AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AR Rahaman: ನನ್ನ ಆಸ್ಕರ್ ಭಾಷಣವನ್ನು ತಪ್ಪಾಗಿ ಅರ್ಥೈಸಲಾಗಿತ್ತು: ಎಆರ್ ರೆಹಮಾನ್

2008 ರಲ್ಲಿ ಆಸ್ಕರ್ ಗೆದ್ದಾಗ ವೇದಿಕೆ ಮೇಲೆ ಮಾಡಿದ್ದ ತಮ್ಮ ಭಾಷಣವನ್ನು ತಪ್ಪಾಗಿ ಅರ್ಥೈಸಲಾಗಿತ್ತು ಎಂದಿರುವ ರೆಹಮಾನ್, ತಾವು ಅಂದು ಹೇಳಿದ ಮಾತುಗಳ ಅರ್ಥವೇನೆಂದು ತಿಳಿಸಿದ್ದಾರೆ.

AR Rahaman: ನನ್ನ ಆಸ್ಕರ್ ಭಾಷಣವನ್ನು ತಪ್ಪಾಗಿ ಅರ್ಥೈಸಲಾಗಿತ್ತು: ಎಆರ್ ರೆಹಮಾನ್
ಎಆರ್ ರೆಹಮಾನ್
ಮಂಜುನಾಥ ಸಿ.
|

Updated on: Mar 11, 2023 | 7:13 PM

Share

ಆಸ್ಕರ್ 2023 (Oscar 2023) ಪ್ರಶಸ್ತಿ ಪ್ರದಾನ ಸಮಾರಂಭ ಇನ್ನೆರಡು ದಿನಗಳಿವೆ. ಯಾರ್ಯಾರು ಆಸ್ಕರ್ ಪಡೆಯುತ್ತಾರೆ ಎಂಬುದರ ಜೊತೆಗೆ ಆಸ್ಕರ್ ಪಡೆದವರು ಏನು ಮಾತನಾಡುತ್ತಾರೆ ಎಂಬುದು ಸಹ ಆ ನಂತರ ಬಹುವಾಗಿ ಚರ್ಚೆಯಾಗುವ ವಿಷಯ. ಭಾರತದ ಹೆಮ್ಮೆಯ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (AR Rahaman) ಎರಡು ಆಸ್ಕರ್​ಗಳನ್ನು ಪಡೆದಿದ್ದು ಆಸ್ಕರ್ ಪಡೆದಾಗ ಸಹಜವಾಗಿಯೇ ಚುಟುಕು ಭಾಷಣವನ್ನು ವೇದಿಕೆಯಲ್ಲಿ ಮಾಡಿದ್ದರು. ಆದರೆ ಅಂದು ತಾವು ಮಾಡಿದ್ದ ಭಾಷಣವನ್ನು ತಪ್ಪಾಗಿ ಅರ್ಥೈಸಲಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ ರೆಹಮಾನ್.

ಆಸ್ಕರ್ ಪಡೆದವರು ಮಾಡಿದ ಭಾಷಣಗಳ ಬಗ್ಗೆ ಅದರ ಹಿನ್ನೆಲೆಯ ಬಗ್ಗೆ ಅಕಾಡೆಮಿ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನ್ಸ್ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎ.ಆರ್.ರೆಹಮಾನ್ ಸಹ ತಮ್ಮ ಆಸ್ಕರ್ ಭಾಷಣದ ಬಗ್ಗೆ ಮಾತನಾಡಿದ್ದಾರೆ. ತಾವು ಆಸ್ಕರ್ ಪಡೆದ ಬಗ್ಗೆ ಹಾಗೂ ಪಡೆದ ನಂತರ ಆಡಿದ ಮಾತುಗಳ ಬಗ್ಗೆ ರೆಹಮಾನ್ ವಿಡಿಯೋದಲ್ಲಿ ವಿವರಿಸಿದ್ದಾರೆ.

