ಬೆಟ್ಟದ ತುದಿಯಿಂದ ಮೊಟಾರ್ ಸೈಕಲ್ ಜೊತೆಗೆ ಹಾರುವ ನಾಯಕ, ವೇಗವಾಗಿ ಓಡುವ ರೈಲಿನ ಮೇಲೆ ನೈವಿರೇಳುವ ಫೈಟ್, ಬ್ರಿಡ್ಜ್ ಮುರಿದು ನದಿಗೆ ಬೀಳುವ ರೈಲು, ಆ ರೈಲಿನಿಂದ ಆಚೆ ಹಾರುವ ನಾಯಕ. ಆಕಾಶದಲ್ಲಿ ಸಾಲು ಸಾಲು ವಿಮಾನಗಳ ನಡುವೆ ಫೈಟ್, ಸಾಗರದಾಳದಲ್ಲಿ ಬಾಂಬ್ಗಳನ್ನು ಹಾರಿಸುವ ಸಬ್ ಮರೀನ್ಗಳು, ಒಂದೇ ಒಂದು ಮಿಷನ್ಗಾಗಿ ಜೀವವನ್ನೇ ಪಣಕ್ಕಿಟ್ಟು ಪ್ರತಿಕ್ಷಣವೂ ಸಾವಿನೊಂದಿಗೆ ಸೆಣೆಸಾಡುವ ಗುಂಪು ಇದೆಲ್ಲ ಟಾಮ್ ಕ್ರೂಸ್ (Tom Cruise) ನಟನೆಯ ಮಿಷನ್ ಇಂಪಾಸಿಬಲ್ (Mission Imposible) ಡೆಡ್ ರಿಕಾನಿಂಗ್ ಮೊದಲ ಭಾಗದ ಟ್ರೈಲರ್ ನಲ್ಲಿ ಕಂಡು ಬಂದ ದೃಶ್ಯಗಳು.
ವಿಶ್ವದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಮೊದಲಾಗಿರುವ ಮಿಷನ್ ಇಂಪಾಸಿಬಲ್ ಡೆಡ್ ರಿಕಾನಿಂಗ್ ಮೊದಲ ಭಾಗದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ನಿರೀಕ್ಷೆಗೂ ಮೀರಿದ ಆಕ್ಷನ್ ದೃಶ್ಯಗಳು ಮಿಷನ್ ಇಂಪಾಸಿಬಲ್ ಸಿನಿಮಾದಲ್ಲಿ ಇರುವ ಸುಳಿವನ್ನು ಟ್ರೈಲರ್ ನೀಡಿದೆ. ಟಾಮ್ ಕ್ರೂಸ್ ಅಂತೂ ಈ ಹಿಂದಿನ ಸಿನಿಮಾಗಳಲ್ಲಿ ಮಾಡಿದ ಸ್ಟಂಟ್ಗಳಿಗಿಂತಲೂ ಡೇಂಜರಸ್ ಆದ ಸ್ಟಂಟ್ಗಳನ್ನು ಈ ಸಿನಿಮಾದಲ್ಲಿ ಮಾಡಿರುವುದು ಕಾಣುತ್ತಿದೆ. ಟ್ರೈಲರ್ನಲ್ಲಿ ಕೇಳಿಬರುವ ಸಂಭಾಷಣೆ ಪ್ರಕಾರ, ಈ ಬಾರಿ ಇಡೀ ವಿಶ್ವವೇ ಟಾಮ್ ಕ್ರೂಸ್ ಹಿಂದೆ ಬಿದ್ದಿದೆ. ಆದರೆ ಅವನ ತಂಡ ಅವನ ಸಹಾಯಕ್ಕೆ ಇದೆ.
