
‘ಜೇಮ್ಸ್ ಬಾಂಡ್’ ವಿಶ್ವ ಸಿನಿಮಾನಲ್ಲಿ ಭಾರಿ ಜನಪ್ರಿಯತೆ ಉಳ್ಳ ಸಿನಿಮಾ ಸರಣಿ. ಬ್ರಿಟೀಷ್ ಸಿನಿಮಾ ಸರಣಿಯಾದ ‘ಜೇಮ್ಸ್ ಬಾಂಡ್’ ಸುಮಾರು 50 ವರ್ಷಗಳಿಂದಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರುತ್ತಿದೆ. 1962 ರಲ್ಲಿ ಮೊದಲ ಜೇಮ್ಸ್ ಬಾಂಡ್ ಸಿನಿಮಾ ಬಿಡುಗಡೆ ಆಗಿತ್ತು. ಆಗಿನಿಂದ ಈಗಿನ ವರೆಗೆ 6 ಮಂದಿಯಷ್ಟೆ ಅಧಿಕೃತವಾಗಿ ಜೇಮ್ಸ್ ಬಾಂಡ್ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಜೇಮ್ಸ್ ಬಾಂಡ್ ಪಾತ್ರಕ್ಕೆ ನಟರನ್ನು ಆಯ್ಕೆ ಮಾಡಬೇಕಾದರೆ ನಿರ್ಮಾಣ ಸಂಸ್ಥೆ ಮತ್ತು ಸ್ಟುಡಿಯೋ ಸಾಕಷ್ಟು ಅಂಶಗಳನ್ನು ಗಮನಿಸುತ್ತದೆ. ಇದೀಗ ಅಮೆಜಾನ್ ಎಂಜಿಎಂ ಸಂಸ್ಥೆಯು ಹೊಸ ಜೇಮ್ಸ್ ಬಾಂಡ್ ಅನ್ನು ಆಯ್ಕೆ ಮಾಡಿದೆ.
ಡ್ಯಾನಿಯಲ್ ಕ್ರೇಗ್, ಜೇಮ್ಸ್ ಬಾಂಡ್ ಸರಣಿಯ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಬಾಂಡ್ ಆಗಿದ್ದರು. 2006 ರಿಂದ 2021 ರ ವರೆಗೆ ಬಾಂಡ್ ಪಾತ್ರಗಳಲ್ಲಿ ನಟಿಸಿದ ಡ್ಯಾನಿಯಲ್ ಬಾಂಡ್ ಪಾತ್ರಕ್ಕೆ ನಿವೃತ್ತಿ ಘೋಷಣೆ ಮಾಡಿದರು. ಹಾಗಾಗಿ ಸ್ಟುಡಿಯೋ ಹೊಸ ಬಾಂಡ್ ಹುಡುಕಾಟದಲ್ಲಿ ತೊಡಗಿತ್ತು. ಹಾಲಿವುಡ್ನ ಹಲವಾರು ನಟರನ್ನು ಆಡಿಷನ್ ಮಾಡಿದ ಬಳಿಕ ಇದೀಗ ಕೊನೆಗೂ ಜೇಮ್ಸ್ ಬಾಂಡ್ ಅನ್ನು ಆಯ್ಕೆ ಮಾಡಲಾಗಿದೆ.
ಮೂಲಗಳ ಪ್ರಕಾರ ನಟ ಜಾಕ್ ಲೋಡೆನ್ ಅವರು ಮುಂದಿನ ಜೇಮ್ಸ್ ಬಾಂಡ್ ಆಗಲಿದ್ದಾರೆ. ಸ್ಕಾಟ್ಲೆಂಡ್ನ ಈ ನಟ ಹಲವು ಸಿನಿಮಾಗಳು ಹಾಗೂ ಟಿವಿ ಶೋಗಳಲ್ಲಿ ನಟನೆ ಮಾಡಿದ್ದಾರೆ. 2010 ರಿಂದಲೂ ಟಿವಿ ಶೋ ಮತ್ತು ಸಿನಿಮಾಗಳಲ್ಲಿ ಜಾಕ್ ಲೋಡೆನ್ ನಟನೆ ಮಾಡುತ್ತಿದ್ದು, ಎರಡು ಬಾರಿ ಗೋಲ್ಡನ್ ಗ್ಲೋಬ್ಗೆ ನಾಮಿನೇಟ್ ಸಹ ಆಗಿದ್ದಾರೆ.
ಇದನ್ನೂ ಓದಿ:ಯಶ್ ಶ್ರಮ ಕೊಂಡಾಡಿದ ಹಾಲಿವುಡ್ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ
ಹೊಸ ಜೇಮ್ಸ್ ಬಾಂಡ್ ಸಿನಿಮಾದ ಚಿತ್ರಕತೆ ಈಗಾಗಲೇ ರೆಡಿಯಾಗಿದ್ದು, ಸಿನಿಮಾದ ಚಿತ್ರೀಕರಣ ಶುರುವಾಗಬೇಕಿದೆ. ಸ್ಟುಡಿಯೋವು, ಹೊಸ ಜೇಮ್ಸ್ ಬಾಂಡ್ ಆಯ್ಕೆಯನ್ನು ಗೌಪ್ಯವಾಗಿ ಇರಿಸುವ ಪ್ರಯತ್ನದಲ್ಲಿದ್ದು, ದೊಡ್ಡ ವೇದಿಕೆ ಮೇಲೆ ಹೊಸ ಬಾಂಡ್ ಅನ್ನು ಪರಿಚಯಿಸುವ ಉಮೇದಿನಲ್ಲಿದೆ. ಜೇಮ್ಸ್ ಬಾಂಡ್ ಸಿನಿಮಾಕ್ಕೆ ಸಂಬಂಧಿಸಿದ ನಟ ಗ್ಯಾರಿ ಓಲ್ಡ್ ಮ್ಯಾನ್ ಹೇಳಿರುವಂತೆ, ‘ನಿರ್ಮಾಪಕರು ಹೊಸ ಜೇಮ್ಸ್ ಬಾಂಡ್ ಅನ್ನು ಹುಡುಕಿದ್ದಾಗಿದೆ’ ಎಂದಿದ್ದಾರೆ.
ಜೇಮ್ಸ್ ಬಾಂಡ್ ಸಿನಿಮಾಗಳ ಚಿತ್ರಕತೆ ತಂಡದ ಪ್ರಮುಖರಾಗಿರುವ ಸ್ಟಿವನ್ ನೈಟ್ ಹೇಳಿರುವಂತೆ, ‘ನಾನು ಹೊಸ ಸಿನಿಮಾದ ಚಿತ್ರಕತೆ ರಚಿಸಿದ್ದೇನೆ. ನಾನು ನನ್ನ ಕೆಲಸವನ್ನು ಅಂತಿಮಗೊಳಿಸಿದ್ದೇನೆ. ನಿರ್ಮಾಪಕರು, ಸ್ಟುಡಿಯೋ, ಹೊಸ ಜೇಮ್ಸ್ ಬಾಂಡ್ ವಿಷಯವಾಗಿ ಯಾವ ನಿರ್ಣಯ ತೆಗೆದುಕೊಳ್ಳುತ್ತದೆಯೋ ನೋಡಬೇಕಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