ಬಹುನಿರೀಕ್ಷಿತ ‘ಆಡುಜೀವಿತಂ’ (ಗೋಟ್ ಲೈಫ್) ಸಿನಿಮಾ ಮಾರ್ಚ್ 28ರಂದು ಬಿಡುಗಡೆ ಆಗಲಿದೆ. ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬ್ಲೆಸ್ಸಿ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಕರ್ನಾಟಕದಲ್ಲಿ ‘ಹೊಂಬಾಳೆ ಫಿಲ್ಮ್ಸ್’ (Hombale Films) ಬಿಡುಗಡೆ ಮಾಡಲಿದೆ. ‘ಆಡುಜೀವಿತಂ’ ಚಿತ್ರದ ವಿತರಣೆಯ ಹಕ್ಕನ್ನು ಪಡೆದುಕೊಂಡಿರುವ ವಿಜಯ್ ಕಿರಗಂದೂರು ಅವರು ಈ ಸಿನಿಮಾವನ್ನು ಅರ್ಪಿಸಿ, ರಿಲೀಸ್ ಮಾಡುತ್ತಿದ್ದಾರೆ. ವಿಜಯ್ ಕಿರಗಂದೂರು (Vijay Kiragandur) ಮತ್ತು ಪೃಥ್ವಿರಾಜ್ ಸುಕುಮಾರನ್ ನಡುವೆ ಉತ್ತಮ ಗೆಳೆತನ ಇದೆ.
‘ಹೊಂಬಾಳೆ ಫಿಲ್ಮ್ಸ್’ ಮೂಲಕ ನಿರ್ಮಾಣ ಆಗಿದ್ದ ‘ಕೆಜಿಎಫ್’, ‘ಕಾಂತಾರ’ ಸಿನಿಮಾಗಳನ್ನು ಪೃಥ್ವಿರಾಜ್ ಸುಕುಮಾರನ್ ಅವರು ಕೇರಳದಲ್ಲಿ ರಿಲೀಸ್ ಮಾಡಿದ್ದರು. ಈಗ ಪೃಥ್ವಿರಾಜ್ ಅಭಿನಯಿಸಿದ ‘ಆಡುಜೀವಿತಂ’ ಸಿನಿಮಾವನ್ನು ವಿಜಯ್ ಕಿರಗಂದೂರು ಅವರು ಕರುನಾಡಿನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದು, ಈ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಹಾಲಿವುಡ್ ಕಲಾವಿದ ಜಿಮ್ಮಿ ಜೀನ್ ಲೂಯಿಸ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದು, ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿರಾಜ್ ಸುಕುಮಾರನ್ ಅವರು, ‘ಹೊಂಬಾಳೆ ಫಿಲ್ಮ್ಸ್ ಮೂಲಕ ನಮ್ಮ ಸಿನಿಮಾ ಬಿಡುಗಡೆ ಆಗುತ್ತಿರುವುದು ಬಹಳ ಖುಷಿ ನೀಡಿದೆ’ ಎಂದರು. ನಜೀಬ್ ಎಂಬ ವ್ಯಕ್ತಿಯ ಬದುಕಿನ ನೈಜ ಘಟನೆಗಳನ್ನು ಇಟ್ಟುಕೊಂಡು ಬರೆದ ‘ಆಡುಜೀವಿತಂ’ ಕಾದಂಬರಿಯನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಅಮಲಾ ಪೌಲ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎ.ಆರ್. ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಏಕಕಾಲಕ್ಕೆ ಮಲಯಾಳಂ, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ‘ಅಗತ್ಯ ಇದ್ದಿದ್ದಕ್ಕೆ ಲಿಪ್ ಕಿಸ್ ಮಾಡಿದೆ’: ಪೃಥ್ವಿರಾಜ್ ಜತೆಗಿನ ದೃಶ್ಯದ ಬಗ್ಗೆ ಅಮಲಾ ಪೌಲ್ ಪ್ರತಿಕ್ರಿಯೆ
‘ನಿರ್ದೇಶಕ ಬ್ಲೆಸ್ಸಿ ಅವರು ಈ ಸಿನಿಮಾವನ್ನು ಮಾಡಬೇಕು ಎಂದುಕೊಂಡಿದ್ದು 2008ರಲ್ಲಿ. ಆದರೆ ಶೂಟಿಂಗ್ ಆರಂಭವಾಗಿದ್ದು 2018ರಲ್ಲಿ. ಈ ಸಿನಿಮಾದ ಸಲುವಾಗಿ 16 ವರ್ಷಗಳ ಪರಿಶ್ರಮ ಹಾಕಲಾಗಿದೆ. ನಾನು ಈ ಪಾತ್ರಕ್ಕಾಗಿ 31 ಕೆಜಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದೇನೆ. ಬೆನ್ಯಾಮಿನ್ ಬರೆದ ಆಡುಜೀವಿತಂ ಕಾದಂಬರಿಯನ್ನು ಆಧರಿಸಿದ ಸಿನಿಮಾ ಇದು. ಈ ಫೇಮಸ್ ಕಾದಂಬರಿಯು ಈವರೆಗೂ 251 ಬಾರಿ ಮುದ್ರಣವಾಗಿದೆ’ ಎಂದು ಪೃಥ್ವಿರಾಜ್ ಸುಕುಮಾರನ್ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.