ಆಸ್ಕರ್ ನಾಮಿನಿಗಳಿಗೆ ಕೋಟಿ ಮೌಲ್ಯದ ವಿಶೇಷ ಗಿಫ್ಟ್ ಬ್ಯಾಗ್, ಏನೇನಿರಲಿದೆ ಒಳಗೆ?
ಆಸ್ಕರ್ಗೆ ಬರಲಿರುವ ಅತಿಥಿಗಳಿಗೆ ಆಯೋಜಕರಿಂದ ವಿಶೇಷ ಉಡುಗೊರೆಗಳು ದೊರೆಯಲಿವೆ. ಪ್ರಶಸ್ತಿಗೆ ನಾಮಿನೇಟ್ ಆಗಿರುವವರಿಗೆ ಒಂದು ಕೋಟಿಗೂ ಹೆಚ್ಚು ಮೌಲ್ಯದ ಗಿಫ್ಟ್ ಬಾಕ್ಸ್ ದೊರೆಯಲಿದೆ. ಗಿಫ್ಟ್ ಬಾಕ್ಸ್ ಒಳಗೆ ಏನೇನು ಇರಲಿದೆ? ಇಲ್ಲಿ ತಿಳಿಯಿರಿ...
ವಿಶ್ವದಲ್ಲಿ ಅತಿ ಹೆಚ್ಚು ಜನ ನೋಡುವ, ಐಶಾರಾಮಿ ಇವೆಂಟ್ಗಳಲ್ಲಿ ಒಂದಾದ ಆಸ್ಕರ್ (Oscars 2023) ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಾರಂಭವಾಗಲಿದೆ. ಭಾರತದಿಂದ ಆರ್ಆರ್ಆರ್ (RRR) ಸಿನಿಮಾದ ನಾಟು-ನಾಟು ಹಾಡು ಸಹ ಈ ಬಾರಿ ಆಸ್ಕರ್ಗೆ ನಾಮಿನೇಟ್ ಆಗಿರುವ ಕಾರಣ ಭಾರತೀಯರು ತುಸು ಹೆಚ್ಚೇ ಆಸ್ಕರ್ ಇವೆಂಟ್ ಮೇಲೆ ಕಣ್ಣಿಟ್ಟಿದ್ದಾರೆ. ವಿಶ್ವದ ಟಾಪ್ ಸೆಲೆಬ್ರಿಟಿಗಳು ಆಸ್ಕರ್ಗೆ ಬರಲಿದ್ದು, ಅವರಿಗೆಲ್ಲ ಆಯೋಜಕರ ಕಡೆಯಿಂದ ವಿಶೇಷ ಉಡುಗೊರೆಗಳು ಸೇವೆಗಳು ದೊರೆಯಲಿವೆ. ಅದರಲ್ಲಿಯೂ ಆಸ್ಕರ್ಗೆ ನಾಮಿನೇಟ್ ಆಗಿರುವವರಿಗೆ ಒಂದು ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳುಳ್ಳ ಗಿಫ್ಟ್ ಬ್ಯಾಗ್ (Gift Bag) ದೊರೆಯಲಿದೆ.
