಸಾಮರ್ಥ್ಯವನ್ನು ಹಿಟ್ಲರ್ ಪ್ರಶ್ನಿಸುತ್ತಾನೆ. ಆದರೆ ಬೋಸ್ ಅವರು ಭಾರತೀಯರ ಗುಪ್ತಚರ ಸಾಮರ್ಥ್ಯ ಮತ್ತು ದೇಶಪ್ರೇಮವನ್ನು ಸಮರ್ಥಿಸಿಕೊಳ್ಳುತ್ತಾರೆ. ಜರ್ಮನಿಯ ಎನಿಗ್ಮಾ ಕೋಡ್ ಗಿಂತಲೂ ಕಠಿಣವಾದ ಭಗವದ್ಗೀತೆ ಆಧಾರಿತ ಕೋಡ್ ಅನ್ನು ಭಾರತೀಯ ಗೂಢಚಾರ ಸೃಷ್ಟಿಸಿದ್ದಾನೆ ಎಂದು ಬೋಸ್ ವಿವರಿಸುತ್ತಾರೆ.
ಬ್ರಿಟಿಷರ ನಿದ್ದೆಗೆಡಿಸಿರುವ ಈ ರಹಸ್ಯ ಗುಪ್ತಚರ ಅಧಿಕಾರಿಗೆ ಬ್ರಿಟಿಷರು ‘ಫೌಜಿ’ ಎಂದು ಕರೆಯುತ್ತಾರೆ. ಕಲ್ಕತ್ತಾದಲ್ಲಿ ಮಾತೃಭೂಮಿಯ ರಕ್ಷಣೆಯಲ್ಲಿ ತೊಡಗಿರುವ ಫೌಜಿ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಸ್ಟೈಲಿಶ್ ಲುಕ್ ನಲ್ಲಿ ಬಂದೂಕು ಹಿಡಿದು ಪ್ರಭಾಸ್ ಕಾಣಿಸಿಕೊಳ್ಳುವ ದೃಶ್ಯಗಳು ಗಮನ ಸೆಳೆಯುತ್ತವೆ. ಬ್ರಿಟಿಷರ ವಿರುದ್ಧ ರಕ್ತ ಹರಿಸಿ ಸ್ವಾತಂತ್ರ್ಯ ಪಡೆದುಕೊಳ್ಳುವುದಾಗಿ ಪ್ರಭಾಸ್ ಮಾಸ್ ಡೈಲಾಗ್ ಹೊಡೆದಿದ್ದಾರೆ. ಸಿನಿಮಾದ ಕಥೆ ಸಾಗೋದು 1942ರಲ್ಲಿ ಅನ್ನೋದು ವಿಶೇಷ.
ಮೈತ್ರಿ ಮೂವೀ ಮೇಕರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಬಂಡವಾಳ ಹೂಡಿದ್ದಾರೆ. ಟಿ-ಸೀರಿಸ್ ಫಿಲ್ಮ್ಸ್ ಈ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದೆ. ಮೊದಲು ಡಿಸೆಂಬರ್ 2026ಕ್ಕೆ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ, ಈಗ ಮುಂದೂಡಲ್ಪಟ್ಟಿದೆ.
ಇದನ್ನೂ ಓದಿ: ಪ್ರಭಾಸ್ಗೆ ಪ್ರಶಾಂತ್ ನೀಲ್ ಪಂಚ್, ‘ಸಲಾರ್ 2’ ಬಗ್ಗೆಯೂ ಮಾತು
ಮಾರ್ಚ್ 19ರಂದು ಈ ಚಿತ್ರವು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಪ್ರಭಾಸ್ ಅಭಿಮಾನಿಗಳು ಈ ಅದ್ದೂರಿ ಆಕ್ಷನ್ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಬೋಸ್ ಮತ್ತು ಹಿಟ್ಲರ್ ನಡುವಿನ ಸಂಭಾಷಣೆಯು ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:46 am, Sat, 24 October 26




