ಪೊಲೀಸರಿಗೆ, ಟಾಲಿವುಡ್​ಗೆ ಎಚ್ಚರಿಕೆ ನೀಡಿದ ಪೈರಸಿ ದುರುಳರು

Tollywood Movies: ಪೈರಸಿ ಎಂಬುದು ನಿರ್ಮಾಪಕರ ಅತಿ ದೊಡ್ಡ ಶತ್ರು. ಇತ್ತೀಚೆಗಷ್ಟೆ ಹೈದರಾಬಾದ್ ಪೊಲೀಸರು ಕೆಲ ಪ್ರಮುಖ ಪೈರಸಿ ವೆಬ್​​ಸೈಟ್​​ಗಳನ್ನು ಬಂದ್ ಮಾಡಿ ಕೆಲವರನ್ನು ಬಂಧಿಸಿದ್ದಾರೆ. ಇನ್ನೂ ಕೆಲವರನ್ನು ಬಂಧಿಸುವ ಭರವಸೆ ನೀಡಿದ್ದಾರೆ. ಅದರ ಬೆನ್ನಲ್ಲೆ ಇದೀಗ ಪ್ರಮುಖ ಪೈರಸಿ ವೆಬ್​​ಸೈಟ್ ಒಂದು ಪೊಲೀಸರಿಗೆ ಬೆದರಿಕೆ ಹಾಕಿದೆ.

ಪೊಲೀಸರಿಗೆ, ಟಾಲಿವುಡ್​ಗೆ ಎಚ್ಚರಿಕೆ ನೀಡಿದ ಪೈರಸಿ ದುರುಳರು
Ibomma

Updated on: Oct 01, 2025 | 4:36 PM

ಪೈರಸಿ (Piracy) ಎಂಬುದು ಚಿತ್ರರಂಗದ ಬಲು ದೊಡ್ಡ ಶತ್ರು. ಈ ಪೈರಸಿಯಿಂದಾಗಿ ಹಲವಾರು ಸಿನಿಮಾಗಳು ದೊಡ್ಡ ನಷ್ಟವನ್ನು ಅನುಭವಿಸಿವೆ. ಇತ್ತೀಚೆಗಷ್ಟೆ ಹೈದರಾಬಾದ್ ಪೊಲೀಸರು, ಈ ಪೈರಸಿ ಮಾಡುತ್ತಿದ್ದ ಮೂರು ಪ್ರಮುಖ ಪೈರಸಿ ತಂಡಗಳನ್ನು ಬಂಧಿಸಿ, ಪೈರಸಿ ವೆಬ್​​ಸೈಟ್​​ಗಳನ್ನು ಬಂಧಿಸಿದ್ದರು. ಈ ಮೂರು ವೆಬ್​​ಸೈಟ್​​ಗಳಿಂದ ತೆಲುಗು ಚಿತ್ರರಂಗ ಒಂದಕ್ಕೆ ಸುಮಾರು 3700 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದರು. ಅಲ್ಲದೆ, ಇನ್ನೂ ಕೆಲ ಪೈರಸಿಕೋರರನ್ನು ಶೀಘ್ರವೇ ಬಂಧಿಸಿ, ಅವರ ವೆಬ್​​ಸೈಟ್​​ಗಳನ್ನು ಬಂದ್ ಮಾಡಿಸುವುದಾಗಿ ಹೇಳಿದ್ದರು. ಅದರ ಬೆನ್ನಲ್ಲೆ ಇದೀಗ ಪ್ರಮುಖ ಪೈರಸಿ ಸಿನಿಮಾ ವೆಬ್​​ಸೈಟ್ ಆಗಿರುವ ಐಬೊಮ್ಮ ಪೊಲೀಸರಿಗೆ ಮತ್ತು ಟಾಲಿವುಡ್​ಗೆ ನೇರವಾಗಿ ಎಚ್ಚರಿಕೆ ನೀಡಿದೆ.

ಐಬೊಮ್ಮ, ಸಿನಿಮಾ ಪೈರಸಿ ವೆಬ್​​ಸೈಟ್​ಗಳಲ್ಲಿ ಪ್ರಮುಖವಾದ ವೆಬ್​​ಸೈಟ್. ಈ ವೆಬ್​​ಸೈಟ್​​ನ ಸರ್ವರ್​​ಗಳು ವಿದೇಶಿ ಆಗಿದ್ದು ಐಬೊಮ್ಮ ಹಿಂದಿರುವವರನ್ನು ಸಹ ನಾವು ಶೀಘ್ರವೇ ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದರು. ಅದರ ಹಿಂದೆಯೇ ಐಬೊಮ್ಮ ಪೈರಸಿ ತಂಡ ತಮ್ಮ ವೆಬ್​​ಸೈಟ್​​ನಲ್ಲಿ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ‘ನೀವು ನಮ್ಮ ತಂಟೆಗೆ ಬಂದರೆ ನಾವು ನಿಮ್ಮ ತಂಟೆಗೆ ಬರುತ್ತೇವೆ’ ಎಂದು ಐಬೊಮ್ಮ ಹೇಳಿದೆ.

