ರಜನಿಗೆ ಹಿಮಾಲಯದ ಜೊತೆ ನಂಟು ಬೆಳೆದಿದ್ದು ಹೇಗೆ? ಹೃಷಿಕೇಶದಲ್ಲಿರುವ ಕನ್ನಡಿಗ ಹೇಳಿದ ಕಥೆ

ರಜನಿಕಾಂತ್ ಹಿಮಾಲಯಕ್ಕೆ ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ, ಕೊವಿಡ್ ಕಾರಣದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಅವರಿಗೆ ಅಲ್ಲಿಗೆ ತೆರಳೋಕೆ ಸಾಧ್ಯವಾಗಿಲ್ಲ. ‘ಜೈಲರ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ಹೃಷಿಕೇಶಕ್ಕೆ ಭೇಟಿಕೊಟ್ಟಿದ್ದಾರೆ.

ರಜನಿಗೆ ಹಿಮಾಲಯದ ಜೊತೆ ನಂಟು ಬೆಳೆದಿದ್ದು ಹೇಗೆ? ಹೃಷಿಕೇಶದಲ್ಲಿರುವ ಕನ್ನಡಿಗ ಹೇಳಿದ ಕಥೆ
ರಜನಿ

Updated on: Aug 12, 2023 | 2:55 PM

ನಟ ರಜನಿಕಾಂತ್ (Rajanikanth) ಅವರು ಆಗಾಗ ಹಿಮಾಲಯಕ್ಕೆ ಭೇಟಿ ನೀಡುತ್ತಾರೆ. ಸಿನಿಮಾ ರಿಲೀಸ್ ಇದ್ದರೆ ಅವರು ಇಲ್ಲಿಗೆ ಭೇಟಿ ನೀಡೋದು ಖಚಿತ. ಅವರು ಮನಶಾಂತಿ ಹುಡುಕಿ ಹಿಮಾಲಯಕ್ಕೆ ಭೇಟಿ ನೀಡುತ್ತಾರೆ ಎಂಬುದು ಅನೇಕರಿಗೆ ಗೊತ್ತಿರುವ ವಿಚಾರ. ಆದರೆ, ಮೊದಲ ಬಾರಿ ಅವರು ಹಿಮಾಲಯಕ್ಕೆ ತೆರಳಿದ್ದು ಯಾವಾಗ? ನಂತರ ಹಿಮಾಲಯದ ಜೊತೆ ನಂಟು ಬೆಳೆದಿದ್ದು ಹೇಗೆ ಎಂಬಿತ್ಯಾದಿ ವಿಚಾರಗಳ ಕುರಿತು ಹೃಷಿಕೇಶದಲ್ಲಿರುವ (Hrishikesha) ಕನ್ನಡಿಗರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ರಜನಿಕಾಂತ್ ಹಿಮಾಲಯಕ್ಕೆ ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ, ಕೊವಿಡ್ ಕಾರಣದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಅವರಿಗೆ ಅಲ್ಲಿಗೆ ತೆರಳೋಕೆ ಸಾಧ್ಯವಾಗಿರಲಿಲ್ಲ. ‘ಜೈಲರ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ಹೃಷಿಕೇಶಕ್ಕೆ ಭೇಟಿಕೊಟ್ಟಿದ್ದಾರೆ. ರಜನಿಕಾಂತ್ ಅವರ ಆಧ್ಯಾತ್ಮ ಗುರುಗಳ ಸಾಲಿನಲ್ಲಿ ಸ್ವಾಮಿ ದಯಾನಂದ ಸರಸ್ವತಿ ಸ್ವಾಮೀಜಿ ಕೂಡ ಒಬ್ಬರು.

