ಹಾಲಿವುಡ್ ಗಾಯಕ ಫಿಫ್ಟಿ ಸೆಂಟ್ ವಿರುದ್ಧ ಮಾಜಿ ಪ್ರೇಯಸಿಯಿಂದ ಅತ್ಯಾಚಾರ ಆರೋಪ

|

Updated on: Mar 29, 2024 | 4:29 PM

50 cent-Daphne Joy: ಖ್ಯಾತ ರ್ಯಾಪರ್ 50 ಸೆಂಟ್ ವಿರುದ್ಧ ಆತನ ಮಾಜಿ ಪ್ರೇಯಸಿ ಡ್ಯಾಫ್ನಿ ಜೋಯ್ ಅತ್ಯಾಚಾರ, ಹಲ್ಲೆ ಹಾಗೂ ನಿಂದನೆ ಆರೋಪ ಮಾಡಿದ್ದಾರೆ.

ಹಾಲಿವುಡ್ ಗಾಯಕ ಫಿಫ್ಟಿ ಸೆಂಟ್ ವಿರುದ್ಧ ಮಾಜಿ ಪ್ರೇಯಸಿಯಿಂದ ಅತ್ಯಾಚಾರ ಆರೋಪ
Follow us on

ಹಾಲಿವುಡ್​ನ (Hollywood) ಸೆಲೆಬ್ರಿಟಿಗಳ ಮೇಲೆ ಅತ್ಯಾಚಾರ, ದೌರ್ಜನ್ಯ, ನಿಂದನೆ ಆರೋಪಗಳು ಪದೇ ಪದೇ ಕೇಳಿಬರುತ್ತಿವೆ. ಇದೀಗ ಖ್ಯಾತ ಗಾಯಕ, ರ್ಯಾಪರ್ 50 ಸೆಂಟ್ ವಿರುದ್ಧ ಆತನ ಮಾಜಿ ಪ್ರೇಯಸಿ ಅತ್ಯಾಚಾರ ಮತ್ತು ನಿಂದನೆ ಆರೋಪವನ್ನು ಮಾಡಿದ್ದಾರೆ. ಜನಪ್ರಿಯ ಮಾಡೆಲ್ ಡ್ಯಾಫ್ನಿ ಜೋಯ್ ಹಾಗೂ ಫಿಫ್ಟಿ ಸೆಂಟ್ (ಕರ್ಟಿಸ್ ಜೇಮ್ಸ್ ಜ್ಯಾಕ್ಸನ್) ಹಲವು ವರ್ಷಗಳ ಕಾಲ ಲಿವಿನ್ ರಿಲೇಷನ್​ನಲ್ಲಿದ್ದರು. ಇಬ್ಬರಿಗೂ ಒಬ್ಬ ಮಗ ಸಹ ಇದ್ದಾನೆ. ಕಳೆದ ಕೆಲ ತಿಂಗಳುಗಳ ಹಿಂದೆ ಫಿಫ್ಟಿ ಸೆಂಟ್ ನಿಂದ ಡ್ಯಾಫ್ನಿ ಜೋಯ್ ದೂರಾಗಿದ್ದರು. ಇತ್ತೀಚೆಗೆ ಡ್ಯಾಫ್ನಿ ಜೋಯ್ ವಿರುದ್ಧ ವೇಶ್ಯಾವಾಟಿಕೆ ಆರೋಪ ಸಹ ಬಂದಿತ್ತು. ಇದರ ಬೆನ್ನಲ್ಲೆ ಇದೀಗ ಡ್ಯಾಫ್ನಿ ಜೋಯ್ ತನ್ನ ಮಾಜಿ ಪ್ರಿಯಕರನ ವಿರುದ್ಧ ಅತ್ಯಾಚಾರ, ಹಲ್ಲೆ ಹಾಗೂ ನಿಂದನೆ ಆರೋಪ ಮಾಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಡ್ಯಾಫ್ನಿ ಜೋಯ್, ‘ನೀನು ಸರಿಹೋಗುತ್ತೀಯ, ತಂದೆಯಾಗಿ ನಿನ್ನ ಜವಾಬ್ದಾರಿಯನ್ನು ಪೊರೈಸುತ್ತೀಯ ಎಂದು ನಾನು ಕಾದಿದ್ದು ವ್ಯರ್ಥವಾಗಿದೆ. ಎರಡು ವರ್ಷಗಳಲ್ಲಿ ಕೇವಲ 10 ಬಾರಿ ಮಾತ್ರವೇ ನೀನು ನಿನ್ನ ಮಗನನ್ನು ನೋಡಲು ಬಂದಿದ್ದೆ. ನಿನ್ನ ಮೇಲೆ ಇಟ್ಟಿದ್ದ ನಂಬಿಕೆ ಇನ್ನು ಮುಗಿದಿದೆ. ಇನ್ನು ಮುಂದೆ ನೀನು ನನ್ನ ಮೇಲೆ ಅಧಿಕಾರ ಚಲಾಯಿಸಲು ಆಗುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಅಜಿತ್ ಕುಮಾರ್ ಚಿತ್ರಕ್ಕೆ ಹಾಲಿವುಡ್ ಸಿನಿಮಾ ಟೈಟಲ್; ‘ಪುಷ್ಪ’ ನಿರ್ಮಾಪಕನಿಂದ ಬಂಡವಾಳ