2:21 ನಿಮಿಷದ ಟ್ರೈಲರ್ ತುಂಬ ಆಕ್ಷನ್ ಹಾಗೂ ಚೇಸ್ ದೃಶ್ಯಗಳು ಭರಪೂರವಾಗಿ ತುಂಬಿಕೊಂಡಿವೆ. ಅಲ್ಲಲ್ಲಿ ಪಾತ್ರಗಳ ಪರಿಚಯಕ್ಕೂ ಸ್ಪೇಸ್ ನೀಡಲಾಗಿದೆ. ಕೆಲವು ಪಂಚಿಂಗ್ ಸಂಭಾಷಣೆಗಳು ಸಹ ಕೇಳುತ್ತವೆ. ಒಂದಷ್ಟೆ ರೊಮ್ಯಾಂಟಿಕ್ ದೃಶ್ಯವೂ ಕಂಡು ಮರೆಯಾಗುತ್ತದೆ. ಸಿನಿಮಾ ರೀತಿಯಲ್ಲಿಯೇ ಸೀಟಿನ ತುದಿಗೆ ಕೂರಿಸುವಂಥಹಾ ಟ್ರೈಲರ್ ಪ್ಯಾರಾಮೌಂಟ್ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಟ್ರೈಲರ್ ಅನ್ನು ವೀಕ್ಷಿಸಿದ್ದಾರೆ.
1996 ರಲ್ಲಿ ಮೊದಲ ಮಿಷನ್ ಇಂಪಾಸಿಬಲ್ ಸಿನಿಮಾ ಬಿಡುಗಡೆ ಆಗಿತ್ತು. ಆಗಿನಿಂದಲೂ ಮಿಷನ್ ಇಂಪಾಸಿಬಲ್ ಸರಣಿಯಲ್ಲಿ ಟಾಮ್ ಕ್ರೂಸ್ ನಟಿಸುತ್ತಿದ್ದಾರೆ. ಈಗ ಬಿಡುಗಡೆಗೆ ಸಜ್ಜಾಗಿರುವ ಮಿಷನ್ ಇಂಪಾಸಿಬಲ್: ಡೆಡ್ ರಿಕಾನಿಂಗ್ ಈ ಸರಣಿಯ ಏಳನೇ ಸಿನಿಮಾ ಆಗಿದೆ. ಮಿಷನ್ ಇಂಪಾಸಿಬಲ್: ಡೆಡ್ ರಿಕಾನಿಂಗ್ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಇದೀಗ ಮೊದಲ ಭಾಗದ ಟ್ರೈಲರ್ ಬಿಡುಗಡೆ ಆಗಿದೆ. ಎರಡನೇ ಭಾಗ ಮುಂದಿನ ವರ್ಷಾಂತ್ಯಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಕೋವಿಡ್ ನಿಂದಾಗಿ ಸಿನಿಮಾದ ಚಿತ್ರೀಕರಣ ತಡವಾಗಿದೆ ಇಲ್ಲವಾದರೆ ಈ ವೇಳೆಗಾಗಲೆ ಸಿನಿಮಾ ಬಿಡುಗಡೆ ಆಗಿರುತ್ತಿತ್ತು.
ಮಿಷನ್ ಇಂಪಾಸಿಬಲ್: ಡೆಡ್ ರಿಕಾನಿಂಗ್ ಸಿನಿಮಾವನ್ನು ಕ್ರಿಸ್ಟೊಫರ್ ಮೆಕ್ವೀರಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ 2015 ರಲ್ಲಿ ಬಿಡುಗಡೆ ಆಗಿದ್ದ ಮಿಷನ್ ಇಂಪಾಸಿಬಲ್: ರೋಗ್ ನೇಷನ್ ಹಾಗೂ 2018 ರಲ್ಲಿ ಬಿಡುಗಡೆ ಆಗಿದ್ದ ಮಿಷನ್ ಇಂಪಾಸಿಬಲ್: ಫಾಲೌಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಮಿಷನ್ ಇಂಪಾಸಿಬಲ್: ಡೆಡ್ ರಿಕಾನಿಂಗ್ ಸಿನಿಮಾ ಜುಲೈ 12ಕ್ಕೆ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