ಹಲವು ಹಳೆಯ ಸಂಸ್ಥೆಗಳು ಹಳೆಯದಾಗುತ್ತಾ ಆಗುತ್ತಾ ಪರಂಪರೆಯ ಹೆಸರಿನಲ್ಲಿ ಹಳೆಯ ಸಂಪ್ರದಾಯಗಳನ್ನು ಹಾಗೆಯೇ ಉಳಿಸಿಕೊಳ್ಳುತ್ತವೆ. ಆದರೆ ಆಸ್ಕರ್ (Oscar) ಇದಕ್ಕೆ ಹೊರತು ಎನಿಸುತ್ತದೆ. ಆಸ್ಕರ್ ಪ್ರಾರಂಭವಾಗಿ 94 ವರ್ಷಗಳಾಗಿವೆ. ಇದೀಗ ಆರು ದಶಕಗಳಿಗೂ ಹೆಚ್ಚು ಸಮಯದಿಂದ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನು ಹಠಾತ್ತನೆ ಬದಲಿಸಲಾಗಿದೆ.
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಾವ ಸಿನಿಮಾ ಯಾವ ಪ್ರಶಸ್ತಿ ಗಳಿಸಿತು, ಯಾವ ನಟ-ನಟಿಯರು ಪ್ರಶಸ್ತಿ ಪಡೆದರು ಎಂಬುದರ ಜೊತೆಗೆ, ಕೆಂಪು ಬಣ್ಣದ ನೆಲಹಾಸಿನ ಮೇಲೆ ಯಾರು ಹೇಗೆ ಕಾಣಿಸಿಕೊಂಡರು, ಯಾವ ಉಡುಗೆ ತೊಟ್ಟರು, ಯಾವ ರೀತಿಯ ಫ್ಯಾಷನ್ ಮಾಡಿದರು, ಯಾರೊಟ್ಟಿಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು ಎಂಬುದು ಸಹ ಚರ್ಚೆಯಾಗುತ್ತದೆ. ಆಸ್ಕರ್ನ ರೆಡ್ ಕಾರ್ಪೆಟ್ (Red Carpet) ಇವೆಂಟ್ ಜಗತ್ತಿನ ಪ್ರಮುಖ ಫ್ಯಾಷನ್ ಶೋಗಳಿಗೂ ಸೆಡ್ಡು ಹೊಡೆಯುವಷ್ಟು ರಂಗು ಭರಿತವಾಗಿರುತ್ತದೆ. ಆದರೆ ಈ ಬಾರಿ ಇದು ತುಸು ಬದಲಾಗಿದೆ ಕಾರ್ಪೆಟ್ ಇರುತ್ತದೆಯಾದರೂ ಬಣ್ಣ ಬೇರೆಯದ್ದಾಗಿರುತ್ತದೆ.
ಹೌದು ಈ ಬಾರಿ ರೆಡ್ ಕಾರ್ಪೆಟ್ನ ಬಣ್ಣ ಬದಲಾಗಿದ್ದು, ಕೆಂಪು ಬಣ್ಣದ ನೆಲಹಾಸಿನ ಬದಲಿಗೆ ತಿಳಿ ಪಿಂಕು ಬಣ್ಣ ಅಥವಾ ನುಣುಪಾದ ಮರಳಿನ ಬಣ್ಣದ ನೆಲಹಾಸನ್ನು ಹಾಸಲಾಗುತ್ತಿದೆ. ಇದರ ಮೇಲೆ ಹಲವು ದೇಶಗಳ ಸೆಲೆಬ್ರಿಟಿಗಳು ವಯ್ಯಾರದಿಂದ ನಡೆಯಲಿದ್ದಾರೆ. ತಮ್ಮ ಫ್ಯಾಷನ್ ಸೆನ್ಸ್ ಪ್ರದರ್ಶಿಸಲಿದ್ದಾರೆ.