‘ನಿನ್ನ ರಾಕ್ಷಸೀಯ ಕೃತ್ಯಗಳು ಹೊರಜಗತ್ತಿಗೆ ತಿಳಿಯಬೇಕಿದೆ. ನನ್ನನ್ನು ಅತ್ಯಾಚಾರ ಮಾಡಿದ, ದೈಹಿಕ ಹಲ್ಲೆ, ನಿಂದನೆ ಮಾಡಿದ್ದೀಯ. ಇನ್ನು ಮುಂದೆ ನಾನು ನಂಬಿದ ದೇವರು ನಿನಗೆ ಶಿಕ್ಷೆ ನೀಡಲಿದ್ದಾನೆ. ತಂದೆಯಾಗಿ ನೀನು ಜವಾಬ್ದಾರಿ ನಿಭಾಯಿಸುತ್ತೀಯ ಎಂದು ನಾನಿಟ್ಟ ಕಟ್ಟ ಕಡೆಯ ನಂಬಿಕೆಯನ್ನು ನೀನು ಹಾಳು ಮಾಡಿದ್ದೀಯ. ನನ್ನ ವಿರುದ್ಧ ನೀನು ನೀಡಿರುವ ಹೇಳಿಕೆಗಳು ಕುಟುಂಬದ ಮನಸ್ಸು ಮುರಿದಿವೆ’ ಎಂದು ಡ್ಯಾಫ್ನಿ ಜೋಯ್ ಬರೆದುಕೊಂಡಿದ್ದಾರೆ.

ಮಾರ್ಚ್ 25 ರಂದು ಜನಪ್ರಿಯ ರ್ಯಾಪರ್ ಸೀನ್ ಡಿಡ್ಡಿ ಕಾಂಬೋಸ್ ಮನೆ ಮೇಲೆ ಪೊಲೀಸರು ದಾಳಿ ಮಾಡಿ ಬಂದಿದ್ದರು. ಆ ವ್ಯಕ್ತಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಎಂಬ ಆರೋಪ ಸೇರಿದಂತೆ ಲೈಂಗಿಕ ದೌರ್ಜನ್ಯದ ಕೆಲವು ಆರೋಪಗಳು ಆತನ ಮೇಲಿತ್ತು. ಆತನ ವಿರುದ್ಧ ನಿರ್ಮಾಪಕ ರೋಡ್ನಿ ಜೋನಸ್ ಸಹ ಆರೋಪ ಮಾಡಿದ್ದು, ಸೀನ್ ಡಿಡ್ಡಿ ಕಾಂಬೋಸ್ ಸೆಕ್ಸ್ ರಾಕೆಟ್ ನಡೆಸುತ್ತಿದ್ದು ಹಲವು ಮಾಡೆಲ್​ಗಳನ್ನು ವೇಶ್ಯೆಯರಾಗಿ ಬಳಸಿಕೊಂಡಿದ್ದಾನೆ ಎಂದಿದ್ದು, ಡ್ಯಾಫ್ನಿ ಜೋಯ್ ಸೇರಿದಂತೆ ಇನ್ನೂ ಕೆಲವರ ಹೆಸರು ಹೇಳಿದ್ದಾರೆ.

ಡ್ಯಾಫ್ನಿ ಜೋಯ್ ವೇಶ್ಯಾವಾಟಿಕೆ ಮಾಡುತ್ತಿದ್ದರಂತೆ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಫಿಫ್ಟಿ ಸೆಂಟ್, ‘ನೀನೊಬ್ಬ ವೇಶ್ಯೆ ಎಂಬುದು ಗೊತ್ತೇ ಇರಲಿಲ್ಲ, ಕೆಟ್ಟ ವೇಶ್ಯೆಯೆ. ಇದೊಂದು ಸಿನಿಮಾದ ಹಾಗಿದೆ’ ಎಂದು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಫಿಫ್ಟಿ ಸೆಂಟ್ ಈ ಪೋಸ್ಟ್ ಹಾಕಿದ ಬಳಿಕ ಡ್ಯಾಫ್ನಿ ಜೋಯ್, ಮಾಜಿ ಪ್ರಿಯತಮ ಫಿಫ್ಟಿ ಸೆಂಟ್ ವಿರುದ್ಧ ಅತ್ಯಾಚಾರ, ಹಲ್ಲೆ ಹಾಗೂ ನಿಂದನೆ ಆರೋಪ ಮಾಡಿದ್ದಾರೆ. ಆದರೆ ಫಿಫ್ಟಿ ಸೆಂಟ್ ಈ ಆರೋಪಗಳನ್ನೆಲ್ಲ ತಳ್ಳಿ ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