ಹಾಲಿವುಡ್ ನಟಿ ರೆಜೀನಾ ಕಿಂಗ್ (Regina King) ಬಾಳಿನಲ್ಲಿ ಕತ್ತಲು ಆವರಿಸಿದೆ. ಬಹಳ ಪ್ರೀತಿಯಿಂದ ಬೆಳೆಸಿದ್ದ ಅವರ ಮಗ ಇಯಾನ್ ಅಲೆಕ್ಸಾಂಡರ್ ಜ್ಯೂನಿಯರ್ (Ian Alexander Jr) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸುದ್ದಿ ಕೇಳಿ ರೆಜೀನಾ ಕಿಂಗ್ ಅಭಿಮಾನಿಗಳಿಗೆ ಶಾಕ್ ಆಗಿದೆ. ‘ಇಯಾನ್ ಅಲೆಕ್ಸಾಂಡರ್ ಜ್ಯೂನಿಯರ್ ನಿಧನದಿಂದಾಗಿ ನಮ್ಮ ಕುಟುಂಬಕ್ಕೆ ತೀವ್ರ ನೋವಾಗಿದೆ. ಇತರರ ಖುಷಿಗಾಗಿ ಅವರು ಕಾಳಜಿ ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ’ ಎಂದು ರೆಜೀನಾ ಕಿಂಗ್ ಅವರು ಹೇಳಿಕೆ ಬಿಡುಗಡೆ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ದುರಂತ ಏನೆಂದರೆ, ಕೆಲವೇ ದಿನಗಳ ಹಿಂದೆ ಇಯಾನ್ ಅಲೆಕ್ಸಾಂಡರ್ ಜ್ಯೂನಿಯರ್ ಅವರ ಜನ್ಮದಿನ (ಜ.19) ಆಚರಣೆ ಮಾಡಲಾಗಿತ್ತು. ಆ ಖುಷಿಯ ಕ್ಷಣಗಳು ಇನ್ನೂ ಹಸಿರಾಗಿರುವಾಗಲೇ ಅವರು ಆತ್ಮಹತ್ಯೆಯ ಹಾದಿ ಹಿಡಿದಿರುವುದು ಯಾಕೆ ಎಂಬುದು ತಿಳಿದುಬಂದಿಲ್ಲ. ಮಗನನ್ನು ಕಳೆದುಕೊಂಡಿರುವ ರೆಜೀನಾ ಕಿಂಗ್ ಅವರಿಗೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ (Oscar Awards), ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಂತಾದ ಪುರಸ್ಕಾರಗಳಿಗೆ ಪಾತ್ರರಾಗಿದ್ದ ರೆಜೀನಾ ಕಿಂಗ್ ಅವರು ಈಗ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
1980ರ ದಶಕದಿಂದಲೂ ರೆಜೀನಾ ಕಿಂಗ್ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ನಟಿಯಾಗಿ, ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಅವರಿಗೆ ಈಗ 51 ವರ್ಷ ವಯಸ್ಸು. ಪತಿ ಇಯಾನ್ ಅಲೆಕ್ಸಾಂಡರ್ಗೆ 2007ರಲ್ಲಿಯೇ ವಿಚ್ಛೇದನ ನೀಡಿದರು. ಈ ದಂಪತಿಯ ಮಗನೇ ಇಯಾನ್ ಅಲೆಕ್ಸಾಂಡರ್ ಜ್ಯೂನಿಯರ್. ಅವರು ಡಿಜೆ ಆಗಿ ಫೇಮಸ್ ಆಗಿದ್ದರು. ಅವರಿಗೆ 26 ವರ್ಷ ವಯಸ್ಸಾಗಿತ್ತು.