ಆಸ್ಕರ್ನಲ್ಲಿ ರೆಡ್ ಕಾರ್ಪೆಟ್ ಪ್ರಾರಂಭವಾಗಿದ್ದು 62 ವರ್ಷಗಳ ಹಿಂದೆ 1961 ರಲ್ಲಿ ಆದರೆ ಈ ರೆಡ್ ಕಾರ್ಪೆಟ್ ಜನರ ಗಮನ ಸೆಳೆಯಲು ಆರಂಭಿಸಿದ್ದು 1967 ರಿಂದ ಏಕೆಂದರೆ ಆಗಿನಿಂದಲೇ ಆಸ್ಕರ್ ನೇರ ಪ್ರಸಾರ ಬಣ್ಣಗಳಲ್ಲಿ ಪ್ರಸಾರವಾಗಲು ಆರಂಭಿಸಿದ್ದು. ಆಗಿನಿಂದಲೂ ರೆಡ್ ಕಾರ್ಪೆಟ್ ಕೆಂಪು ಬಣ್ಣದಲ್ಲಿಯೇ ಇತ್ತು. ಆದರೆ ಈ ಬಾರಿ ಹಠಾತ್ತನೆ ಇದನ್ನು ಬದಲಾಯಿಸಿದ್ದಕ್ಕೆ ವಿಶೇಷ ಕಾರಣವೇನೂ ಇಲ್ಲ. ಬದಲಾವಣೆ ಇರಲೆಂಬ ಕಾರಣಕ್ಕೆ ಆಸ್ಕರ್ನ ಕ್ರಿಯೇಟಿವ್ ಕಂಸಲ್ಟಂಟ್ಗಳಾದ ಲೀಸಾ ಲವ್, ರಾವಲ್ ಅವಿಲಾ ಇನ್ನಿತರರು ಸೇರಿ ಬದಲಾಯಿಸಿದ್ದಾರೆ. ಅಕಾಡೆಮಿ ಮೋಷನ್ ಪಿಕ್ಚರ್ಸ್ ನವರು ಸಹ ಒಪ್ಪಿಗೆ ಸೂಚಿಸಿದ್ದಾರೆ.
ಇಷ್ಟು ದಿನ ಈ ರೆಡ್ ಕಾರ್ಪೆಟ್ ವಾಕ್ ಆಸ್ಕರ್ ನಡೆಯುವ ಡಾಲ್ಬಿ ಥಿಯೇಟರ್ನ ಹೊರಗೆ ನಡೆಯುತ್ತಿತ್ತು. ಈ ಬಾರಿಯೂ ಅಲ್ಲಿಯೇ ನಡೆಯುತ್ತದೆಯಾದರೂ ಈ ಬಾರಿ ಕಾರ್ಪೆಟ್ನ ಮೇಲೆ ಟೆಂಟ್ ಅನ್ನು ನಿರ್ಮಿಸಲಾಗುತ್ತಿದೆ. ಸೆಲೆಬ್ರಿಟಿಗಳನ್ನು ಹಾಗೂ ಅಲ್ಲಿನ ಇತರೆ ಸಿಬ್ಬಂದಿ ಹಾಗೂ ಕ್ಯಾಮೆರಾಗಳನ್ನು ಮಳೆ, ಬಿಸಿಲುಗಳಿಂದ ರಕ್ಷಿಸಲು ಹೀಗೆ ಮಾಡಲಾಗುತ್ತಿದೆ. ಅಲ್ಲದೆ ಕಾರ್ಪೆಟ್ ಕಾರ್ಯಕ್ರಮ ತುಸು ಖಾಸಗಿಯಾಗಿರುವಂತೆ ಫೀಲ್ ನೀಡಲು ಸಹ ಈ ನಿರ್ಣಯ ಮಾಡಲಾಗಿದೆ ಎಂದಿದೆ ಆಸ್ಕರ್ ಆಯೋಜಕ ತಂಡ.
ಕಾರ್ಪೆಟ್ ಹಾಗೂ ಅದರ ಟೆಂಟ್ ಅನ್ನು ನಿರ್ಮಿಸಲು ಸುಮಾರು 600 ಗಂಟೆ ವ್ಯಯಿಸಲಾಗಿದೆಯಂತೆ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವು ಲಾಸ್ ಏಂಜಲಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ 5:30 ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಭಾರತದಿಂದ ಈ ಬಾರಿ ಮೂರು ವಿಭಾಗದಲ್ಲಿ ಸ್ಪರ್ಧೆ ಇದೆ. ಡಾಕ್ಯುಮೆಂಟರಿಗಳಾದ ಎಲಿಫೆಂಟ್ ವಿಸ್ಪರರ್ಸ್ ಹಾಗೂ ಆಲ್ ದಟ್ ಬ್ರೀತ್ಸ್ ಹಾಗೂ ಆರ್ಆರ್ಆರ್ ಸಿನಿಮಾದ ನಾಟು-ನಾಟು ಹಾಡು ನಾಮಿನೇಟ್ ಆಗಿದೆ.