Hema Kolla: ಬೆಂಗಳೂರು ಡ್ರಗ್ಸ್ ಪ್ರಕರಣದ ಬಗ್ಗೆ ನಟಿ ಹೇಮಾ ವಿಡಿಯೋ
Hema Kolla: ಬೆಂಗಳೂರಿನ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಕೊಂಡು ಜೈಲು ಪಾಲಾಗಿದ್ದ ನಟಿ ಹೇಮಾ ಇದೀಗ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ತನಗೆ ಕೆಲವರು ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ. ಅಲ್ಲದೆ ತಾವು ಯಾವುದೇ ತಪ್ಪು ಮಾಡಿಲ್ಲವೆಂದು ವರದಿಯೊಂದನ್ನು ತೋರಿಸಿದ್ದಾರೆ.
ತೆಲುಗು ಚಿತ್ರರಂಗದ ನಟಿ ಹೇಮಾ ಕೊಲ್ಲ ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದಿದ್ದರು. ಈ ಪಾರ್ಟಿಯಲ್ಲಿ ನಟಿ ಹೇಮಾ ಡ್ರಗ್ಸ್ ಸೇವಿಸಿದ್ದರು ಎಂಬ ಆರೋಪದ ಮೇಲೆ ಬೆಂಗಳೂರು ಪೊಲೀಸರು ಹೇಮಾ ಅವರನ್ನು ಬಂಧಿಸಿದ್ದರು. ನಟಿ ಹೇಮಾಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು, ಬಳಿಕ ಜಾಮೀನು ಪಡೆದು ನಟಿ ಹೊರಬಂದರು. ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಸಹ ಬೆಂಗಳೂರು ಪೊಲೀಸರ ಮೇಲೆ ಹಾಗೂ ಮಾಧ್ಯಮಗಳ ವಿರುದ್ಧ ತೀವ್ರ ವಾಗ್ದಾಳಿಯನ್ನು ನಟಿ ಹೇಮಾ ಮಾಡಿದ್ದರು.
ಪ್ರಕರಣ ನಡೆದು ಸುಮಾರು ಎರಡು ತಿಂಗಳ ಬಳಿಕ ಈಗ ನಟಿ ಹೇಮಾ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು ಮಾಧ್ಯಮಗಳ ಮೇಲೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ತಾವು ಯಾವುದೇ ಮಾದಕ ವಸ್ತು ಸೇವಿಸಿಲ್ಲ, ನನ್ನ ಮೇಲೆ ಸುಳ್ಳು ಆಪಾದನೆ ಹೊರಿಸಲಾಗಿದೆ ಎಂದಿದ್ದಾರೆ. ಅಲ್ಲದೆ ತಾವು ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದು, ಎಲ್ಲ ಪರೀಕ್ಷೆಗಳು ನೆಗೆಟಿವ್ ಬಂದಿವೆ ಎಂದು ಹೇಮಾ ಕೊಲ್ಲ ಹೇಳಿಕೊಂಡಿದ್ದಾರೆ.
‘ನಾನು ದಶಕಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿ ಸಂಪಾದಿಸಿದ್ದ ಗೌರವವನ್ನು ಮಾಧ್ಯಮಗಳು ಕೆಲವೇ ದಿನಗಳಲ್ಲಿ ಮಣ್ಣು ಪಾಲು ಮಾಡಿದವು. ನನ್ನ ಮೇಲಿನ ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ. ಹಾಗಾಗಿ ಅದರ ಬಗ್ಗೆ ನಾನು ಹೆಚ್ಚಿಗೇನೂ ಮಾತನಾಡುವುದಿಲ್ಲ. ಆದರೆ ನನ್ನದು ತಪ್ಪಿಲ್ಲ ಎಂದು ಹೇಳುವುದಕ್ಕಾಗಿ ಈ ವಿಡಿಯೋ ಮಾಡುತ್ತಿದ್ದೇನೆ’ ಎಂದು ಹೇಮಾ ಹೇಳಿದ್ದಾರೆ.
ಇದನ್ನೂ ಓದಿ:ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಸಹಿ ಹಾಕಿಸಿಕೊಂಡಿದ್ದಾರೆ: ಪೊಲೀಸರ ವಿರುದ್ಧ ಹೇಮಾ ಆರೋಪ
‘ನನ್ನ ಪರೀಕ್ಷೆಯನ್ನೇ ಪೊಲೀಸರು ಮಾಡಿಲ್ಲ, ಕೂದಲು, ಉಗುರು, ರಕ್ತದ ಮಾದರಿಗಳನ್ನು ಅವರು (ಬೆಂಗಳೂರು ಪೊಲೀಸರು) ಪಡೆದುಕೊಂಡಿರಲಿಲ್ಲ, ಬದಲಿಗೆ ಬಹಳ ತಡವಾಗಿ ಅವನ್ನು ತೆಗೆದುಕೊಂಡಿದ್ದಾರೆ ಎಂದು ಮಾಧ್ಯಮಗಳಿಗೆ ನಾನು ಹೇಳಿದ್ದೆ. ಆದರೆ ಅದನ್ನೂ ಸಹ ಮಾಧ್ಯಮಗಳವರು ತಿರುಚಿ ವರದಿ ಮಾಡಿದರು. ನನ್ನ ಸ್ಯಾಂಪಲ್ ಅನ್ನೇ ಪೊಲೀಸರು ತೆಗೆದುಕೊಂಡಿರಲಿಲ್ಲ, ಅದಾಗಲೇ ನನ್ನ ಪರೀಕ್ಷಾ ವರದಿಗಳು ಪಾಸಿಟಿವ್ ಬಂದಿವೆ ಎಂದು ನೀವು ಹೇಗೆ ಪ್ರಸಾರ ಮಾಡುತ್ತೀರಿ ಎಂದು ನಾನು ಪ್ರಶ್ನೆ ಮಾಡಿದ್ದೆ. ಅದನ್ನೇ ಮಾಧ್ಯಮಗಳವರು ದ್ವೇಷದ ರೀತಿ ತೆಗೆದುಕೊಂಡು ಬಿಂಬಿಸಿದರು’ ಎಂದಿದ್ದಾರೆ ಹೇಮಾ.
