Oppenheimer: ‘ಆಪನ್​ಹೈಮರ್​’ ಕಲೆಕ್ಷನ್​ ಕುಸಿಯಲು ಭಗವದ್ಗೀತೆ ವಿವಾದವೇ ಕಾರಣವಾಯ್ತಾ? 6 ದಿನಕ್ಕೆ 67 ಕೋಟಿ ರೂ. ಗಳಿಕೆ

|

Updated on: Jul 27, 2023 | 11:58 AM

Oppenheimer Movie Collection: ಭಾರತದಲ್ಲಿ ‘ಆಪನ್​ಹೈಮರ್​’ ಸಿನಿಮಾ ಓಪನಿಂಗ್​ ಪಡೆದುಕೊಂಡ ಪರಿ ಗಮನಿಸಿದರೆ ಬಹಳ ವೇಗವಾಗಿ 100 ಕೋಟಿ ರೂಪಾಯಿ ಗಳಿಕೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ.

Oppenheimer: ‘ಆಪನ್​ಹೈಮರ್​’ ಕಲೆಕ್ಷನ್​ ಕುಸಿಯಲು ಭಗವದ್ಗೀತೆ ವಿವಾದವೇ ಕಾರಣವಾಯ್ತಾ? 6 ದಿನಕ್ಕೆ 67 ಕೋಟಿ ರೂ. ಗಳಿಕೆ
ಕಿಲಿಯನ್​ ಮರ್ಫಿ
Follow us on

ಹಾಲಿವುಡ್​ನ ಆಪನ್​ಹೈಮರ್​’ (Oppenheimer) ಸಿನಿಮಾಗೆ ಭಾರತದಲ್ಲಿ ಭರ್ಜರಿ ಓಪನಿಂಗ್​ ಸಿಕ್ಕಿತು. ಜುಲೈ 21ರಂದು ತೆರೆಕಂಡ ಈ ಸಿನಿಮಾಗೆ ಮೊದಲ ದಿನ ಆಗಿದ್ದು 14.5 ಕೋಟಿ ರೂಪಾಯಿ ಕಲೆಕ್ಷನ್​. ಭಾನುವಾರ ಬರೋಬ್ಬರಿ 17.25 ಕೋಟಿ ರೂಪಾಯಿ ಗಳಿಕೆ ಆಯಿತು. ಆದರೆ ಸೋಮವಾರದ (ಜುಲೈ 24) ವೇಳೆಗೆ ಈ ಚಿತ್ರದ ಕಲೆಕ್ಷನ್​ ಶೇಕಡ 50ರಷ್ಟು ಕುಸಿಯಿತು. ಸೋಮವಾರ ಕಲೆಕ್ಟ್​ ಆಗಿದ್ದು 7 ಕೋಟಿ ರೂಪಾಯಿ ಮಾತ್ರ. ಅಂದಿನಿಂದ ಈ ಚಿತ್ರದ ಕಲೆಕ್ಷನ್​ (Oppenheimer Box Office Collection) ಕುಸಿಯುತ್ತಲೇ ಇದೆ. ಈ ಸಿನಿಮಾದಲ್ಲಿ ಇರುವ ಭಗವದ್ಗೀತೆ (Bhagavad Gita) ಕುರಿತ ದೃಶ್ಯಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಕಲೆಕ್ಷನ್​ ಕುಸಿಯಲು ಇದು ಕೂಡ ಕಾರಣ ಎಂದು ಹೇಳಲಾಗುತ್ತಿದೆ.

ಕ್ರಿಸ್ಟೋಫರ್​ ನೋಲನ್​ ಅವರು ‘ಆಪನ್​ಹೈಮರ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕಿಲಿಯನ್​ ಮರ್ಫಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ರಾಬರ್ಟ್​​ ಡೌನಿ ಜ್ಯೂನಿಯರ್​, ಎಮಿಲಿ ಬ್ಲಂಟ್​, ಮ್ಯಾಟ್​ ಡೇಮನ್​ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಓಪನಿಂಗ್​ ಪಡೆದುಕೊಂಡ ಪರಿ ಗಮನಿಸಿದರೆ ಬಹಳ ವೇಗವಾಗಿ 100 ಕೋಟಿ ರೂಪಾಯಿ ಗಳಿಕೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. 6 ದಿನಕ್ಕೆ ಒಟ್ಟು 67.85 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ.

ಇದನ್ನೂ ಓದಿ: Hostel Hudugaru Bekagiddare: ‘ಆಪನ್​ಹೈಮರ್​’, ‘ಬಾರ್ಬಿ’ ಚಿತ್ರವನ್ನೂ ಮೀರಿಸಿ ‘ಬುಕ್​ ಮೈ ಶೋ’ ರೇಟಿಂಗ್​ ಪಡೆದ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’

‘ಆಪನ್​ಹೈಮರ್​’ ಸಿನಿಮಾದ ಕಥಾನಾಯಕ ಲೈಂಗಿಕ ಕ್ರಿಯೆ ವೇಳೆ ಭಗವದ್ಗೀತೆ ಓದುವ ದೃಶ್ಯ ಇದೆ. ಇದು ಹಿಂದೂ ಧರ್ಮಕ್ಕೆ ಮಾಡಿದ ಅಪಮಾನ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಕಾರಣದಿಂದಲೇ ಈ ಚಿತ್ರದ ಕಲೆಕ್ಷನ್​ ಕುಸಿಯುತ್ತಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ವಾರದ ದಿನಗಳಲ್ಲಿ ಈ ರೀತಿ ಕಲೆಕ್ಷನ್​ ಕುಸಿಯುವುದು ಸಹಜ ಎಂದು ಕೂಡ ಹೇಳಲಾಗುತ್ತಿದೆ. ಎರಡನೇ ವೀಕೆಂಡ್​ನಲ್ಲಿ ಮತ್ತೆ ‘ಆಪನ್​ಹೈಮರ್​’ ಸಿನಿಮಾದ ಗಳಿಕೆ ಹೆಚ್ಚುವ ಸಾಧ್ಯತೆ ಇದೆ.

ಇದನ್ನೂ ಓದಿ: Ram Gopal Varma: ‘ಆಪನ್​ಹೈಮರ್​’ ಚಿತ್ರದಲ್ಲಿನ ಭಗವದ್ಗೀತೆ ಕುರಿತ ವಿವಾದಾತ್ಮಕ ದೃಶ್ಯದ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಪ್ರತಿಕ್ರಿಯೆ

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಣು ಬಾಂಬ್​ ಕಂಡುಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್​ ಆಪನ್​ಹೈಮರ್​ ಜೀವನದ ಕುರಿತು ಈ ಸಿನಿಮಾ ಮೂಡಿಬಂದಿದೆ. ವಿಶ್ವಾದ್ಯಂತ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕ್ರಿಸ್ಟೋಫರ್​ ನೋಲನ್​ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೆ ಪ್ರೇಕ್ಷಕರು ‘ಆಪನ್​ಹೈಮರ್​’ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಮೊದಲ ಮೂರು ದಿನ ಭಾರತ ಹಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.