
ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಈವರೆಗೂ ಅನೇಕ ಬ್ಲಾಕ್ ಬಸ್ಟರ್ ಚಿತ್ರಗಳಿಗೆ ಸಂಗೀತ ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡಿಗೆ ಅವರು ಪ್ರತಿಷ್ಠಿತ ‘ಗೋಲ್ಡನ್ ಗ್ಲೋಬ್ ಅವಾರ್ಡ್’ (Golden Globe Awards) ಪಡೆದಿದ್ದಾರೆ. ಈ ಸಾಧನೆ ಮಾಡಿದ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಅಭಿನಂದನೆ ಸಲ್ಲಿಸಿದರು. ಇಷ್ಟೆಲ್ಲ ಜನಪ್ರಿಯತೆ ಪಡೆದರೂ ಕೂಡ ತಮಗೆ ಆರಂಭದ ದಿನಗಳಲ್ಲಿ ಅವಕಾಶ ನೀಡಿದವರನ್ನು ಎಂಎಂ ಕೀರವಾಣಿ ಮರೆತಿಲ್ಲ. ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪಡೆದ ಬಳಿಕ ಹಲವರನ್ನು ಅವರು ಸ್ಮರಿಸಿದ್ದಾರೆ. 90ರ ದಶಕದಲ್ಲಿ ತಮಗೆ ಚಾನ್ಸ್ ಕೊಟ್ಟ ನಟ ಅರ್ಜುನ್ ಸರ್ಜಾ (Arjun Sarja) ಅವರಿಗೆ ಕೀರವಾಣಿ ಧನ್ಯವಾದ ಅರ್ಪಿಸಿದ್ದಾರೆ.
2023ರ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ನಲ್ಲಿ ‘ನಾಟು ನಾಟು..’ ಹಾಡಿಗೆ ‘ಅತ್ಯುತ್ತಮ ಒರಿಜಿನಲ್ ಸಾಂಗ್’ ಪ್ರಶಸ್ತಿ ಸಿಕ್ಕಿದೆ. ಈ ಖುಷಿಯಲ್ಲಿ ಎಂಎಂ ಕೀರವಾಣಿ ಟ್ವೀಟ್ ಮಾಡಿದ್ದಾರೆ. ‘ಗೋಲ್ಡನ್ ಗ್ಲೋಬ್ ಸೇರಿದಂತೆ 4 ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದು ಮರಳಿದ್ದೇವೆ. ತೆಲುಗು ಗಡಿ ದಾಡಿ ನನ್ನ ಸಂಗೀತ ಬೆಳೆಯುವಂತೆ ಮಾಡಿದ ರಾಮೋಜಿ ರಾವ್ ಹಾಗೂ ಎಲ್ಲ ಮೆಂಟರ್ಗಳಿಗೆ ಕೃತಜ್ಞತೆಗಳು. ಬಾಲಚಂದರ್ ಸರ್, ಭರತನ್ ಸರ್, ಅರ್ಜುನ್ ಸರ್ಜಾ ಮತ್ತು ಭಟ್ ಸಾಬ್ ಅವರಿಗೆ ಧನ್ಯವಾಗಳು’ ಎಂದು ಎಂಎಂ ಕೀರವಾಣಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: MM Keeravani: ಕನ್ನಡದ ಚಿತ್ರಗಳಿಗೂ ಸಂಗೀತ ನೀಡಿರುವ ಗೋಲ್ಡನ್ ಗ್ಲೋಬ್ ವಿನ್ನರ್ ಎಂಎಂ ಕೀರವಾಣಿ ಸಂಭಾವನೆ ಬಹುಕೋಟಿ
ಎಂಎಂ ಕೀರವಾಣಿ ಅವರ ಆರಂಭದ ದಿನಗಳಲ್ಲಿ ಅರ್ಜುನ್ ಸರ್ಜಾ ಅವಕಾಶ ನೀಡಿದ್ದರು. ಅವರು ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ ‘ಸೇವಗನ್’ ಚಿತ್ರಕ್ಕೆ ಸಂಗೀತ ನೀಡುವ ಅವಕಾಶವನ್ನು ಕೀರವಾಣಿ ಅವರಿಗೆ ನೀಡಲಾಗಿತ್ತು. ನಂತರ ಅರ್ಜುನ್ ಸರ್ಜಾ ನಟನೆಯ ‘ಅಳಿಮಯ್ಯ’ ಮುಂತಾದ ಸಿನಿಮಾಗಳಿಗೂ ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸಿದರು. ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಪುತ್ರಿ ಐಶ್ವರ್ಯಾ ಅರ್ಜುನ್ ನಟಿಸಿದ ‘ಪ್ರೇಮಬರಹ’ ಚಿತ್ರದ ಹಾಡೊಂದಕ್ಕೂ ಕೀರವಾಣಿ ದನಿಯಾದರು.
‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಲಾಸ್ ಏಂಜಲಿಸ್ನಲ್ಲಿ ನಡೆಯಿತು. ಎಂಎಂ ಕೀರವಾಣಿ ಅವರು ಪ್ರತಿಷ್ಠಿತ ಟ್ರೋಫಿ ಪಡೆದರು. ನಿರ್ದೇಶಕ ಎಸ್.ಎಸ್. ರಾಜಮೌಳಿ, ನಟರಾದ ರಾಮ್ ಚರಣ್, ಜೂನಿಯರ್ ಎನ್ಟಿಆರ್ ಮುಂತಾದವರು ಈ ವೇಳೆ ಹಾಜರಿದ್ದರು. ಈ ಪ್ರಶಸ್ತಿ ಪಡೆದ ಬಳಿಕ ಎಂಎಂ ಕೀರವಾಣಿ ಅವರ ಡಿಮ್ಯಾಂಡ್ ಹೆಚ್ಚಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.