1992-93ರ ಸಂದರ್ಭದಲ್ಲಿ ಸ್ವಾಮಿ ದಯಾನಂದ ಸರಸ್ವತಿ ಸ್ವಾಮೀಜಿ ಅವರನ್ನು ರಜನಿಕಾಂತ್ ಚೆನ್ನೈನಲ್ಲಿ ಮೊದಲು ಭೇಟಿ ಆದರು. ಆಗ ಸ್ವಾಮೀಜಿ ಅವರಿಂದ ರಜನಿಕಾಂತ್ ಸಾಕಷ್ಟು ಪ್ರಭಾವಕ್ಕೆ ಒಳಗಾದರು. ‘ನನಗೂ ಹಿಮಾಲಯಕ್ಕೆ ಬರಬೇಕು. ಸುಮ್ಮನೆ ಅಲ್ಲಿ ಸುತ್ತಾಡಬೇಕು’ ಎಂದು ಸ್ವಾಮೀಜಿಗಳ ಬಳಿ ರಜನಿಕಾಂತ್ ಕೋರಿಕೊಂಡಿದ್ದರು. ‘ನೀನು ಅಂದುಕೊಂಡಷ್ಟು ಸುಲಭ ಇಲ್ಲ ಅಲ್ಲಿ ಓಡಾಡೋದು. ಸಾಕಷ್ಟು ನಕಲಿ ಸ್ವಾಮೀಗಳು ಇದ್ದಾರೆ. ಆ ಬಗ್ಗೆ ಎಚ್ಚರಿಕೆ ಬೇಕು. ಸದ್ಯ ಹೃಷಿಕೇಶದಲ್ಲಿರುವ ನಮ್ಮ ಆಶ್ರಮದಲ್ಲೇ ಇರು’ ಎಂದು ರಜನಿಗೆ ದಯಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದರು. ನಂತರ ಹಲವು ಸಂದರ್ಭಗಳಲ್ಲಿ ರಜನಿಕಾಂತ್ ಹೃಷಿಕೇಶಕ್ಕೆ ಭೇಟಿ ನೀಡಿದ್ದರು. ಹೀಗೆ ರಜನಿಕಾಂತ್​ಗೆ ಹೃಷಿಕೇಶದ ಜೊತೆ ನಂಟು ಬೆಳೆಯಿತು. ಈ ವಿಚಾರವನ್ನು ರಜನಿ ಹೇಳಿಕೊಂಡಿರುವುದಾಗಿ ಅಲ್ಲಿರುವ ಕನ್ನಡಿಗರೊಬ್ಬರು ವಿವರಿಸಿದ್ದಾರೆ.

‘ಸೆಲೆಬ್ರಿಟಿಗಳು ಎಲ್ಲೇ ಹೋದರು ಬೌನ್ಸರ್​ಗಳು ಮುತ್ತಿಕೊಳ್ಳುತ್ತಾರೆ. ಪೊಲೀಸರು ಇರುತ್ತಾರೆ. ಆದರೆ, ಹೃಷಿಕೇಶದಲ್ಲಿ ರಜನಿ ಒಬ್ಬರೇ ಬಂದಿದ್ದರು. ಯಾವುದೇ ಬೌನ್ಸರ್​ಗಳು ಇರಲಿಲ್ಲ. ಅಲ್ಲಿದ್ದು ನೋಡಿದವರಿಗೆ ಇವರು ರಜನೀನೇನಾ ಎಂಬ ಪ್ರಶ್ನೆ ಮೂಡುತ್ತದೆ. ರಜನಿ ಅಷ್ಟು ಸಿಂಪಲ್ ಆಗಿದ್ದರು’ ಎಂದು ವಿವರಿಸುತ್ತಾರೆ ಕನ್ನಡಿಗರು. ಬಹುಶಃ ಈ ರೀತಿ ಸರಳ ಜೀವನ ಅರಸಿಯೇ ಅಲ್ಲಿ ಹೋಗಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ‘ಜೈಲರ್​’ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯೂ ಕೇಳದೇ ಮನಶಾಂತಿಗಾಗಿ ಹಿಮಾಲಯಕ್ಕೆ ತೆರಳಿದ ರಜನಿಕಾಂತ್​

ರಜನಿಕಾಂತ್ ಇಲ್ಲಿ ಕೆಲವು ದಿನ ಮಾತ್ರ ಇರುತ್ತಾರೆ. ನಂತರ ಬೇರೆ ಭಾಗಕ್ಕೆ ತೆರಳುತ್ತಾರೆ. ಹಿಮಾಲಯದಲ್ಲಿ ರಜನಿಕಾಂತ್​ಗೆ ಹಲವು ಆಧ್ಯಾತ್ಮ ಗುರುಗಳಿದ್ದಾರೆ. ಅವರನ್ನು ಭೇಟಿ ಮಾಡಿ ಅವರು ತಮಿಳುನಾಡಿಗೆ ಮರಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:54 pm, Sat, 12 August 23