ಎಲ್ಲ ನಾಮಿನೀಗಳಿಗೆ ನೀಡಲಾಗುತ್ತಿರುವ ಗಿಫ್ಟ್ ಬ್ಯಾಗ್ಗಳಲ್ಲಿ ದುಬಾರಿ ಬೆಲೆಯ ವಸ್ತುಗಳ ಜೊತೆಗೆ ಭಾರಿ ಮೌಲ್ಯದ ಗಿಫ್ಟ್ ವೋಚರ್ಗಳು ಸಹ ಇರಲಿವೆ. ಈ ಗಿಫ್ಟ್ ಬ್ಯಾಗ್ನ ಮೌಲ್ಯ 1.25 ಲಕ್ಷ ಡಾಲರ್. ಭಾರತದ ರುಪಾಯಿ ಲೆಕ್ಕದಲ್ಲಿ 1.03 ಕೋಟಿ! ಈ ಭಾರಿ 23 ವಿಭಾಗಗಳಿಗೆ ಪ್ರಶಸ್ತಿ ನೀಡಲಾಗುತ್ತಿದ್ದು 23 ವಿಭಾಗಗಳಿಗೆ 120ಕ್ಕಿಂತಲೂ ಹೆಚ್ಚಿನ ಸಿನಿಮಾ ಅಥವಾ ವ್ಯಕ್ತಿಗಳು ಪ್ರಶಸ್ತಿಗಾಗಿ ನಾಮಿನೇಟ್ ಆಗಿದ್ದಾರೆ. ಅವರೆಲ್ಲರಿಗೂ ಈ 1 ಕೋಟಿಗೂ ಹೆಚ್ಚು ಬೆಲೆಯ ಗಿಫ್ಟ್ ಬ್ಯಾಗ್ ಉಡುಗೊರೆಯಾಗಿ ಸಿಗಲಿದೆ.
ಡಿಸ್ಟಿಂಕ್ಟಿವ್ ಅಸ್ಸೆಟ್ ಹೆಸರಿನ ಸಂಸ್ಥೆಯು ಈ ಗಿಫ್ಟ್ ಬ್ಯಾಗ್ಗಳನ್ನು ನೀಡುತ್ತಿದ್ದು ಇದಕ್ಕೆ ‘ಎವರಿಬಡಿ ವಿನ್ಸ್’ ಎಂಬ ಹೆಸರು ನೀಡಲಾಗಿದೆ. 16 ಡಾಲರ್ (1300 ರು.) ಬೆಲೆಯ ಚಾಕಲೇಟ್ನಿಂದ ಹಿಡಿದು 40 ಸಾವಿರ ಡಾಲರ್ (32 ಲಕ್ಷ ರು) ಮೌಲ್ಯದ ಗಿಫ್ಟ್ ವೋಚರ್ ಗಳನ್ನು ಒಳಗೊಂಡಿದೆ. ಗಿಫ್ಟ್ ಬ್ಯಾಗ್ ಪಡೆದವರು ವಿಮಾನದಲ್ಲಿ ಅದನ್ನು ಹೊತ್ತೊಯ್ಯಲು ಅನುಕೂಲವಾಗುವಂತೆ ವ್ಯವಸ್ಥಿತವಾಗಿ ಎರಡು ಸೂಟ್ಕೇಸ್ಗಳಲ್ಲಿ ಪ್ಯಾಕ್ ಮಾಡಿ ನೀಡಲಾಗುತ್ತಿದೆ. ನಾಮಿನಿಗಳು ಉಳಿದುಕೊಂಡಿರುವ ಹೋಟೆಲ್ಗೇ ಡಿಸ್ಟಿಂಕ್ಟಿವ್ ಅಸ್ಸೆಟ್ ಸಂಸ್ಥೆಯವರು ಗಿಫ್ಟ್ ಬ್ಯಾಗ್ಗಳನ್ನು ಡೆಲಿವರಿ ಮಾಡುತ್ತಿದ್ದಾರೆ.
