‘ಅವತಾರ್ 3’ ಸಿನಿಮಾ ಹೇಗಿದೆ? ನೋಡಿದವರು ಹೇಳಿದ್ದೇನು?

Avatar Fire and Ash twitter review: ಜೇಮ್ಸ್ ಕ್ಯಾಮರನ್ ನಿರ್ದೇಶನದ ‘ಅವತಾರ್’ ಸಿನಿಮಾ ಸರಣಿಯ ಮೂರನೇ ಸಿನಿಮಾ ‘ಅವತಾರ್: ಫೈರ್ ಆಂಡ್ ಆಶ್’ ಇಂದು (ಡಿಸೆಂಬರ್ 19) ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಮಂದಿ ಸಿನಿಮಾ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದವರು ಹೇಳಿರುವದೇನು? ಇಲ್ಲಿದೆ ನೋಡಿ ಟ್ವಿಟ್ಟರ್ ವಿಮರ್ಶೆ.

‘ಅವತಾರ್ 3’ ಸಿನಿಮಾ ಹೇಗಿದೆ? ನೋಡಿದವರು ಹೇಳಿದ್ದೇನು?
ಅವತಾರ್ 3

Updated on: Dec 19, 2025 | 4:54 PM

ಅವತಾರ್’ (Avatar) ಸಿನಿಮಾ ವಿಶ್ವದ ಅತ್ಯಂತ ಜನಪ್ರಿಯ ಸಿನಿಮಾಗಳಲ್ಲಿ ಒಂದು. 2009 ರಲ್ಲಿ ಬಿಡುಗಡೆ ಆಗಿದ್ದ ಮೊದಲ ‘ಅವತಾರ್’ ಸಿನಿಮಾ ವಿಶ್ವದಾದ್ಯಂತ ಮೋಡಿಯನ್ನೇ ಮಾಡಿಬಿಟ್ಟಿತ್ತು. ‘ಟೈಟಾನಿಕ್’ ಸಿನಿಮಾ ನಿರ್ದೇಶಿಸಿ ವಿಶ್ವವನ್ನೇ ಬೆಕ್ಕಸ ಬೆರಗಾಗಿಸಿದ್ದ ಜೇಮ್ಸ್ ಕ್ಯಾಮರನ್ 2009 ರ ‘ಅವತಾರ್’ ಸಿನಿಮಾ ಮೂಲಕ ಮತ್ತೊಮ್ಮೆ ವಿಶ್ವವೇ ತಮ್ಮತ್ತ ನೋಡುವಂತೆ ಮಾಡಿದ್ದರು. ಅದಾದ ಬಳಿಕ ಸುಮಾರು 13 ವರ್ಷಗಳ ಬಳಿಕ ‘ಅವತಾರ್ 2’ ಸಿನಿಮಾ ಬಿಡುಗಡೆ ಮಾಡಿದರು ಜೇಮ್ಸ್ ಕ್ಯಾಮರನ್. ಇಂದು (ಡಿಸೆಂಬರ್ 19) ‘ಅವತಾರ್ 3’ (ಅವತಾರ್: ಫೈರ್ ಆಂಡ್ ಆಶ್) ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದವರು ಹೇಳಿದ್ದೇನು? ಇಲ್ಲಿದೆ ಮಾಹಿತಿ…

ಕಿಂಗ್ ಎಂಬುವರು ಟ್ವೀಟ್ ಮಾಡಿ, ‘ಇದು ‘ಅವತಾರ್’ ಸರಣಿಯ ಈ ವರೆಗಿನ ಅದ್ಭುತ ಸಿನಿಮಾ. ಅದ್ಭುತವಾದ ಸಿನಿಮ್ಯಾಟಿಕ್ ಅನುಭವವನ್ನು ಈ ಸಿನಿಮಾ ನೀಡುತ್ತದೆ. ಒಂದೇ ಒಂದು ನೆಗೆಟಿವ್ ವಿಷಯವೆಂದರೆ ಸಿನಿಮಾದ ಕೆಲ ದೃಶ್ಯಗಳು ಈ ಹಿಂದಿನ ಸಿನಿಮಾಗಳಲ್ಲಿ ನೋಡಿದಂತೆ ಅನಿಸುತ್ತವೆ ಮತ್ತು ಸಿನಿಮಾದ ಕೆಲ ತಿರುವುಗಳನ್ನು ಮೊದಲೇ ಊಹಿಸಬಹುದು’ ಎಂದಿದ್ದಾರೆ. ಸಿನಿಮಾಕ್ಕೆ ಐದರಲ್ಲಿ 4.5 ರೇಟಿಂಗ್ ನೀಡಿದ್ದಾರೆ.

