
ಮಾರ್ವೆಲ್ ಸಿನಿಮಾಗಳನ್ನು (Marvel Studio) ಭಾರತದ ಸಿನಿಪ್ರಿಯರು ನೋಡೋಕೆ ಹೆಚ್ಚು ಆಸಕ್ತಿ ತೋರುತ್ತಾರೆ. ಈಗ ‘ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್’ ಸಿನಿಮಾ (Doctor Strange in the Multiverse of Madness) ಭಾರತದಲ್ಲಿ ಮೂರು ದಿನಕ್ಕೆ ಒಳ್ಳೆಯ ಕಲೆಕ್ಷನ್ ಮಾಡಿದೆ. ಮೇ 6ರಂದು ರಿಲೀಸ್ ಆದ ಈ ಚಿತ್ರ 79.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಮೊದಲ ವಾರಾಂತ್ಯಕ್ಕೆ ಒಳ್ಳೆಯ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾದ ಸೀಕ್ವೆಲ್ ಇದಾಗಿದೆ.
ಮೊದಲ ದಿನ ಈ ಸಿನಿಮಾ 28.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಶನಿವಾರ (ಮೇ 7) 25.75 ಕೋಟಿ ರೂಪಾಯಿ ಹಾಗೂ ಭಾನುವಾರ (25.40) ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 80 ಕೋಟಿ ರೂಪಾಯಿ ಸಮೀಪಿಸಿದೆ. ಶೀಘ್ರವೇ ಚಿತ್ರ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.
ಮೊದಲ ದಿನ ಈ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿತ್ತು. ಈ ಮೊದಲು ತೆರೆಗೆ ಬಂದಿದ್ದ ಮಾರ್ವೆಲ್ ಸ್ಟುಡಿಯೋಸ್ನ ‘ಸ್ಪೈಡರ್ ಮ್ಯಾನ್: ನೋ ವೇ ಹೋಂ’ ಸಿನಿಮಾ ಮೊದಲ ದಿನ 33 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಸಿನಿಮಾಗಿಂತ ಸುಮಾರು ಆರು ಕೋಟಿ ರೂಪಾಯಿ ಕಡಿಮೆ ಗಳಿಕೆ ಮಾಡಿದೆ. ‘ಡಾಕ್ಟರ್ ಸ್ಟ್ರೇಂಜ್’ ಸೀಕ್ವೆಲ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ದಿನ ಕಳೆದಂತೆ ಕಲೆಕ್ಷನ್ ತಗ್ಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ತಗ್ಗಬಹುದು.
ಬೆನೆಡಿಕ್ಟ್ ಕಂಬರ್ಬ್ಯಾಚ್ ‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದಲ್ಲಿ ಅತಿ ಉತ್ತಮ ಓಪನಿಂಗ್ ಪಡೆದ ನಾಲ್ಕನೇ ಹಾಲಿವುಡ್ ಸಿನಿಮಾ ಇದಾಗಿದೆ. ‘ಅವೆಂಜರ್ಸ್: ಎಂಡ್ಗೇಮ್’ (53.10 ಕೋಟಿ ರೂಪಾಯಿ), ‘ಸ್ಪೈಡರ್ ಮ್ಯಾನ್: ನೋ ವೇ ಹೋಂ’ (32.67 ಕೋಟಿ ರೂಪಾಯಿ) ಮತ್ತು ‘ಅವೆಂಜರ್ಸ್: ಇನ್ಫಿನಿಟಿ ವಾರ್’ (31.30 ಕೋಟಿ ರೂಪಾಯಿ) ಈ ಮೊದಲು ಒಳ್ಳೆಯ ಓಪನಿಂಗ್ ಪಡೆದ ಹಾಲಿವುಡ್ ಚಿತ್ರಗಳಾಗಿವೆ.
‘ಡಾಕ್ಟರ್ ಸ್ಟ್ರೇಂಜ್’ ಸೀಕ್ವೆಲ್ನಿಂದ ಯಶ್ ನಟನೆಯ ‘ಕೆಜಿಎಫ್ 2’ ಕಲೆಕ್ಷನ್ಗೆ ಕೊಂಚ ಹೊಡೆತ ಬೀಳುವ ಸಾಧ್ಯತೆ ಇದೆ. ಈಗಾಗಲೇ ‘ಕೆಜಿಎಫ್ 2’ ಹಿಂದಿಯಲ್ಲಿ 400 ಕೋಟಿ ರೂಪಾಯಿ ಕ್ಲಬ್ ಸೇರಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.