ಇದರ ಜೊತೆಗೆ ತೆಲುಗು ಚಿತ್ರರಂಗದ ಬಗ್ಗೆ ವಿಶೇಷವಾಗಿ ಸ್ಟಾರ್ ನಟರುಗಳ ಬಗ್ಗೆ ತೀವ್ರ ಆಕ್ಷೇಪವನ್ನು ತಮ್ಮ ಪ್ರಕಟಣೆಯಲ್ಲಿ ಐಬೊಮ್ಮ ಹೊರಹಾಕಿದೆ. ‘ನಟರಿಗೆ ಅಷ್ಟು ದೊಡ್ಡ ಸಂಭಾವನೆ ಬೇಕ? ಸಿನಿಮಾ ಕಾರ್ಮಿಕರು ಬೇರೆ ಉದ್ಯೋಗ ಮಾಡಿಯೂ ಅಷ್ಟೇ ಹಣ ದುಡಿಯಬಹುದು ಆದರೆ ನಟರು-ನಟಿಯರು ದುಡಿಯಬಲ್ಲರಾ? ನೀವು ಹೆಚ್ಚು ಹೆಚ್ಚು ಸಂಭಾವನೆ ಪಡೆದುಕೊಂಡು ಸಿನಿಮಾದ ಬಜೆಟ್ ಹೆಚ್ಚು ಮಾಡುತ್ತೀರಿ, ಬಜೆಟ್ ರಿಕವರಿಗೆ ನಿರ್ಮಾಪಕ ಟಿಕೆಟ್ ದರ ಹೆಚ್ಚಳ ಮಾಡುತ್ತಾನೆ. ಇದರಿಂದ ಜನರಿಗೆ ತೊಂದರೆ. ಆದರೆ ನಾವು ಜನರಿಗೆ ಸಿನಿಮಾ ಅನ್ನು ಉಚಿತವಾಗಿ ತೋರಿಸುತ್ತೇವೆ’ ಎಂದಿದ್ದಾರೆ.

ಇದನ್ನೂ ಓದಿ:ಪೈರಸಿ ಸಿನಿಮಾ ಪ್ರಸಾರಕ್ಕೆ ಸ್ವಂತ ಆ್ಯಪ್ ತಯಾರಿಸಿದ ಖದೀಮ ಈಗ ಪೊಲೀಸ್ ಬಲೆಗೆ

‘ನಾವು ಯಾವ ಸ್ಟಾರ್ ನಟನ ಮೇಲೂ ಟಾರ್ಗೆಟ್ ಮಾಡಿಲ್ಲ. ನಮಗೆ ಯಾವ ಸ್ಟಾರ್ ನಟನ ವಿರುದ್ಧವೂ ದ್ವೇಷ ಇಲ್ಲ. ಸಾವಿಗೆ ಭಯಪಡದವನು ಯಾವುದಕ್ಕೂ ಭಯಪಡುವುದಿಲ್ಲ. ನೀವು ನಮ್ಮ ತಂಟೆಗೆ ಬಂದರೆ, ನಿಮ್ಮ ತಂಟೆಗೆ ನಾವು ಬರದೆ ಬೇರೆ ದಾರಿಯಿಲ್ಲ. ನಾವು ಎಲ್ಲೇ ಇದ್ದರೂ ಸಹ ಭಾರತದ ಪರ ಅದರಲ್ಲೂ ತೆಲುಗು ಜನರ ಪರವಾಗಿ ಯೋಚನೆ ಮಾಡುತ್ತೇವೆ’ ಎಂದು ಪ್ರಕಟಣೆಯನ್ನು ಐಬೊಮ್ಮ ಪೈರಸಿಕೋರರು ಹೇಳಿದ್ದಾರೆ.

ಐಬೊಮ್ಮ ವೆಬ್ ಸೈಟ್ ಭಾರತದ ಪ್ರಮುಖ ಪೈರಸಿ ವೆಬ್​​ಸೈಟ್​​ಗಳಲ್ಲಿ ಒಂದಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯ ಹೊಸ ಹೊಸ ಸಿನಿಮಾಗಳನ್ನು ಪೈರಸಿ ಮಾಡಿ ವೆಬ್​​ಸೈಟ್​​ಗಳಲ್ಲಿ ಅಪ್​ಲೋಡ್ ಮಾಡುತ್ತಾರೆ ಈ ಪೈರಸಿಕೋರರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us