ಚಿತ್ರರಂಗಕ್ಕೆ ಗುಡ್ ಬೈ ಹೇಳಿದೆ ಬೆಂಗಳೂರು ಡ್ರಗ್ಸ್ ಪ್ರಕರಣ ಆರೋಪಿ ನಟಿ ಹೇಮಾ: ಕಾರಣ?

|

Updated on: Mar 19, 2025 | 5:26 PM

Hema Kolla: ಬೆಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ನಟಿ ಹೇಮಾ ಕೊಲ್ಲ ಇದೀಗ ಚಿತ್ರರಂಗದಿಂದ ನಿವೃತ್ತಿ ಪಡೆದಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಹಲವು ದಿನ ಬೆಂಗಳೂರು ಜೈಲಿನಲ್ಲಿದ್ದ ನಟಿಯ ಜೀವನದ ದಿಕ್ಕು ಈಗ ಬದಲಾಗಿದೆ. ನಟಿ ಸಿನಿಮಾ ಬಿಡಲು ಕಾರಣವೇನು?

ಚಿತ್ರರಂಗಕ್ಕೆ ಗುಡ್ ಬೈ ಹೇಳಿದೆ ಬೆಂಗಳೂರು ಡ್ರಗ್ಸ್ ಪ್ರಕರಣ ಆರೋಪಿ ನಟಿ ಹೇಮಾ: ಕಾರಣ?
Hema Kolla
Follow us on

ತೆಲುಗು ಚಿತ್ರರಂಗದ (Tollywood) ಜನಪ್ರಿಯ ಪೋಷಕ ನಟಿ ಹೇಮಾ ಕೊಲ್ಲ. ಈ ವರೆಗೆ ಸುಮಾರು 350-400 ಸಿನಿಮಾಗಳಲ್ಲಿ ಹೇಮಾ ಕೊಲ್ಲ ನಟಿಸಿದ್ದಾರೆ. ತೀರ ಇತ್ತೀಚೆಗಿನ ವರೆಗೆ ಹೇಮಾ ಕೊಲ್ಲ ಚಿತ್ರರಂಗದ ಬಲು ಬ್ಯುಸಿ ಪೋಷಕ ನಟಿ, ಹಾಸ್ಯ ನಟಿ ಆಗಿದ್ದರು. ತೆಲುಗು ಕಲಾವಿದರ ಸಂಘದ ಪದಾಧಿಕಾರಿಯಾಗಿಯೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ನಟಿಯ ಜೀವನವನ್ನೇ ಬದಲಾಯಿಸಿಬಿಟ್ಟಿದೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ, ಬೆಂಗಳೂರಿನ ಹೆಬ್ಬಗೋಡಿಯ ಹುಸ್ಕೂರು ಸಮೀಪದ ಜಿಆರ್ ಫಾರ್ಮ್​ನಲ್ಲಿ ನಡೆದಿದ್ದ ಪಾರ್ಟಿಯ ಮೇಲೆ ಬೆಂಗಳೂರು ಪೊಲೀಸರು ದಾಳಿ ಮಾಡಿ ಕೆಲವು ಡ್ರಗ್ ಪೆಡ್ಲರ್​ಗಳನ್ನು ಬಂಧಿಸಿದ್ದರು. ಆ ಪಾರ್ಟಿಯಲ್ಲಿ ನಟಿ ಹೇಮಾ ಸಹ ಹಾಜರಿದ್ದರು. ನಟಿ ಹೇಮಾ ಅವರನ್ನು ಸಹ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಸುಮಾರು ಒಂದು ವಾರಗಳ ಕಾಲ ಜೈಲಿನಲ್ಲಿದ್ದ ಹೇಮಾ ಜಾಮೀನು ಪಡೆದು ಬಿಡುಗಡೆ ಹೊಂದಿದ್ದರು.

