‘ಬಾಹುಬಲಿ’ ಸಿನಿಮಾದ ರೀಮೇಕ್ ‘ಕಲ್ಕಿ 2898 ಎಡಿ’ ಎಂಬುದು ನಿಮಗೆ ಗೊತ್ತೆ?

|

Updated on: Sep 20, 2024 | 7:37 PM

Kalki-Bahubali: ಇತ್ತೀಚೆಗೆ ಬಿಡುಗಡೆ ಆದ ಪ್ರಭಾಸ್ ಸಿನಿಮಾ ‘ಕಲ್ಕಿ 2898 ಎಡಿ’ ಸಿನಿಮಾ ಕೆಲ ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಪ್ರಭಾಸ್​ರ ‘ಬಾಹುಬಲಿ ಪಾರ್ಟ್ 1’ ಸಿನಿಮಾದ ರೀಮೇಕ್ ಎಂದರೆ ನೀವು ನಂಬಲೇ ಬೇಕು, ಅಲ್ಲವಾದರೆ ಈ ಸಾಕ್ಷಿ ನೋಡಿ.

‘ಬಾಹುಬಲಿ’ ಸಿನಿಮಾದ ರೀಮೇಕ್ ‘ಕಲ್ಕಿ 2898 ಎಡಿ’ ಎಂಬುದು ನಿಮಗೆ ಗೊತ್ತೆ?
Follow us on

ಹೆಡ್​ ಲೈನ್ ಓದಿ ಆಶ್ಚರ್ಯವಾಗಬಹುದು, ಅದು ಹೇಗೆ ಸಾಧ್ಯ? ‘ಕಲ್ಕಿ 2898 ಎಡಿ’ ಸಿನಿಮಾ ರೀಮೇಕ್ ಅಲ್ಲ, ಸ್ವಮೇಕ್ ಸಿನಿಮಾ ತಾನೆ ಎಂದು ಕೊಳ್ಳಬಹುದು. ಅದು ಪೂರ್ತಿ ಸತ್ಯವಲ್ಲ. ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ‘ಕಲ್ಕಿ’ ಸಿನಿಮಾ ‘ಬಾಹುಬಲಿ ಪಾರ್ಟ್ 1’ ಸಿನಿಮಾದ ರೀಮೇಕ್. ‘ಕಲ್ಕಿ’ ಸಿನಿಮಾದ ನಿರ್ದೇಶನ ನಾಗ್ ಅಶ್ವಿನ್, ಕತೆಯನ್ನು ‘ಬಾಹುಬಲಿ’ ಸಿನಿಮಾದಿಂದಲೇ ಎತ್ತಿಕೊಂಡಿದ್ದಾರೆ. ಸುಳ್ಳು ಎನಿಸಿದರೆ ಮುಂದೆ ನೀಡುವ ಉದಾಹರಣೆಗಳನ್ನು ಓದಿರಿ.

‘ಬಾಹುಬಲಿ’ ಸಿನಿಮಾದ ಮೊದಲ ಭಾಗದಲ್ಲಿ ಪ್ರಭಾಸ್ ಅಂದರೆ ಶಿವ ದೊಡ್ಡ ಬೆಟ್ಟವನ್ನು ಹತ್ತುವ ಪ್ರಯತ್ನ ಮಾಡುತ್ತಿರುತ್ತಾನೆ. ಆ ಬೆಟ್ಟದ ಮೇಲೆ ಇರುವ ರಾಜ್ಯವನ್ನು ಸೇರಿಕೊಳ್ಳುವ ಆಸೆ ಆತನದ್ದು, ಆ ಬೆಟ್ಟಕ್ಕೆ ದೊಡ್ಡ ಜಲಪಾತ ಇರುತ್ತದೆ. ಪದೇ ಪದೇ ಬೆಟ್ಟ ಹತ್ತಲು ಹೋಗಿ ವಿಫಲನಾಗುತ್ತಿರುತ್ತಾನೆ. ‘ಕಲ್ಕಿ’ ಸಿನಿಮಾದಲ್ಲಿಯೂ ಸಹ ಪ್ರಭಾಸ್​ಗೆ ದೊಡ್ಡ ರಾಜ್ಯ ‘ಕಾಂಪ್ಲೆಕ್ಸ್’ ಸೇರಿಕೊಳ್ಳುವ ಆಸೆ. ಕಾಂಪ್ಲೆಕ್ಸ್ ಸಹ ಬೆಟ್ಟದಂತೆ ಭಾರಿ ಎತ್ತರವಾಗಿರುತ್ತದೆ. ಅಲ್ಲಿಯೂ ಸಹ ಕಾಂಪ್ಲೆಕ್ಸ್​ ಮೇಲಿಂದ ಜಲಪಾತ ಸುರಿಯುತ್ತಿರುತ್ತದೆ.