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುನ್ನ ಕೆಲವು ಒಳ್ಳೆಯ ಡಿನ್ನರ್ ಪಾರ್ಟಿಗಳಲ್ಲಿ ಪಾಲ್ಗೊಂಡು ಒಳ್ಳೆಯ ಜನರನ್ನು ಭೇಟಿ ಮಾಡಿದ್ದೆ. ನನಗೆ ಪ್ರಶಸ್ತಿ ಬರುತ್ತದೆ ಎಂಬ ವಿಶ್ವಾಸ ನನಗೆ ಇರಲಿಲ್ಲ. ಹಾಗಾಗಿ ಭಾಷಣ ತಯಾರಿಸಿಕೊಂಡಿರಲಿಲ್ಲ. ಆದರೆ ಹಾಲಿವುಡ್​ನ ಜನಪ್ರಿಯ ಸಂಗೀತ ನಿರ್ದೇಶಕ ಡ್ಯಾನಿ ಎಲ್ಫ್​ಮೆನ್ ನಿನಗೇ ಪ್ರಶಸ್ತಿ ಬರುತ್ತದೆ ಎಂದಿದ್ದರು. ನಾನು ಸಹ ಕಾರ್ಯಕ್ರಮ ನೋಡುತ್ತಾ ಸುಮ್ಮನೆ ಕುಳಿತಿದ್ದೆ. ಆಗ ಪ್ರಶಸ್ತಿ ಪಡೆದ ನಟಿಯೊಬ್ಬರು ಫ್ರೆಂಚ್​ನಲ್ಲಿ ಮಾತನಾಡಿದ್ದು ನನ್ನ ಗಮನ ಸೆಳೆಯಿತು. ಆಗ ನಾನೂ ಅಂದುಕೊಂಡೆ, ಪ್ರಶಸ್ತಿ ಬಂದರೆ ಮಾತೃಭಾಷೆಯಲ್ಲಿ ಮಾತನಾಡೋಣವೆಂದು ಎಂದು ಅಂದಿನ ದಿನದ ತಮ್ಮ ಮನಸ್ಥಿತಿ ವಿವರಿಸಿದ್ದಾರೆ ಎ.ಆರ್.ರೆಹಮಾನ್.

ರೆಹಮಾನ್ ಹೆಸರು ಘೋಷಿಸಿದಾಗ ಅವರಿಗೆ ನಂಬಲು ಸಾಧ್ಯವಾಗಲಿಲ್ಲವಂತೆ. ”ಇದು ಕನಸೋ, ನನಸೋ ನನಗೆ ತಿಳಿಯಲಿಲ್ಲ. ನನಗೆ ಬಹಳ ಖುಷಿಯಾಗುತ್ತಿತ್ತು ಆದರೂ ನಾನು ಶಾಂತವಾಗಿ ಇರುವಂತೆ ನಟಿಸಿದೆ ಏಕೆಂದರೆ ಅದರ ಬಳಿಕ ನಾನು ಲೈವ್ ಫರ್ಪಾಮೆನ್ಸ್ ನೀಡಲಿಕ್ಕಿತ್ತು. ನನ್ನ ಭಾಷಣವನ್ನು ನಾನು ತಯಾರು ಮಾಡಿಕೊಂಡಿರಲಿಲ್ಲ ಹಾಗಾಗಿ ತಮಿಳಿನಲ್ಲಿ ಎಲ್ಲ ಹೊಗಳಿಕೆಗಳು ದೇವರಿಗೆ ಅರ್ಪಣೆ ಎಂದು ಹೇಳಿದೆ. ತಮಿಳು ಜನರಿಗೆ ಇದು ನಿಮಗೆ ಸೇರಿದ್ದು ಎಂದು ಹೇಳಿದೆ” ಎಂದಿದ್ದಾರೆ ರೆಹಮಾನ್.