ಇಯಾನ್ ಅಲೆಕ್ಸಾಂಡರ್ ಜ್ಯೂನಿಯರ್ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ. ಆದರೆ ಅವರು ಈ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ. ರೆಜೀನಾ ಕಿಂಗ್ ಅವರು ಸ್ಟಾರ್ ನಟಿ, ನಿರ್ದೇಶಕಿ ಆಗಿದ್ದರಿಂದ ಅನೇಕ ಸಮಾರಂಭಗಳ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿದ್ದುಂಟು. ಆಗೆಲ್ಲ ಅವರ ಜೊತೆ ಪುತ್ರ ಇಯಾನ್ ಅಲೆಕ್ಸಾಂಡರ್ ಜ್ಯೂನಿಯರ್ ಕೂಡ ಕಾಣಿಸಿಕೊಳ್ಳುತ್ತಿದ್ದರು. ಮಗನ ಬಗ್ಗೆ ಅವರು ಸಾರ್ವಜನಿಕವಾಗಿ ಹಲವು ಬಾರಿ ಮಾತನಾಡಿದ್ದರು. ಪುತ್ರನ ಭವಿಷ್ಯದ ಬಗ್ಗೆ ಅವರು ಹಲವು ಕನಸುಗಳನ್ನು ಇಟ್ಟುಕೊಂಡಿದ್ದರು. ಕೆಲವೇ ವಾರಗಳ ಹಿಂದೆ ಇಯಾನ್ ಅಲೆಕ್ಸಾಂಡರ್ ಜ್ಯೂನಿಯರ್ ಹೊಸ ಹಾಡು ಬಿಡುಗಡೆ ಮಾಡಿದ್ದಾಗ ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಮೂಲಕ ರೆಜೀನಾ ಕಿಂಗ್ ಅವರು ಜನರ ಬೆಂಬಲ ಕೋರಿದ್ದರು.
ತಾಯಿಯ ಬಗ್ಗೆ ಇಯಾನ್ ಅಲೆಕ್ಸಾಂಡರ್ ಜ್ಯೂನಿಯರ್ ಅಪಾರ ಪ್ರೀತಿ ಹೊಂದಿದ್ದರು. ಆ ಕುರಿತು ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದರು. ರೆಜೀನಾ ಅವರ 50ನೇ ವರ್ಷದ ಹುಟ್ಟುಹಬ್ಬದ ಸಮಯದಲ್ಲಿ ವಿಶ್ ಮಾಡಿದ್ದ ಅವರು, ‘ನಿಮ್ಮಂಥ ತಾಯಿಯನ್ನು ಪಡೆದಿರುವುದು ನನ್ನ ಪಾಲಿಗೆ ಶ್ರೇಷ್ಠ ಉಡುಗೊರೆ. ನೀವೇ ನನ್ನ ಸೂಪರ್ ಹೀರೋ. ಎಂದೆಂದಿಗೂ ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ಪೋಸ್ಟ್ ಮಾಡಿದ್ದರು.
ತಾಯಿಯ ಬಗ್ಗೆ ಇಷ್ಟೆಲ್ಲ ಪ್ರೀತಿ ಇಟ್ಟುಕೊಂಡಿದ್ದ ಇಯಾನ್ ಅಲೆಕ್ಸಾಂಡರ್ ಜ್ಯೂನಿಯರ್ ಅವರು ಈಗ ಅಮ್ಮನನ್ನು ಒಂಟಿಯಾಗಿಸಿ, ಬಾರದ ಲೋಕಕ್ಕೆ ತೆರಳಿದ್ದಾರೆ. ಅವರ ಸಾವಿನ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಆತ್ಮಹತ್ಯೆಗೆ ಕಾರಣ ಏನಿರಬಹುದು ಎಂಬ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ:
‘ಮಹಾಭಾರತ’ ಸೀರಿಯಲ್ ಅರ್ಜುನ ಪಾತ್ರಧಾರಿ ಶಾಹೀರ್ ಶೇಖ್ ತಂದೆ ಕೊವಿಡ್ನಿಂದ ನಿಧನ
ಸಲ್ಮಾನ್ ಖಾನ್ ಪರ ಲಾಯರ್ ಶ್ರೀಕಾಂತ್ ಶಿವಡೆ ಕ್ಯಾನ್ಸರ್ನಿಂದ ನಿಧನ; ‘ತಕ್ಕ ಶಿಕ್ಷೆ ಸಿಕ್ತು’ ಎಂದ ನೆಟ್ಟಿಗರು