ಈ ವರ್ಷ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಲವು ಸಿನಿಮಾಗಳು ಬಿಡುಗಡೆ ಆದವು. ಸ್ಟಾರ್ ನಟರ ಬಹುನಿರೀಕ್ಷಿತ ಸಿನಿಮಾಗಳ ಜೊತೆಯಲ್ಲಿ ಹೊಸ ಕಲಾವಿದರ ಚಿತ್ರಗಳು ಕೂಡ ತೆರೆಕಂಡವು. ಆ ಪೈಕಿ ಹೆಚ್ಚು ಗಮನ ಸೆಳೆದಿರುವುದು ‘ಹನುಮಾನ್’ (HanuMan) ಸಿನಿಮಾ. ಸೂಪರ್ ಹೀರೋ ಕಾನ್ಸೆಪ್ಟ್ ಹೊಂದಿರುವ ಈ ಚಿತ್ರದಲ್ಲಿ ತೇಜ ಸಜ್ಜಾ (Teja Sajja) ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಆಂಜನೇಯನ ಕೃಪೆಯಿಂದ ಸೂಪರ್ ಪವರ್ ಪಡೆಯುವ ಯುವಕನ ಕಾಲ್ಪನಿಕ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಬಾಕ್ಸ್ ಆಫೀಸ್ನಲ್ಲಿ ‘ಹನುಮಾನ್’ ಭರ್ಜರಿ ಕಲೆಕ್ಷನ್ ಮಾಡಿದೆ. ಚಿತ್ರದ ಒಟ್ಟು ಕಲೆಕ್ಷನ್ (Hanuman Collection) 55.15 ಕೋಟಿ ರೂಪಾಯಿ ದಾಟಿದೆ.
‘ಹನುಮಾನ್’ ಸಿನಿಮಾಗೆ ಪ್ರಶಾಂತ್ ವರ್ಮಾ ನಿರ್ದೇಶನ ಮಾಡಿದ್ದಾರೆ. ತೇಜ ಸಜ್ಜಾ ಅವರಿಗೆ ಜೋಡಿಯಾಗಿ ಕನ್ನಡದ ಹುಡುಗಿ ಅಮೃತಾ ಅಯ್ಯರ್ ನಟಿಸಿದ್ದಾರೆ. ವಿನಯ್ ರೈ, ವರಲಕ್ಷ್ಮೀ ಶರತ್ಕುಮಾರ್ ಮುಂತಾದ ಕಲಾವಿದರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕಾಮಿಡಿ ಜೊತೆಗೆ ಸೂಪರ್ ಹೀರೋ ಕಥೆ ಇರುವ ‘ಹನುಮಾನ್’ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಜನವರಿ 12ರಂದು ‘ಹನುಮಾನ್’ ಬಿಡುಗಡೆ ಆಯಿತು. ಅದಕ್ಕೂ ಒಂದು ದಿನ ಮುಂಚೆ ಹಲವು ಕಡೆಗಳಲ್ಲಿ ಪ್ರೇಯ್ಡ್ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಅದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಪೇಯ್ಡ್ ಪ್ರೀಮಿಯರ್ ಶೋಗಳಿಂದ 4.15 ಕೋಟಿ ರೂಪಾಯಿ ಹರಿಬಂದಿತ್ತು. ಶುಕ್ರವಾರ (ಜ.12) ಈ ಚಿತ್ರಕ್ಕೆ 8.05 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಶನಿವಾರ (ಜ13) 12.45 ಕೋಟಿ ರೂಪಾಯಿ, ಭಾನುವಾರ (ಜ.14) 16 ಕೋಟಿ ರೂಪಾಯಿ ಬಾಚಿಕೊಂಡಿತು.
ಇದನ್ನೂ ಓದಿ: ಕನ್ನಡದಲ್ಲಿ ಹನುಮಾನ್ ಚಾಲೀಸ; ಭಕ್ತಿ-ಭಾವದಿಂದ ಹಾಡಿದ ಖ್ಯಾತ ಗಾಯಕ ವಿಜಯ್ ಪ್ರಕಾಶ್
ಸೋಮವಾರ ಯಾವುದೇ ಸಿನಿಮಾಗೆ ಅಗ್ನಿಪರೀಕ್ಷೆ ಎದುರಾಗುತ್ತದೆ. ಅದರಲ್ಲೂ ‘ಹನುಮಾನ್’ ಪಾಸ್ ಆಗಿದೆ. ಸೋಮವಾರ (ಜ.15) ಈ ಸಿನಿಮಾಗೆ 14.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿ ಆಗಿದೆ. ಹಲವು ಕಡೆಗಳಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಸಂಕ್ರಾಂತಿ ಸಂದರ್ಭದಲ್ಲಿ ಧನುಷ್, ಶಿವರಾಜ್ಕುಮಾರ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’, ಮಹೇಶ್ ಬಾಬು ಅಭಿನಯದ ‘ಗುಂಟೂರು ಖಾರಂ’ ಮುಂತಾದ ಸಿನಿಮಾಗಳು ತೆರೆಕಂಡವು. ಆ ಸಿನಿಮಾಗಳ ಟಫ್ ಸ್ಪರ್ಧೆಯ ನಡುವೆಯೂ ‘ಹನುಮಾನ್’ ಚಿತ್ರ ಈ ಪರಿ ಕಲೆಕ್ಷನ್ ಮಾಡಿರುವುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