‘ನನ್ನ ಕೂದಲು, ಉಗುರು, ರಕ್ತದ ಮಾದರಿಗಳನ್ನು ಕೊಟ್ಟು ಈಗ ನಾನೇ ಪರೀಕ್ಷೆ ಮಾಡಿಸಿಕೊಂಡಿದ್ದೀನಿ. ಎಲ್ಲ ಪರೀಕ್ಷೆಗಳಲ್ಲಿಯೂ ನನಗೆ ನೆಗೆಟಿವ್ ವರದಿ ಬಂದಿದೆ. ಈಗಲೂ ಸಹ ನಾನು ಯಾವುದೇ ರೀತಿಯ ಟೆಸ್ಟ್ಗಳಿಗೂ ಸಹ ಬಹಿರಂಗವಾಗಿ ಸಿದ್ಧವಾಗಿದ್ದೇನೆ. ನಾನು ಯಾವುದೇ ತಪ್ಪು ಕೆಲಸ ಮಾಡಿಲ್ಲ. ಅದನ್ನು ಜನರಿಗೆ ತಿಳಿಸಲೆಂದೇ ಈ ವಿಡಿಯೋ ಮಾಡಿದ್ದೇನೆ, ಅಲ್ಲದೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಾಗೂ ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಅಪಾಯಿಂಟ್ಮೆಂಟ್ ಸಹ ನನಗೆ ಬೇಕಿದೆ’ ಎಂದಿದ್ದಾರೆ ಹೇಮಾ.
ಇದನ್ನೂ ಓದಿ:ಡ್ರಗ್ಸ್ ಪ್ರಕರಣ: ಜಾಮೀನು ದೊರೆತ ಎರಡು ದಿನದ ಬಳಿಕ ನಟಿ ಹೇಮಾ ಬಿಡುಗಡೆ
‘ಮಾಧ್ಯಮಗಳು ನನ್ನನ್ನು ಬ್ಲಾಕ್ಮೇಲ್ ಮಾಡಿದ್ದಾರೆ. ಸೆಟಲ್ಮೆಂಟ್ಗೆ ಬನ್ನಿ ಎಂದು ಕರೆದರು. ಕೆಲವು ದೊಡ್ಡವರೇ ಕರೆ ಮಾಡಿ ಸಂಧಾನಕ್ಕೆ ಕರೆದರು. ಆದರೆ ನನಗೆ ಹಾಗೂ ಮೀಡಿಯಾಗೆ ಯಾವುದೇ ಜಗಳ ಇಲ್ಲ. ನಾನು ಯಾವ ತಪ್ಪನ್ನೂ ಮಾಡಿಲ್ಲ ಹಾಗಿದ್ದಮೆಲೆ ನಾನೇಕೆ ಅವರ ಜೊತೆ ಸಂಧಾನಕ್ಕೆ ಹೋಗಬೇಕು. ನನ್ನನ್ನು ಯಾರ್ಯಾರು ಬ್ಲಾಕ್ ಮೇಲ್ ಮಾಡಿದ್ದಾರೊ ಅವರ ಫೋನ್ ನಂಬರ್ ನನ್ನ ಬಳಿ ಇದೆ, ಅದನ್ನು ಸಹ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ’ ಎಂದಿದ್ದಾರೆ ಹೇಮಾ.
‘ಮಾಧ್ಯಮಗಳು ನನ್ನನ್ನು ಭಯೋತ್ಪಾದಕಿಯಂತೆ ಬಿಂಬಿಸಿದ್ದಾರೆ. ನನ್ನ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಬಿಂಬಿಸಿದ್ದಾರೆ. ಹಾಗಾಗಿ ನನಗೆ ಸಿಎಂ ರೇವಂತ್ ರೆಡ್ಡಿ ಹಾಗೂ ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿ ನ್ಯಾಯ ಕೇಳಬೇಕಿದೆ. ಅವರ ಅಪಾಯಿಂಟ್ಮೆಂಟ್ ನನಗೆ ಬೇಕಾಗಿದೆ. ಅದೇ ಕಾರಣಕ್ಕೆ ಈ ವಿಡಿಯೋ ಮಾಡುತ್ತಿದ್ದೇನೆ’ ಎಂದು ಹೇಮಾ ಹೇಳಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಜೂನ್ 3 ರಂದು ಬೆಂಗಳೂರಿನಲ್ಲಿ ನಟಿ ಹೇಮಾ ಬಂಧನವಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಜೂನ್ 12 ರಂದು ಜಾಮೀನು ದೊರಕಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