MM Keeravani: ಕನ್ನಡದ ಚಿತ್ರಗಳಿಗೂ ಸಂಗೀತ ನೀಡಿರುವ ಗೋಲ್ಡನ್ ಗ್ಲೋಬ್ ವಿನ್ನರ್ ಎಂಎಂ ಕೀರವಾಣಿ ಸಂಭಾವನೆ ಬಹುಕೋಟಿ
MM Keeravani Remuneration: ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ಎಂಎಂ ಕೀರವಾಣಿ ಅವರು ಟಾಲಿವುಡ್ಗೆ ಮಾತ್ರ ಸೀಮಿತವಲ್ಲ. ಕನ್ನಡದ ಹಲವು ಚಿತ್ರಗಳಿಗೆ ಅವರು ಸಂಗೀತ ನೀಡಿದ್ದಾರೆ.
ಟಾಲಿವುಡ್ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಅವರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಸಿನಿಮಾ ಲೋಕದಲ್ಲಿ ಬ್ಯುಸಿ ಆಗಿರುವ ಅವರು ಈಗ ಇನ್ನಷ್ಟು ಫೇಮಸ್ ಆಗಿದ್ದಾರೆ. ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ (Golden Globe Award) ಪಡೆದ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಭಿಮಾನಿಗಳ ಮನ ಗೆದ್ದ ‘ಆರ್ಆರ್ಆರ್’ ಸಿನಿಮಾದ (RRR Movie) ‘ನಾಟು ನಾಟು..’ ಹಾಡಿಗೆ ‘ಅತ್ಯುತ್ತಮ ಒರಿಜಿನಲ್ ಸಾಂಗ್’ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿದೆ. ಈ ಸಾಧನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದಿಗ್ಗಜ ನಟ ಅಮಿತಾಭ್ ಬಚ್ಚನ್ ಸೇರಿದಂತೆ ಅನೇಕರು ಶಹಭಾಷ್ ಎಂದಿದ್ದಾರೆ. ಅನೇಕರಿಗೆ ತಿಳಿದಿರದ ಸಂಗತಿ ಏನೆಂದರೆ ಎಂಎಂ ಕೀರವಾಣಿ ಅವರು ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಕನ್ನಡದ ಅನೇಕ ಸಿನಿಮಾಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಎಂಎಂ ಕೀರವಾಣಿ ಅವರ ಕನ್ನಡ ಸಿನಿಮಾಗಳು:
ಚಿತ್ರರಂಗದಲ್ಲಿ ಎಂಎಂ ಕೀರವಾಣಿ ಅವರ ಅನುಭವ ಅಪಾರ. 1990ರಿಂದಲೂ ಅವರು ಸಕ್ರಿಯರಾಗಿದ್ದಾರೆ. ಹಲವಾರು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡದ ‘ಅಳಿಮಯ್ಯ’, ‘ಅಪ್ಪಾಜಿ’, ‘ಭೈರವ’, ‘ಸ್ವಾತಿ’, ‘ಕರ್ನಾಟಕ ಸುಪುತ್ರ’, ‘ದೀಪಾವಳಿ’, ‘ಜಮೀನ್ದಾರ್ರು’ ಮುಂತಾದ ಸಿನಿಮಾಗಳಿಗೆ ಸಂಗೀತ ನೀಡಿದ್ದು ಎಂಎಂ ಕೀರವಾಣಿ ಅವರೇ. ತೆಲುಗಿನಿಂದ ರಿಮೇಕ್ ಆದ ‘ಮರ್ಯಾದೆ ರಾಮಣ್ಣ’ ಹಾಗೂ ‘ವೀರ ಮದಕರಿ’ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದು ಕೂಡ ಎಂಎಂ ಕೀರವಾಣಿ.
ಇದನ್ನೂ ಓದಿ: Golden Globe Awards: ‘RRR’ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಜತೆ ‘ಗೋಲ್ಡನ್ ಗ್ಲೋಬ್’ ಪಡೆದವರ ಪೂರ್ತಿ ಲಿಸ್ಟ್ ಇಲ್ಲಿದೆ
ರಾಜಮೌಳಿಯ ಫೇವರಿಟ್ ಸಂಗೀತ ನಿರ್ದೇಶಕ:
2001ರಲ್ಲಿ ರಾಜಮೌಳಿ ಮೊದಲ ಬಾರಿಗೆ ನಿರ್ದೇಶನ ಮಾಡಿದ ‘ಸ್ಟೂಡೆಂಟ್ ನಂ.1’ ಸಿನಿಮಾದಿಂದ ಹಿಡಿದು ಕಳೆದ ವರ್ಷ ತೆರೆಕಂಡ ‘ಆರ್ಆರ್ಆರ್’ ಚಿತ್ರದವರೆಗೆ ಎಲ್ಲ ಸಿನಿಮಾಗಳಿಗೂ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ರಾಜಮೌಳಿ ಅವರ ಗೆಲುವಿನಲ್ಲಿ ಕೀರವಾಣಿ ಅವರ ಕೊಡುಗೆಯೂ ಮಹತ್ವದ್ದಾಗಿದೆ.
ಇದನ್ನೂ ಓದಿ: MM Keeravani: ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ‘ಆರ್ಆರ್ಆರ್’ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
18 ಕೋಟಿ ರೂಪಾಯಿ ಮೀರಿದ ಕೀರವಾಣಿ ಸಂಭಾವನೆ:
ಒಮ್ಮೆ ರಾಷ್ಟ್ರ ಪ್ರಶಸ್ತಿ, 8 ಬಾರಿ ಫಿಲ್ಮ್ಫೇರ್ ಪ್ರಶಸ್ತಿ, 11 ಬಾರಿ ‘ನಂದಿ ಅವಾರ್ಡ್ಸ್’ ಪಡೆದುಕೊಂಡ ಖ್ಯಾತಿ ಎಂಎಂ ಕೀರವಾಣಿ ಅವರಿಗೆ ಸಲ್ಲುತ್ತದೆ. ಈವರೆಗೂ ಅವರು ಒಂದು ಸಿನಿಮಾಗೆ ಬರೋಬ್ಬರಿ 18 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಈಗ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿರುವುದರಿಂದ ಅವರ ಡಿಮ್ಯಾಂಡ್ ಇನ್ನಷ್ಟು ಹೆಚ್ಚಾಗಲಿದೆ. ಅದಕ್ಕೆ ತಕ್ಕಂತೆಯೇ ಸಂಭಾವನೆ ಕೂಡ ಜಾಸ್ತಿ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೀರವಾಣಿ ಮಿಂಚುತ್ತಿದ್ದಾರೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:07 pm, Wed, 11 January 23