Tom Cruise: ರಿಲೀಸ್ಗೂ ಮುನ್ನವೇ ಲೀಕ್ ಆಯ್ತು ಟಾಮ್ ಕ್ರೂಸ್ ಹೊಸ ಚಿತ್ರದ ಟ್ರೇಲರ್; ಸೂಪರ್ ಸ್ಟಾರ್ಗಳ ಸಿನಿಮಾಕ್ಕೇ ಹೀಗಾದರೆ ಸಾಮಾನ್ಯರ ಕತೆಯೇನು?
Mission: Impossible- Dead Reckoning Part 1 trailer: ಹಾಲಿವುಡ್ನ ಯಶಸ್ವಿ ಫ್ರಾಂಚೈಸ್ ಚಿತ್ರಗಳಲ್ಲಿ ‘ಮಿಷನ್ ಇಂಪಾಸಿಬಲ್’ ಕೂಡ ಒಂದು. ಈ ಸರಣಿಯ ಏಳನೇ ಚಿತ್ರ ‘ಮಿಷನ್ ಇಂಪಾಸಿಬಲ್- ಡೆಡ್ ರೆಕನಿಂಗ್ ಪಾರ್ಟ್ 1’ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಆದರೆ ಟಾಮ್ ಕ್ರೂಸ್ ನಟನೆಯ ಈ ಸಿನಿಮಾದ ಟ್ರೇಲರ್ ರಿಲೀಸ್ಗೂ ಮುನ್ನವೇ ಲೀಕ್ ಆಗಿದೆ.
ಪೈರಸಿ (Piracy) ಸದ್ಯ ಚಿತ್ರರಂಗ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಇದನ್ನು ನಿರ್ವಹಿಸಲು ಚಿತ್ರತಂಡಗಳು ಶ್ರಮವಹಿಸುತ್ತಿದ್ದರೂ ಕೂಡ ದೊಡ್ಡ ಮಟ್ಟದಲ್ಲಿ ಪ್ರತಿಫಲ ಲಭ್ಯವಾಗಿಲ್ಲ. ಈ ನಡುವೆ ಚಿತ್ರತಂಡಗಳು ಹೊಸ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿವೆ. ರಿಲೀಸ್ಗೂ ಮುನ್ನವೇ ಚಿತ್ರದ ತುಣುಕುಗಳು, ಟ್ರೇಲರ್ ಮೊದಲಾದವುಗಳು ಲೀಕ್ (Leak) ಆಗುತ್ತಿವೆ. ಚಿತ್ರೀಕರಣದ ವೇಳೆ ಖ್ಯಾತ ನಟರ ಗೆಟಪ್ಗಳು, ಸೆಟ್ನ ಫೋಟೋಗಳು ಸೋರಿಕೆಯಾಗುವುದು ಕೂಡ ಹೆಚ್ಚಳವಾಗಿದೆ. ಇದು ಕೇವಲ ಸಣ್ಣ ಸಣ್ಣ ಚಿತ್ರಗಳು ಎದುರಿಸುತ್ತಿರುವ ಸಮಸ್ಯೆಗಳಲ್ಲ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸೂಪರ್ ಸ್ಟಾರ್ಗಳು ಹಾಗೂ ಪ್ರಖ್ಯಾತ ನಿರ್ಮಾಣ ಸಂಸ್ಥೆಗಳೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಟಾಮ್ ಕ್ರೂಸ್ (Tom Cruise) ನಟನೆಯ ‘ಮಿಷನ್ ಇಂಪಾಸಿಬಲ್- ಡೆಡ್ ರೆಕನಿಂಗ್ ಪಾರ್ಟ್ 1’ (Mission: Impossible- Dead Reckoning Part 1). ‘ಮಿಷನ್ ಇಂಪಾಸಿಬಲ್’ ಸರಣಿ ಚಿತ್ರಗಳ ಬಗ್ಗೆ ಬಹುತೇಕರಿಗೆ ಪರಿಚಯವಿರುತ್ತದೆ ಹಾಲಿವುಡ್ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರ ಸರಣಿಗಳಲ್ಲಿ ಅದೂ ಒಂದು. ಮೈನವಿರೇಳಿಸುವ ಆಕ್ಷನ್ ದೃಶ್ಯಗಳನ್ನು ಹೊಂದಿರುವ ಆ ಚಿತ್ರಗಳಲ್ಲಿ ನಾಯಕರಾಗಿ ಕಾಣಿಸಿಕೊಳ್ಳುವ ಟಾಮ್ ಕ್ರೂಸ್ ಅಪಾರ ಖ್ಯಾತಿ ಗಳಿಸಿದ್ದಾರೆ. ಇದೀಗ ಅವರ ಚಿತ್ರದ ಟ್ರೇಲರ್ ರಿಲೀಸ್ಗೂ ಮುನ್ನವೇ ಸೋರಿಕೆಯಾಗಿದೆ.