ಇದನ್ನೂ ಓದಿ:‘ಬಾಹುಬಲಿ’ ವಿವಾದಾತ್ಮಕ ದೃಶ್ಯದ ಬಗ್ಗೆ ರಾಜಮೌಳಿ ಮಾತು

‘ಬಾಹುಬಲಿ’ಯಲ್ಲಿ ಕೊನೆಗೆ ಒಬ್ಬ ಯುವತಿಯಿಂದ ಪ್ರಭಾಸ್ ಬೆಟ್ಟ ಹತ್ತಿ ರಾಜ್ಯ ಸೇರಿಕೊಳ್ಳುತ್ತಾನೆ. ‘ಕಲ್ಕಿ’ ಸಿನಿಮಾದಲ್ಲಿಯೂ ಸಹ ಒಬ್ಬ ಯುವತಿಯಿಂದ ಅವನು ಯಾಸ್ಕಿನ್​ ಗೆ ಮೊದಲ ಬಾರಿ ಹೋಗುತ್ತಾನೆ. ಇನ್ನು ಬಾಹುಬಲಿಯಲ್ಲಿ ಪ್ರಭಾಸ್ ಹೋಗುವ ರಾಜ್ಯದಲ್ಲಿ ತಾಯಿಯೊಬ್ಬಾಕೆಯನ್ನು ಬಂಧಿಸಿ ಇಡಲಾಗಿದೆ. ‘ಕಲ್ಕಿ’ ಸಿನಿಮಾದಲ್ಲಿಯೂ ಸಹ ಯಾಸ್ಕಿನ್ ನಗರದಲ್ಲಿ ತಾಯಿಯನ್ನು ಬಂಧಿಸಿ ಇಡಲಾಗಿದೆ. ಬಾಹುಬಲಿಯಲ್ಲಿ ತಾಯಿ ದೇವಸೇನಾ (ಅನುಷ್ಕಾ ಶೆಟ್ಟಿ)ಯನ್ನು ಬಿಡುಗಡೆಗೊಳಿಸಲು ರಾಜನ ವಿರುದ್ಧ ಹೋರಾಡುವ ಬಂಡಾಯ ಗುಂಪಿದೆ, ‘ಕಲ್ಕಿ’ಯಲ್ಲಿಯೂ ಸಹ ಬಂಧಿತವಾಗಿರುವ ತಾಯಂದಿರನ್ನು ಹಾಗೂ ‘ಕಲ್ಕಿ’ಯ ತಾಯಿಯನ್ನು ಬಿಡುಗಡೆಗೊಳಿಸಲು ಹೋರಾಡುತ್ತಿರುವ ಬಂಡಾಯದ ಗುಂಪೊಂದು ಇದೆ.

‘ಬಾಹುಬಲಿ’ಯ ಕೊನೆಯಲ್ಲಿ ದೇವಸೇನಾ ಬಿಡುಗಡೆಗೆ ಪ್ರಯತ್ನಿಸುತ್ತಿರುವ ಬಂಡಾಯದ ಗುಂಪಿನ ಹೀರೋ ವಯಸ್ಸಾದ ವ್ಯಕ್ತಿ (ಕಟ್ಟಪ್ಪ)ನೊಡನೆ ಪ್ರಭಾಸ್ ಯುದ್ಧ ಮಾಡುತ್ತಾನೆ. ‘ಕಲ್ಕಿ’ಯಲ್ಲಿಯೂ ಸಹ ಕೊನೆಯಲ್ಲಿ ತಾಯಿಯನ್ನು ರಕ್ಷಿಸಲು ಬಂದ ವಯಸ್ಸಾದ ವ್ಯಕ್ತಿ (ಅಮಿತಾಬ್ ಬಚ್ಚನ್) ವಿರುದ್ಧ ಪ್ರಭಾಸ್ ಯುದ್ಧ ಮಾಡುತ್ತಾನೆ. ‘ಬಾಹುಬಲಿ’ ಸಿನಿಮಾದ ಅಂತ್ಯದ ಫೈಟ್​ನಲ್ಲಿ ಪ್ರಭಾಸ್ ರಾಣಾ ದಗ್ಗುಬಾಟಿ ಪಾತ್ರ ಬಲ್ಲಾಳದೇವನ ಪುತ್ರನನ್ನು ಕೊಲ್ಲುತ್ತಾನೆ. ‘ಕಲ್ಕಿ’ಯಲ್ಲಿ ಪ್ರಭಾಸ್ ಯಾಸ್ಕಿನ್​ನ ಬಲಗೈ ಭಂಟ ಕಮಾಂಡರ್ ಮಾನಸ್ ಅನ್ನು ಕೊಲ್ಲುತ್ತಾನೆ. ‘ಬಾಹುಬಲಿ’ ಸಿನಿಮಾದ ಕೊಲೆಯಲ್ಲಿ ಕಟ್ಟಪ್ಪನಿಗೆ ಪ್ರಭಾಸ್​ನ ನಿಜ ರೂಪ ಗೊತ್ತಾಗುತ್ತದೆ. ಅಂದರೆ ಆತ ತನ್ನದೇ ಗೆಳೆಯನ ಮಗ ಎಂಬುದು ಗೊತ್ತಾಗುತ್ತದೆ. ‘ಕಲ್ಕಿ’ ಸಿನಿಮಾದ ಕೊನೆಯಲ್ಲಿ ಅಮಿತಾಬ್ ಬಚ್ಚನ್​ಗೆ ಪ್ರಭಾಸ್​ನ ನಿಜ ರೂಪ ಗೊತ್ತಾಗುತ್ತದೆ. ಪ್ರಭಾಸ್ ತನ್ನ ಆಪ್ತ ಗೆಳೆಯನ ಅಂಶ ಎಂಬುದು ತಿಳಿದು ಬರುತ್ತದೆ. ಎರಡೂ ಸಿನಿಮಾಗಳ ಕತೆಯಲ್ಲಿ ಸಾಕಷ್ಟು ಸಾಮ್ಯತೆ ಇದೆ ಅಲ್ಲವೆ? ಈಗ ಹೇಳಿ, ‘ಕಲ್ಕಿ’, ‘ಬಾಹುಬಲಿ ಪಾರ್ಟ್ 1’ ರೀಮೇಕ್ ತಾನೆ?

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