ಅದಾದ ಬಳಿಕ ಮತ್ತೊಂದು ಆಸ್ಕರ್ ಅನ್ನು ಗೆದ್ದಾಗ ವೇದಿಕೆ ಏರಿದ ರೆಹಮಾನ್, ಸ್ಲಮ್ ಡಾಗ್ ಮಿಲಿಯನೇರ್ ಸಿನಿಮಾದ ಸಾರ, ಆಶಾವಾದ ಮತ್ತು ಭರವಸೆ ಎಂದರು ಬಳಿಕ ಮಾತು ಮುಂದುವರೆಸಿ, ”ನನ್ನ ಜೀವನದಲ್ಲಿ ಮೊದಲಿನಿಂದಲೂ ಎರಡು ಆಯ್ಕೆಗಳು ನನ್ನ ಮುಂದೆ ಇತ್ತು, ಒಂದು ಪ್ರೀತಿ ಮತ್ತೊಂದು ದ್ವೇಷ ಆದರೆ ನಾನು ಪ್ರೀತಿಯನ್ನು ಆಯ್ದುಕೊಂಡೆ ಈಗ ಇಲ್ಲಿ ಬಂದು ನಿಂತಿದ್ದೇನೆ” ಎಂದರು. ರೆಹಮಾನ್ ಧರ್ಮದ ಬಗ್ಗೆ ಹೇಳಿದ್ದಾರೆ. ಹಿಂದೂ ಧರ್ಮವನ್ನು ದ್ವೇಷವೆಂದು, ಅದನ್ನು ತ್ಯಜಿಸಿ ಮುಸ್ಲಿಂ ಧರ್ಮ ಆರಿಸಿಕೊಂಡಿದ್ದರ ಬಗ್ಗೆ ರೆಹಮಾನ್ ಮಾತನಾಡಿದ್ದಾರೆ ಎಂದಿದ್ದರು.

ಈ ಬಗ್ಗೆ ಮಾತನಾಡಿರುವ ರೆಹಮಾನ್, ”ನನ್ನ ಅಂದಿನ ಮಾತನ್ನು ತಪ್ಪಾಗಿ ಅರ್ಥೈಸಲಾಯಿತು. ನಾನು ಧರ್ಮದ ಬಗ್ಗೆ ಮಾತನಾಡಿದ್ದೇನೆ ಎನ್ನಲಾಯಿತು. ಆದರೆ ಅದು ಸುಳ್ಳು, ಎಲ್ಲ ಕಲಾವಿದರೂ ಸಹ ಇದನ್ನು ಎದರಿಸುತ್ತಾರೆ. ದ್ವೇಷ, ನಿರಾಕರಣೆ ಕಂಡಿರುತ್ತಾರೆ ಆದರೆ ಪ್ರೀತಿಯ ದಾರಿಯನ್ನು ಅವರು ಆಯ್ದುಕೊಂಡಿರುತ್ತಾರೆ. ಅದಕ್ಕಾಗಿಯೇ ಅವರು ಕಲಾವಿದರಾಗಿರುತ್ತಾರೆ. ಅದನ್ನೇ ನಾನು ಅಂದು ಹೇಳಿದ್ದೆ” ಎಂದಿದ್ದಾರೆ ರೆಹಮಾನ್.

2008 ರಲ್ಲಿ ಬಿಡುಗಡೆ ಆಗಿದ್ದ ಹಾಲಿವುಡ್ ಸಿನಿಮಾ ‘ಸ್ಲಮ್ ಡಾಗ್ ಮಿಲಿಯನೇರ್’​ಗಾಗಿ ಎ.ಆರ್.ರೆಹಮಾನ್​ ಎರಡು ಆಸ್ಕರ್ ಗೆದ್ದರು. ಇದೀಗ ಮತ್ತೊಮ್ಮೆ ಸಂಗೀತ ವಿಭಾಗದಲ್ಲಿಯೇ ಭಾರತದ ಆರ್​ಆರ್​ಆರ್ ಸಿನಿಮಾ ಆಸ್ಕರ್​ಗೆ ನಾಮಿನೇಟ್ ಆಗಿದ್ದು ಆಸ್ಕರ್ ಗೆಲ್ಲುವ ನಿರೀಕ್ಷೆಯಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