ಪ್ಯಾರಾಮೌಂಟ್ ಪಿಕ್ಚರ್ಸ್ ನಿರ್ಮಾಣ ಮಾಡಿರುವ ‘ಮಿಷನ್ ಇಂಪಾಸಿಬಲ್ ಚಿತ್ರ ಡೆಡ್ ರೆಕನಿಂಗ್ ಪಾರ್ಟ್ ಒನ್’ ಚಿತ್ರದ ಟ್ರೇಲರ್ ಕಳೆದ ತಿಂಗಳು ಸಿನಿಮಾಕಾನ್ನಲ್ಲಿ ಪ್ರದರ್ಶಿಸಲಾಗಿತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಅಧಿಕೃತವಾಗಿ ರಿಲೀಸ್ ಆಗಿರಲಿಲ್ಲ. ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದು, ಅಭಿಮಾನಿಗಳು ದೀರ್ಘಕಾಲದಿಂದ ಕಾದಿದ್ದರು. ಆದರೆ ಶನಿವಾರ ಆನ್ಲೈನ್ನಲ್ಲಿ ಇದ್ದಕ್ಕಿದ್ದಂತೆ ಟ್ರೇಲರ್ ಲೀಕ್ ಆಗಿದೆ.
ಲೀಕ್ ಆದ ಕೆಲವೇ ನಿಮಿಷಗಳಲ್ಲಿ ಅದು ವೈರಲ್ ಆಗಿದ್ದು, ಹಲವಾರು ಟ್ವಿಟರ್ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ತಕ್ಷಣ ಎಚ್ಚೆತ್ತಿರುವ ನಿರ್ಮಾಣ ಸಂಸ್ಥೆಯು ರಿಪೋರ್ಟ್ ಮಾಡಿದ್ದು, ವಿಡಿಯೋವನ್ನು ಟ್ವಿಟರ್ನಿಂದ ತೆಗೆಯಲು ಪ್ರಯತ್ನಿಸುತ್ತಿದೆ. ಕಾಪಿರೈಟ್ ಕಾಯ್ದೆಯನ್ವಯ ಹಕ್ಕುಸ್ವಾಮ್ಯ ವರದಿಗಳನ್ನು ಅದು ಸಲ್ಲಿಸಿ, ವಿಡಿಯೋ ಪ್ರಸರಣವನ್ನು ತಡೆಗಟ್ಟಿದೆ. ಟ್ವಿಟರ್ ಲೀಕ್ ಆದ ಚಿತ್ರದ ಟ್ರೇಲರ್ ಮೇಲೆ ಹಕ್ಕು ಸ್ವಾಮ್ಯದ ವರದಿ ಲಗತ್ತಿಸಿದ್ದು, ಅಂತಹ ವಿಡಿಯೋಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಆದರೆ ಲೀಕ್ ಆಗಿರುವ ಮೂಲವನ್ನು ಇದುವರೆಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಪ್ರಸ್ತುತ ಲೀಕ್ ಆಗಿರುವ ಟ್ರೇಲರ್ 2 ನಿಮಿಷ ಅವಧಿಯುಳ್ಳದ್ದಾಗಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಮಾಹಿತಿಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ. ‘ಮಿಷನ್: ಇಂಪಾಸಿಬಲ್ – ಡೆಡ್ ರೆಕನಿಂಗ್ ಪಾರ್ಟ್ ಒನ್’ ಈ ಫ್ರಾಂಚೈಸ್ನ ಏಳನೇ ಚಿತ್ರ. ಎಥಾನ್ ಹಂಟ್ ಎಂಬ ರಹಸ್ಯ ಏಜೆಂಟ್ ಪಾತ್ರದಲ್ಲಿ ಟಾಮ್ ಕ್ರೂಸ್ ಕಾಣಿಸಿಕೊಂಡಿದ್ದಾರೆ. 2023ರ ಜುಲೈ 14ರಂದು ಚಿತ್ರ ರಿಲೀಸ್ ಆಗಲಿದೆ. ಈ ಫ್ರಾಂಚೈಸ್ ಚಿತ್ರಗಳಿಂದ ಟಾಮ್ ಆಕ್ಷನ್ ಸೂಪರ್ಸ್ಟಾರ್ ಪಟ್ಟಕ್ಕೇರಿದ್ದರು. ಈ ಹಿಂದಿನ 6 ಮಿಷನ್ ಇಂಪಾಸಿಬಲ್ ಚಿತ್ರಗಳು ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು 3.57 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿವೆ.
ಭಾರತೀಯ ಚಿತ್ರರಂಗದಲ್ಲೂ ಸಿನಿಮಾ ತಂಡಗಳು ಇಂತಹ ಸಮಸ್ಯೆಗಳನ್ನು ಎದುರಿಸಿದ ಉದಾಹರಣೆಗಳು ಹಲವಾರಿದೆ. ಇತ್ತೀಚೆಗೆ ‘ಕೆಜಿಎಫ್ ಚಾಪ್ಟರ್ 2’ ಟೀಸರ್ ಇಂಥದ್ದೇ ಸಮಸ್ಯೆ ಎದುರಿಸಿತ್ತು. ಇದಲ್ಲದೇ ‘ಉಡ್ತಾ ಪಂಜಾಬ್’ ಸೇರಿದಂತೆ ಕೆಲವು ಸಿನಿಮಾಗಳು ರಿಲೀಸ್ಗೂ ಮುನ್ನವೇ ಲೀಕ್ ಆದ ಉದಾಹರಣೆಗಳಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Sun, 22 May 22