
ದಳಪತಿ ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಿ ‘ಜನ ನಾಯಗನ್’ (Jana Nayagan) ಮೂಡಿ ಬರುತ್ತಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಆದರೆ, ಯಾವಾಗ ಚಿತ್ರದ ಟ್ರೇಲರ್ ಬಿಡುಗಡೆ ಆಯಿತೋ ಅಲ್ಲಿಂದ ಸಿನಿಮಾಗೆ ಹಿನ್ನಡೆ ಉಂಟಾಗುತ್ತಿದೆ. ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರಿಮೇಕ್ ಇದು ಎಂಬುದು ಟ್ರೇಲರ್ ನೋಡಿದವರಿಗೆ ಸ್ಪಷ್ವವಾಗಿದೆ. ಇದರ ಜೊತೆಗೆ ಎಐ ಚಿತ್ರ ಟ್ರೇಲರ್‌ನಲ್ಲಿ ಬಳಕೆ ಮಾಡಲಾಗಿದೆ. ಇದಕ್ಕೆ ಅನೇಕರು ಕೋಪ ಹೊರಹಾಕಿದ್ದಾರೆ.
‘ಜನ ನಾಯಗನ್’ ಇದು ದಳಪತಿ ವಿಜಯ್ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ. ಇದು ಅವರ ಕೊನೆಯ ಚಿತ್ರ ಕೂಡ ಹೌದು. ಹೀಗಾಗಿ, ಸಹಜವಾಗಿಯೇ ನಿರೀಕ್ಷೆ ಇದೆ. ಸಿನಿಮಾಗೆ ಹೈಪ್ ಸಿಗಬೇಕು ಎಂದರೆ ಚಿತ್ರದ ಟ್ರೇಲರ್ ಬಿಡುಗಡೆ ಆಗಬೇಕು. ಆದರೆ, ‘ಜನ ನಾಯಗನ್’ ವಿಷಯದಲ್ಲಿ ಅದು ಉಲ್ಟಾ ಆಗಿದೆ. ಟ್ರೇಲರ್ ರಿಲೀಸ್ ಬಳಿಕ ಚಿತ್ರಕ್ಕೆ ನೆಗೆಟಿವ್ ಕಮೆಂಟ್ ಹೆಚ್ಚಿದೆ.
‘ಜನ ನಾಯಗನ್’ ಚಿತ್ರ ‘ಭಗವಂತ ಕೇಸರಿ’ಯ ರಿಮೇಕ್ ಎಂದು ಹೇಳಲಾಗುತ್ತಾ ಬರುತ್ತಿತ್ತು. ಆದರೆ, ತಂಡ ಇದನ್ನು ಒಪ್ಪಿಲ್ಲ. ಈಗ ಸಿನಿಮಾದ ಟ್ರೇಲರ್ ನೋಡಿದ ಬಳಿಕ ಇದು ಸ್ಪಷ್ಟವಾಗಿದೆ. ಇದರ ಜೊತೆಗೆ ಒಂದು ಶಾಟ್ನ ಜೆಮಿನಿ ಎಐ ಬಳಸಿ ರಚಿಸಲಾಗಿದೆ. ದುರಂತ ಎಂದರೆ ಜೆಮಿನಿ ಎಐ ಲೋಗೋನ ತೆಗೆಯಲು ತಂಡದವರು ಮರೆತಿದ್ದಾರೆ.
ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ನೂರಾರು ಕೋಟಿ ರೂಪಾಯಿ ಹಾಕಿ ಮಾಡೋ ಸಿನಿಮಾದಲ್ಲಿ ಈ ರೀತಿಯ ತಪ್ಪುಗಳು ಆದರೆ ಪ್ರೇಕ್ಷಕರಿಗೆ ಅದು ಕೋಪ ತರಿಸುತ್ತದೆ. ಇನ್ನು ಕೆಲವು ಶಾಟ್ಗಳಿಗೆ ನಿರ್ದೇಶಕ ‘ಎಐ’ ಮೊರೆ ಹೋಗುತ್ತಾನೆ ಎಂದಾದರೆ ಅಸಲಿ ಸಿನಿಮಾದ ಮಜ ಹೇಗೆ ಸಿಗೋಕೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ‘ಜನ ನಾಯಗನ್’ ಟ್ರೈಲರ್ ಬಿಡುಗಡೆ: ರೀಮೇಕಾ? ಸ್ವಮೇಕಾ?
ಎಚ್. ವಿನೋದ್ ಅವರು ‘ಜನ ನಾಯಗನ್’ ನಿರ್ದೇಶನ ಮಾಡಿದ್ದಾರೆ. ಅವರು ರಿಮೇಕ್ ಮಾಡೋದ್ರಲ್ಲಿ ಎತ್ತಿದ ಕೈ. ಈ ಮೊದಲು ಕೂಡ ಅವರು ರಿಮೇಕ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದು ಇದೆ. ಆದರೆ, ಅವರು ಕಥೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಆದರೆ, ಇಲ್ಲಿ ಆ ರೀತಿ ಮಾಡಿಲ್ಲ ಎನ್ನಲಾಗುತ್ತಿದೆ. ಕೆವಿಎನ್ ಸಂಸ್ಥೆ ನಿರ್ಮಾಣದ ಈ ಚಿತ್ರ ಜನವರಿ 9ರಂದು ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:13 am, Mon, 5 January 26