ಆದರೆ ಆ ವೇಳೆಗಾಗಲೆ ನಟಿಯ ಬಗ್ಗೆ ತೆಲುಗು ಚಿತ್ರರಂಗ ಹಾಗೂ ತೆಲುಗು ಸಿನಿಮಾ ಪ್ರೇಮಿಗಳ ಮನದಲ್ಲಿ ಋಣಾತ್ಮಕ ಅಭಿಪ್ರಾಯ ಮೂಡಿತ್ತು. ಹೇಮಾ ಅವರನ್ನು ಮಾ (MAA) ಇಂದ ಹೊರಗೆ ಹಾಕಲಾಯ್ತು. ನಟಿಯ ಕೈಯಲ್ಲಿದ್ದ ಸಿನಿಮಾ ಆಫರ್​ಗಳು ಸಹ ತಪ್ಪಿ ಹೋದವು. ಆ ಪ್ರಕರಣ ನಡೆದ ಬಳಿಕ ಹೇಮಾ ಕೊಲ್ಲ ಕೇವಲ ಒಂದು ಸಿನಿಮಾದಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದಾರೆ. ಅದೂ ಸಹ ಪ್ರಕರಣಕ್ಕೆ ಮುಂಚೆಯೇ ನಟಿಸಿದ್ದು ಎನ್ನಲಾಗುತ್ತಿದೆ. ಈಗ ಹೇಮಾ ಕೈಯಲ್ಲಿ ಯಾವುದೇ ಸಿನಿಮಾಗಳು ಸಹ ಇಲ್ಲ.

ಇದನ್ನೂ ಓದಿ:Hema Kolla: ಬೆಂಗಳೂರು ಡ್ರಗ್ಸ್ ಪ್ರಕರಣದ ಬಗ್ಗೆ ನಟಿ ಹೇಮಾ ವಿಡಿಯೋ

ಇತ್ತೀಚೆಗೆ ಹೈದರಾಬಾದ್​ನಲ್ಲಿ ಶಾಪ್ ಒಂದರ ಉದ್ಘಾಟನೆಗೆ ಆಗಮಿಸಿದ್ದ ಹೇಮಾ ಕೊಲ್ಲ ಅವರನ್ನು ಸಿನಿಮಾಗಳಲ್ಲಿ ನಟಿಸುತ್ತಿಲ್ಲವೇ ಎಂದು ಪತ್ರಕರ್ತರು ಕೇಳಿದಾಗ, ‘ನಾನು ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟುಬಿಟ್ಟಿದ್ದೇನೆ. ಚಿತ್ರರಂಗದಿಂದ ನಿವೃತ್ತಿ ತೆಗೆದುಕೊಂಡಿದ್ದೇನೆ. ಈಗ ನಾನು ಲೈಫ್ ಅಲ್ಲಿ ಚಿಲ್ ಮಾಡುತ್ತಿದ್ದೇನೆ. ಎಂಜಾಯ್ ಮಾಡುತ್ತಿದ್ದೇನೆ. ನನಗೆ 14 ವರ್ಷ ಇದ್ದಾಗಿನಿಂದಲೂ ನಟಿಸುತ್ತಿದ್ದೇನೆ. ಜೀವನದಲ್ಲಿ ಈ ವರೆಗೆ ಬಹಳ ಕಷ್ಟಪಟ್ಟಿದ್ದೀನಿ. ಇನ್ನು ಸಾಕು ಅನಿಸುತ್ತಿದೆ. ಹಾಗಾಗಿ ಜೀವನ ಎಂಜಾಯ್ ಮಾಡುತ್ತಿದ್ದೀನಿ. ನನ್ನನ್ನು ನಾನು ಪ್ರೀತಿಸಿಕೊಳ್ಳುತ್ತಿದ್ದೀನಿ. ಮುಂದೆ ಎಂದಾದರೂ ಬೋರ್ ಹೊಡೆದರೆ ಆಗ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಆಲೋಚಿಸುತ್ತೇನೆ’ ಎಂದಿದ್ದಾರೆ ನಟಿ. ಅಂತೂ ಪರಪ್ಪನ ಅಗ್ರಹಾರದ ಜೈಲು ವಾಸ ನಟಿಯ ಜೀವನದ ದಿಕ್ಕನ್ನೇ ಬದಲಾಯಿಸಿಬಿಟ್ಟಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Wed, 19 March 25