ಪ್ರಶಾಂತ್ ನೀಲ್ (Prashanth Neel) ಅವರಿಗೆ ಇಂದು (ಜೂನ್ 4) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಕನ್ನಡ ಚಿತ್ರರಂಗವನ್ನು ಬೇರೆಯದೇ ಹಂತಕ್ಕೆ ಕರೆದುಕೊಂಡು ಹೋದ ಖ್ಯಾತಿ ಅವರಿಗೆ ಇದೆ. ಅವರ ಮುಂದಿನ ಚಿತ್ರದ ಬಗ್ಗೆ ಘೋಷಣೆ ಆಗಿಲ್ಲ. ಈಗ ಅವರ ಜನ್ಮದಿನಕ್ಕೆ ನಿರ್ಮಾಣ ಸಂಸ್ಥೆಗಳಾದ ಹೊಂಬಾಳೆ ಫಿಲ್ಮ್ಸ್ ಹಾಗೂ ಮೈತ್ರಿ ಮೂವೀ ಮೇಕರ್ಸ್ ಕಡೆಯಿಂದ ಶುಭಾಶಯ ಬಂದಿದೆ. ಆದರೆ, ‘ಕೆಜಿಎಫ್ 3’ ಬಗ್ಗೆ ಆಗಲಿ, ಜೂನಿಯರ್ ಎನ್ಟಿಆರ್ ಕುರಿತ ಸಿನಿಮಾ ಬಗ್ಗೆ ಆಗಲಿ ಯಾವುದೇ ಘೋಷಣೆ ಆಗಿಲ್ಲ. ಇದರ ಬಗ್ಗೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದು ಕೆಲವೇ ಕೆಲವು ಸಿನಿಮಾಗಳನ್ನು. ‘ಉಗ್ರಂ’ ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿತು. ಆದರೆ, ಈ ಚಿತ್ರದಿಂದ ಅವರ ಖ್ಯಾತಿ ಹೆಚ್ಚಿತು. ಆ ಬಳಿಕ ಅವರಿಗೆ ‘ಕೆಜಿಎಫ್’ ಆಫರ್ ಸಿಕ್ಕಿತು. ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರಗಳಿಂದ ಅವರು ದೊಡ್ಡ ಗೆಲುವು ಕಂಡರು. ‘ಕೆಜಿಎಫ್ 3’ ಬರುವ ಸೂಚನೆ ಕೊಟ್ಟ ಬಳಿಕ ಅವರು ‘ಸಲಾರ್’ ಸಿನಿಮಾ ಕೈಗೆತ್ತಿಕೊಂಡರು. ಇದಕ್ಕೆ ಎರಡನೇ ಪಾರ್ಟ್ ಬರಬೇಕಿದೆ. ಈ ಯಾವ ಸಿನಿಮಾ ಬಗ್ಗೆಯೂ ಹೊಂಬಾಳೆ ಅಪ್ಡೇಟ್ ನೀಡಿಲ್ಲ.
ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸು ಸಿಗಲಿ, ಒಳ್ಳೆಯದಾಗಲಿ ಎಂದು ಪ್ರಶಾಂತ್ ನೀಲ್ಗೆ ಹೊಂಬಾಳೆ ವಿಶ್ ಮಾಡಿದೆ. ‘ಕೆಜಿಎಫ್ ಮೂರನೇ ಪಾರ್ಟ್ ಬಗ್ಗೆ ಅಪ್ಡೇಟ್ ಸಿಗಲಿ’ ಎಂದು ಕೆಲವರು ಕೋರಿದ್ದಾರೆ. ‘ಅದ್ಭುತ ಸಿನಿಮಾಗಳನ್ನು ನೀಡಿದ ನಿಮಗೆ ಧನ್ಯವಾದ’ ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ನೀಲ್-ಜೂ ಎನ್ಟಿಆರ್ ಸಿನಿಮಾಕ್ಕೆ ಯುವ ನಾಯಕ ನಟ ಎಂಟ್ರಿ
ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ಟಿಆರ್ ಒಟ್ಟಾಗಿ ಸಿನಿಮಾ ಮಾಡಬೇಕಿದೆ. ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡುತ್ತಿದೆ. ಅವರು ಕೂಡ ಪ್ರಶಾಂತ್ ನೀಲ್ಗೆ ವಿಶ್ ಮಾಡಿದ್ದಾರೆ. ಇದರಲ್ಲಿ ಪ್ರಶಾಂತ್ ಅವರ ಕೆಲಸವನ್ನು ಹೊಗಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.