ಪ್ರಿನ್ಸ್ ಪೃಥ್ವಿ ಎಂಬುವರು ಟ್ವೀಟ್ ಮಾಡಿ, ‘ಇದೊಂದು ಅತ್ಯದ್ಭುತವಾದ ಸಿನಿಮಾ. ಪರದೆಯ ಮೇಲೆ ಪಾತ್ರಗಳಿಗೆ ಆಗುತ್ತಿರುವ ಎಲ್ಲ ಅನುಭವಗಳು ಪ್ರೇಕ್ಷಕನಿಗೂ ಆಗುತ್ತದೆ. ಸಿಟ್ಟು, ಆಕ್ರೋಶ, ಅಸಹನೆ ಎಲ್ಲವೂ ಮೂಡುತ್ತದೆ. ಅದರಲ್ಲಿಯೂ ಸಿನಿಮಾದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಸಿನಿಮಾದ ಕ್ಲೈಮ್ಯಾಕ್ಸ್​​ ಮೇಲೆ ಜೇಮ್ಸ್ ಕ್ಯಾಮರನ್ ತಮ್ಮ ಎಲ್ಲ ಪ್ರತಿಭೆ ಪ್ರಯೋಗಿಸಿದ್ದಾರೆ. ಸಿನಿಮಾನಲ್ಲಿ ಟುರುಕ್ ಮಕ್ಟೋ ಎಂಟ್ರಿ ಅತ್ಯದ್ಭುತವಾಗಿದೆ’ ಎಂದಿದ್ದಾರೆ ಅವರು.

ಆಸ್ಟಿನ್ ಎಂಬುವರು ಟ್ವೀಟ್ ಮಾಡಿ, ಸಿನಿಮಾ ಸಾಧಾರಣಕ್ಕಿಂತ ಸ್ವಲ್ಪವೇ ಚೆನ್ನಾಗಿದೆ ಎಂದಿದ್ದಾರೆ. ಅದ್ಭುತ ದೃಶ್ಯಗಳು ಸಿನಿಮಾನಲ್ಲಿವೆ. ಪಾತ್ರಗಳ ನಡುವೆ ಕೆಲವು ಒಳ್ಳೆಯ ಸನ್ನಿವೇಶಗಳು, ಸಂಕೀರ್ಣತೆಗಳು ಇವೆ. ಈ ಸಿನಿಮಾದಲ್ಲಿ ತೋರಿಸಲಾಗಿರುವ ‘ಫೈರ್ ಸಮುದಾಯ’ ಅದ್ಭುತವಾಗಿದೆ. ಅವರ ಪಾತ್ರಗಳು, ಅವರಿಗೆ ನೀಡಿರುವ ವಿಶೇಷಣಗಳು ಚೆನ್ನಾಗಿದೆ. ಆದರೆ ಸಿನಿಮಾದ ಥೀಮ್ ಮತ್ತೆ ಮತ್ತೆ ಬಳಸಿದ್ದರಿಂದ ಸವಕಲು ಎನಿಸುತ್ತಿದೆ. ಈಗ ಸಿನಿಮಾಕ್ಕೆ ಹೊಸ ವಿಲನ್​​ನ ಅಗತ್ಯತೆ ಇದೆ. ‘ಫೈರ್ ಸಮುದಾಯ’ದ ವರಾಂಗ್ ಒಳ್ಳೆಯ ವಿಲನ್ ಆಗಬಹುದಿತ್ತು ಅನಿಸುತ್ತದ ಎಂದಿದ್ದಾರೆ. 10 ರಲ್ಲಿ 7 ಅಂಕಗಳನ್ನು ನೀಡಿದ್ದಾರೆ.

ಮ್ಯಾನ್ ಆಫ್ ಫಿಕ್ಷನ್ ಎಂಬ ಟ್ವೀಟ್ ಖಾತೆ ಹಂಚಿಕೊಂಡಿರುವ ಟ್ವೀಟ್​​ನಲ್ಲಿ, ಸಿನಿಮಾದ ಪಾಸಿಟಿವ್ ಮತ್ತು ನೆಗಟಿವ್​​ಗಳನ್ನು ಪಟ್ಟಿ ಮಾಡಲಾಗಿದೆ. ‘ಅವತಾರ್ 3’ನಲ್ಲಿ ಭಾವನಾತ್ಮಕ ದೃಶ್ಯಗಳು ಸಖತ್ ಆಗಿ ಕ್ಲಿಕ್ ಆಗಿವೆ. ಆದರೆ ಸಂಭಾಷಣೆ ಅಷ್ಟು ಚೆನ್ನಾಗಿಲ್ಲ. ಸಿನಿಮಾದ ಪಾತ್ರಗಳು ಚೆನ್ನಾಗಿವೆ. ಫೈರ್ ಸಮುದಾಯವನ್ನು ವಿಚಿತ್ರವಾಗಿ ತೋರಿಸಲಾಗಿದೆ. ಸಿನಿಮಾದ ದೃಶ್ಯಗಳು, ವಿಎಫ್​ಎಕ್ಸ್ ಎಲ್ಲವೂ ಅತ್ಯದ್ಭುತವಾಗಿವೆ’ ಎಂದಿದ್ದಾರೆ.