
‘ಜೈಲರ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿತ್ತು. ಆ ನಿರೀಕ್ಷೆಯನ್ನು ಮೀರಿ ಚಿತ್ರ ಮುನ್ನುಗ್ಗುತ್ತಿದೆ. ಈ ಚಿತ್ರಕ್ಕೆ ಎರಡನೇ ವಾರವೂ ಭರ್ಜರಿ ಗಳಿಕೆ ಆಗುತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ (Nelson Dileep Kumar) ನಿರ್ದೇಶನದ, ರಜನಿಕಾಂತ್ (Rajinikanth) ನಟನೆಯ ಈ ಸಿನಿಮಾ ಎಂಟು ದಿನಕ್ಕೆ ತಮಿಳುನಾಡಿನಲ್ಲಿ 235 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಿನಿಮಾದ ಕಲೆಕ್ಷನ್ 450+ ಕೋಟಿ ರೂಪಾಯಿ ಆಗಿದೆ ಅನ್ನೋದು ವಿಶೇಷ. ಇನ್ನೂ ಹಲವು ದಿನಗಳ ಕಾಲ ಈ ನಾಗಾಲೋಟ ಮುಂದುವರಿಯಲಿದೆ.
‘ಜೈಲರ್’ ಸಿನಿಮಾ ಆಗಸ್ಟ್ 10ರಂದು ರಿಲೀಸ್ ಆಯಿತು. ಮೊದಲ ದಿನವೇ ಈ ಚಿತ್ರ ಮ್ಯಾಜಿಕ್ ಮಾಡಿತು. ಭಾರತದಲ್ಲಿ ಈ ಚಿತ್ರ ಮೊದಲ ದಿನ 48 ಕೋಟಿ ರೂಪಾಯಿ ಬಾಚಿಕೊಂಡಿತು. ನಂತರದ ದಿನಗಳಲ್ಲೂ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಹಣ ಹರಿದು ಬಂತು. ದಕ್ಷಿಣ ಭಾರತದಲ್ಲಿ ಸಿನಿಮಾ ಪಾರುಪತ್ಯ ಸಾಧಿಸಿದೆ. ಬಾಲಿವುಡ್ ಸಿನಿಮಾಗಳ ಯಶಸ್ಸಿನ ಬಿಸಿ ಈ ಚಿತ್ರಕ್ಕೆ ತಟ್ಟುತ್ತಿಲ್ಲ.
ಬಾಲಿವುಡ್ನಲ್ಲಿ ‘ಗದರ್ 2’ ಸಿನಿಮಾ ಭರ್ಜರಿ ಕಮಾಯಿ ಮಾಡುತ್ತಿದೆ. ಈ ಚಿತ್ರ ಐದು ದಿನಕ್ಕೆ 262 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು, ‘ಒಎಂಜಿ 2’ ಸಿನಿಮಾ ಕೂಡ 100 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರಗಳು ದಕ್ಷಿಣ ಭಾರತದಲ್ಲಿ ‘ಜೈಲರ್’ ಚಿತ್ರದ ಜೊತೆ ಸ್ಪರ್ಧೆ ನೀಡೋಕೆ ಸಾಧ್ಯವಾಗುತ್ತಿಲ್ಲ. ತಮಿಳು ಮಾತ್ರವಲ್ಲದೆ, ತೆಲುಗು ಭಾಷೆಯಲ್ಲೂ ಸಿನಿಮಾ ಸದ್ದು ಮಾಡುತ್ತಿದೆ.
ಇದನ್ನೂ ಓದಿ: 400 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಜೈಲರ್’ ಸಿನಿಮಾ; ಕರ್ನಾಟಕದಲ್ಲಿ ಎಷ್ಟು ಗಳಿಕೆ?
ರಜನಿಕಾಂತ್ ಜೊತೆ ಶಿವರಾಜ್ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಬೇರೆ ಭಾಷೆಗಳಲ್ಲಿ ಸಿನಿಮಾಗೆ ಹೈಪ್ ಸೃಷ್ಟಿ ಆಗೋಕೆ ಇದೂ ಕಾರಣ. ಸದ್ಯ ರಜನಿಕಾಂತ್ ಅವರು ಹಿಮಾಚಲ್ ಪ್ರದೇಶಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಆಧ್ಯಾತ್ಮ ಗುರುಗಳನ್ನು ಭೇಟಿ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:28 am, Fri, 18 August 23