‘ಜೈಲರ್’ (Jailer) ಸಿನಿಮಾದ ಬಳಿಕ ಶಿವರಾಜ್ ಕುಮಾರ್ (Shiva Rajkumar) ಅವರಿಗೆ ದೊಡ್ಡ ಅಭಿಮಾನಿ ವರ್ಗ ತಮಿಳುನಾಡಿನಲ್ಲಿ ಸೃಷ್ಟಿಯಾಗಿದೆ. ತಮಿಳುನಾಡಿನ ಸ್ಟಾರ್ ನಟರ ಸಾಲಿನಲ್ಲಿ ನಿಲ್ಲಬಹುದಾದಷ್ಟು ಕ್ರೇಜ್ ಶಿವಣ್ಣನಿಗೆ ತಮಿಳುನಾಡಿನಲ್ಲಿದೆ. ಇದೀಗ ಶಿವರಾಜ್ ಕುಮಾರ್ ನಟಸಿರುವ ಮತ್ತೊಂದು ತಮಿಳು ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’ ಬಿಡುಗಡೆ ಆಗುತ್ತಿದೆ. ಅಸಲಿಗೆ ‘ಜೈಲರ್’ ಸಿನಿಮಾಕ್ಕೂ ಮೊದಲೇ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದರು ಶಿವರಾಜ್ ಕುಮಾರ್. ಅಂದಹಾಗೆ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾಕ್ಕೆ ಶಿವರಾಜ್ ಕುಮಾರ್ ಅವರೇ ಬೇಕೆಂದು ನಿರ್ದೇಶಕ ಅರುಣ್ ಮಟ್ಟೇಶ್ವರನ್ ಹಠಹಿಡಿದಿದ್ದು ಏಕೆ? ಅದಕ್ಕೊಂದು ಕಾರಣವಿದೆ.
ಇತ್ತೀಚೆಗಷ್ಟೆ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಚೆನ್ನೈನಲ್ಲಿ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಶಿವಣ್ಣನ ಬಗ್ಗೆ ಹಲವು ನಟ, ತಂತ್ರಜ್ಞರು ಬಹಳ ಪ್ರೀತಿ, ಗೌರವದಿಂದ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಅರುಣ್ ಮಟ್ಟೇಶ್ವರನ್ ತಾವೇಕೆ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾಕ್ಕೆ ಶಿವರಾಜ್ ಕುಮಾರ್ ಅವರೇ ಬೇಕೆಂದು ಬಯಸಿದ್ದಾಗಿ ಹೇಳಿಕೊಂಡರು.
‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಪ್ರಮುಖ ಪಾತ್ರವೊಂದಕ್ಕಾಗಿ ಹುಡುಕಾಟ ನಡೆಸುತ್ತಿರುವಾಗ ನಿರ್ದೇಶಕ ಅರುಣ್ ಮಟ್ಟೇಶ್ವರನ್ ಅವರ ಗೆಳೆಯರೊಬ್ಬರು ಅವರಿಗೆ ‘ಮಫ್ತಿ’ ಸಿನಿಮಾದ ಟ್ರೈಲರ್ ತೋರಿಸಿದರಂತೆ. ಆ ಟ್ರೈಲರ್ನಲ್ಲಿ ಕಪ್ಪು ಶರ್ಟ್, ಕಂದು ಬಣ್ಣದ ಪಂಚೆಯಲ್ಲಿ ಶಿವರಾಜ್ ಕುಮಾರ್ ಅವರ ಸ್ವಾಗ್ ನೋಡಿ ಅರುಣ್ಗೆ ಶಾಕ್ ಆಯ್ತಂತೆ. ನನ್ನ ಸಿನಿಮಾಕ್ಕೆ ಇವರೇ ಸೂಕ್ತ ವ್ಯಕ್ತಿ ಎಂದು ನಿಶ್ಚಯಿಸಿಬಿಟ್ಟರಂತೆ ಅರುಣ್.
ಇದನ್ನೂ ಓದಿ:ಶಿವರಾಜ್ ಕುಮಾರ್-ರಾಮ್ ಚರಣ್ ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ
ಶಿವರಾಜ್ ಕುಮಾರ್ ಅವರನ್ನು ಸಿನಿಮಾದಲ್ಲಿ ನಟಿಸುವಂತೆ ಕೇಳಲು ಬೆಂಗಳೂರಿಗೆ ಬಂದಾಗ ಶಿವಣ್ಣ ಶೂಟಿಂಗ್ ಒಂದರಲ್ಲಿ ಬ್ಯುಸಿಯಾಗಿದ್ದರಂತೆ. ಕ್ಯಾರಾವ್ಯಾನ್ ನಲ್ಲಿ ಕೂತಿದ್ದಾಗ ಶಿವಣ್ಣನನ್ನು ಭೇಟಿಯಾಗಲು ಹೋದರಂತೆ ಅರುಣ್, ಒಳಗೆ ಹೋದಾಗ ಅವರಿಗೆ ‘ಗಾಡ್ ಫಾದರ್’ ಸಿನಿಮಾದ ಮೊದಲ ಸೀನ್ ನೆನಪಾಯ್ತಂತೆ. ತಾನೂ ಸಹ ಗಾಡ್ ಫಾದರ್ ನ ಡಾನ್ ಕಾರ್ಲಿಯೋನೆಯನ್ನು ಭೇಟಿ ಆಗಲು ಹೋಗುತ್ತಿರುವ ಭಾವ ಬಂದಿತಂತೆ. ಕತೆ ಕೇಳಿದ ಶಿವಣ್ಣ, ತನಗೆ ಧನುಶ್ ಎಂದರೆ ಬಹಳ ಇಷ್ಟವೆಂದು, ಅವರಿಗಾಗಿ ತಾವು ಸಿನಿಮಾದಲ್ಲಿ ನಟಿಸುವುದಾಗಿ ಹೇಳಿ ಸುಲಭಕ್ಕೆ ಒಪ್ಪಿಕೊಂಡುಬಿಟ್ಟರಂತೆ.
‘ಕ್ಯಾಪ್ಟನ್ ಮಿಲ್ಲರ್’ ಸ್ವತಂತ್ರ್ಯ ಪೂರ್ವದ ಕತೆ ಹೊಂದಿದ್ದು ಧನುಶ್ ಹಾಗೂ ಶಿವರಾಜ್ ಕುಮಾರ್ ಜೊತೆಗೆ ಇನ್ನೂ ಕೆಲವು ಪ್ರತಿಭಾವಂತ ನಟರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್, ಹಾಡು ಈಗಾಗಲೇ ಬಿಡುಗಡೆ ಆಗಿದ್ದು, ಬಹಳ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾ ಜನವರಿ 12ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