
‘ಅವತಾರ್ 3’ (Avatar 3) ಸಿನಿಮಾ ಬಿಡುಗಡೆ ಆಗಿ ಕೆಲ ವಾರಗಷ್ಟೆ ಆಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವಿಶ್ವಮಟ್ಟದಲ್ಲಿ ವ್ಯಕ್ತವಾಗಿದೆ. ಜೇಮ್ಸ್ ಕ್ಯಾಮರನ್ ಈ ವರೆಗೆ ನಿರ್ದೇಶಿಸಿರುವ ಸಿನಿಮಾಗಳಲ್ಲಿಯೇ ಕಡಿಮೆ ಗುಣಮಟ್ಟದ ಸಿನಿಮಾ ಇದೆಂದು ಸಹ ಕೆಲವು ವಿಮರ್ಶಕರು ಟೀಕೆ ಮಾಡಿದ್ದಾರೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಅವತಾರ್ 3’ ಸಾಧಾರಣ ಯಶಸ್ಸನ್ನಷ್ಟೆ ಗಳಿಸಿದೆ. ಇದೆಲ್ಲದರ ಹೊರತಾಗಿಯೂ ‘ಅವತಾರ್ 3’ ಸಿನಿಮಾ ಹಾಗೂ ಸಿನಿಮಾದ ನಿರ್ದೇಶಕ ಜೇಮ್ಸ್ ಕ್ಯಾಮರನ್ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಜೇಮ್ಸ್ ಕ್ಯಾಮರನ್ ವಿಶ್ವ ಬಾಕ್ಸ್ ಆಫೀಸ್ನ ಸುಲ್ತಾನರೇ ಆಗಿದ್ದಾರೆ. ಅವರು ನಿರ್ದೇಶಿಸಿರುವ ಮೂರು ಸಿನಿಮಾಗಳು ಒಂದರ ಹಿಂದೆ ಒಂದರಂತೆ 10000 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿವೆ. ಇದೀಗ ‘ಅವತಾರ್ 3’ ಸಿನಿಮಾ ಸಹ ಅದೇ ಹಾದಿಯಲ್ಲಿದ್ದು, ಆ ಮೂಲಕ ಜೇಮ್ಸ್ ಕ್ಯಾಮರನ್ ನಿರ್ದೇಶನದ ಸತತ ನಾಲ್ಕನೇ ಸಿನಿಮಾ ಹತ್ತು ಸಾವಿರ ಕೋಟಿ ಗಳಿಕೆ ಮಾಡಿದಂತಾಗಲಿದೆ.
ಜೇಮ್ಸ್ ಕ್ಯಾಮರನ್ ನಿರ್ದೇಶಿಸಿದ್ದ ‘ಟೈಟಾನಿಕ್’ ಸಿನಿಮಾ ಮೊದಲ ಬಾರಿಗೆ ಒಂದು ಬಿಲಿಯನ್ ಅಥವಾ ಎಂಟು ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿತು. ಅದಾದ ಬಳಿಕ 2000 ರಲ್ಲಿ ಜೇಮ್ಸ್ ಅವರು ‘ಅವತಾರ್’ ಸಿನಿಮಾ ನಿರ್ದೇಶಿಸಿದರು. ಈ ಸಿನಿಮಾ 2.9 ಬಿಲಿಯನ್ಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್ನಲ್ಲಿ ಗಳಿಸಿತು. ಬಳಿಕ ಜೇಮ್ಸ್ ‘ಅವತಾರ್ 2’ ನಿರ್ದೇಶಿಸಿದರು. ಈ ಸಿನಿಮಾ ಸಹ ಎರಡು ಬಿಲಿಯನ್ಗೂ ಹೆಚ್ಚು ಮೊತ್ತವನ್ನು ಗಳಿಸಿತು. ಇದೀಗ ‘ಅವತಾರ್ 3’ (ಅವತಾರ್: ಫೈರ್ ಆಂಡ್ ಆಶ್) ನಿರ್ದೇಶಿಸಿದ್ದು, ಈ ಸಿನಿಮಾ ಸಹ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಮೊತ್ತ ಗಳಿಕೆಯಲ್ಲಿದ್ದು, ಶೀಘ್ರವೇ ಒಂದು ಬಿಲಿಯನ್ ಕಲೆಕ್ಷನ್ ದಾಟಲಿದೆ.
ಇದನ್ನೂ ಓದಿ:‘ಅವತಾರ್ 3’ ಬಳಿಕ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದ ಮತ್ತೊಂದು ಹಾಲಿವುಡ್ ಸಿನಿಮಾ
ಆ ಮೂಲಕ, ಸತತ ನಾಲ್ಕು ಬಾರಿ ಒಂದು ಬಿಲಿಯನ್ಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ ವಿಶ್ವದ ಏಕೈಕ ಸಿನಿಮಾ ನಿರ್ದೇಶಕ ಎಂಬ ಗೌರವಕ್ಕೆ ಜೇಮ್ಸ್ ಕ್ಯಾಮರನ್ ಪಾತ್ರರಾಗಲಿದ್ದಾರೆ. ಈ ಹಿಂದೆ ‘ಅವೇಂಜರ್ಸ್’ ಸರಣಿಯ ಎರಡು ಸಿನಿಮಾಗಳು ಒಂದರ ಹಿಂದೆ ಒಂದರಂತೆ ಎರಡು ಬಿಲಿಯನ್ಗೂ ಹೆಚ್ಚು ಮೊತ್ತವನ್ನು ವಿಶ್ವ ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿದ್ದವು. ಆ ದಾಖಲೆಯನ್ನು ಜೇಮ್ಸ್ ಕ್ಯಾಮರನ್ ಮುರಿದಿದ್ದು, ಹೊಸ ದಾಖಲೆಯನ್ನು ಬರೆಯಲು ಸಜ್ಜಾಗಿದ್ದಾರೆ.
‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಈವರೆಗೆ 6800 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆ ಆಗಿ 12 ದಿನಗಳಷ್ಟೆ ಆಗಿದ್ದು, ಮುಂದಿನ ದಿನಗಳಲ್ಲಿ ಈ ಸಿನಿಮಾ 10000 ಕೋಟಿ ಗಳಿಕೆಯನ್ನು ದಾಟುವುದು ಖಾತ್ರಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