ಗಿಫ್ಟ್ ಬ್ಯಾಗ್ನಲ್ಲಿ 9000 ಡಾಲರ್ (7.37 ಲಕ್ಷ ರು) ಬೆಲೆಯ ವೋಚರ್ ಇದೆ. ಈ ವೋಚರ್ ಬಳಸಿ ಇಟಲಿಯ ಫಾರಾ ಪುಂಟಾ ಇಂಪೆರೆಟರ್ ಹೋಟೆಲ್ನಲ್ಲಿ ಮೂರು ರಾತ್ರಿ-ಮೂರು ಹಗಲು ತಂಗಬಹುದು. 40,000 ವೋಚರ್ ಬಳಸಿ ಕೆನಡಾದ ಐಶಾರಾಮಿ ಒಟ್ಟಾಯ ಪ್ರಾಪರ್ಟಿಯಲ್ಲಿ ಕೆಲ ದಿನ ತಂಗಬಹುದು. ಅದೂ ನಾಮಿನಿ ಸೇರಿದಂತೆ ಅವರ ಏಳು ಗೆಳೆಯರೊಟ್ಟಿಗೆ. ಪೀಸಸ್ ಆಫ್ ಆಸ್ಟ್ರೇಲಿಯಾ ಹೆಸರಿನ ಸಂರಕ್ಷಣಾ ಅಭಿಯಾನದಡಿ ಆಸ್ಟ್ರೇಲಿಯಾದ ಒಂದು ಸ್ಕ್ವೇರ್ ಮೀಟರ್ ಜಾಗವನ್ನು ಉಡುಗೊರೆಯಾಗಿ ನೀಡಲಾಗುತ್ತಿದ್ದು, ಅದರ ಕುರಿತ ಅಭಿನಂದನಾ ಪತ್ರ ಇತರೆ ದಾಖಲೆ ಈ ಗಿಫ್ಟ್ ಬ್ಯಾಗ್ನಲ್ಲಿ ಇರಲಿದೆ.
ಡಾ ಥಾಮಸ್ ಸೂ ಸಂಸ್ಥೆಯ 12 ಸಾವಿರ ಡಾಲರ್ (9 ಲಕ್ಷ ರು) ಮೌಲ್ಯದ ತ್ವಚೆ ಅಂದಗಾಣಿಸುವ ಉತ್ಪನ್ನಗಳ ಕಿಟ್ ಗಿಫ್ಟ್ ಬ್ಯಾಗ್ನಲ್ಲಿ ಇರಲಿದೆ. ಕೂದಲ ಆರೋಗ್ಯಕ್ಕೆ ಬೇಕಾದ ವಸ್ತುಗಳು ಹಾಗೂ ವೈದ್ಯರ ಕನ್ಸಲ್ಟೇಶನ್ ವೋಚರ್ ಸಹ ಇದರಲ್ಲಿರಲಿದ್ದು ಇದರ ಮೌಲ್ಯ 7000 ಡಾಲರ್ (5.73 ಲಕ್ಷ ರು). 10 ಸಾವಿರ ಡಾಲರ್ (8.19 ಲಕ್ಷ ರು) ಮೌಲ್ಯದ ಆರೋಗ್ಯ ಹಾಗೂ ಸೌಂದರ್ಯಕ್ಕೆ ಸಂಬಂಧಿಸಿದ ವಸ್ತುಗಳು ಹಾಗೂ ಚಿಕಿತ್ಸಾ ಕ್ರಮಗಳ ಮಾಹಿತಿ ಹಾಗೂ ಕೆಲವು ಸೋಪುಗಳು, ಟಿ ಶರ್ಟ್, ಚಪ್ಪಲಿ, ಟೋಪಿ, ಚಾಕಲೇಟ್ಗಳನ್ನು ಈ ಗಿಫ್ಟ್ ಬ್ಯಾಗ್ ಒಳಗೊಂಡಿದೆ. ಈ ಗಿಫ್ಟ್ ಬ್ಯಾಗ್ಗಳ ಮೇಲೆ ತೆರಿಗೆಯನ್ನು ಗಿಫ್ಟ್ ಪಡೆದವರೇ ತೆರಬೇಕಾಗುತ್ತದೆ. ತೆರಿಗೆ ಮೊತ್ತ ಆಯಾ ದೇಶದ ತೆರಿಗಾ ವಿಧಾನ ಹಾಗೂ ಮೊತ್ತದ ಮೇಲೆ ನಿರ್ಣಯವಾಗಿರುತ್ತದೆ.