‘ಓಜಿ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಎದುರು ಅಬ್ಬರಿಸುವ ಕನ್ನಡಿಗ ಸೌರವ್ ಲೋಕೇಶ್

ನಟ ಸೌರವ್ ಲೊಕೇಶ್ ಅವರು ಅಪ್ಪಟ ಕನ್ನಡದ ನಟ. ಪರಭಾಷೆಯಲ್ಲೂ ಸಖತ್ ಬೇಡಿಕೆ ಹೊಂದಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸೌರವ್ ಲೊಕೇಶ್ ಅವರು ಘಟಾನುಘಟಿ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ‘ಓಜಿ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ಅವರು ನಟಿಸಿದ್ದಾರೆ. ವಿಲನ್ ಪಾತ್ರ ಮಾಡಿ ಅಬ್ಬರಿಸಿದ್ದಾರೆ.

‘ಓಜಿ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಎದುರು ಅಬ್ಬರಿಸುವ ಕನ್ನಡಿಗ ಸೌರವ್ ಲೋಕೇಶ್
Pawan Kalyan, Saurav Lokkesh

Updated on: Sep 23, 2025 | 8:12 PM

ಟಾಲಿವುಡ್ ಸ್ಟಾರ್ ಹೀರೋ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ನಟಿಸಿರುವ ‘ಓಜಿ’ ಸಿನಿಮಾ (OG Movie) ಸೆಪ್ಟೆಂಬರ್ 25ರಂದು ಬಿಡುಗಡೆ ಆಗುತ್ತಿದೆ. ಸಖತ್ ನಿರೀಕ್ಷೆ ಮೂಡಿಸಿರುವ ಈ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ಪವನ್ ಕಲ್ಯಾಣ್ (Pawan Kalyan) ಜೊತೆ ಅರ್ಜುನ್ ದಾಸ್, ಪ್ರಕಾಶ್ ರಾಜ್, ರಾವ್ ರಮೇಶ್ ಮುಂತಾದವರು ನಟಿಸಿದ್ದಾರೆ. ಕನ್ನಡದ ನಟ ಸೌರವ್ ಲೋಕೇಶ್ ಕೂಡ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದು, ಪವನ್ ಕಲ್ಯಾಣ್ ಎದುರು ಅಬ್ಬರಿಸಿದ್ದಾರೆ. ‘ಓಜಿ’ ಸಿನಿಮಾದ ಬಿಡುಗಡೆಗೂ ಮುನ್ನ ಸೌರವ್ ಲೋಕೇಶ್ (Saurav Lokkesh) ಅವರು ಟಿವಿ9 ಡಿಜಿಟಲ್ ಜೊತೆ ಮಾತನಾಡಿದ್ದಾರೆ.

ಸಿನಿಮಾಗಳ ಆಯ್ಕೆಯಲ್ಲಿ ಸೌರವ್ ಲೋಕೇಶ್ ಅವರು ತುಂಬಾ ಚ್ಯೂಸಿ ಆಗಿದ್ದಾರೆ. ಕನ್ನಡದ ‘ಭಜರಂಗಿ’ ಸಿನಿಮಾದಲ್ಲಿ ನಟಿಸಿದ ಬಳಿಕ ಅವರು ಭಜರಂಗಿ ಲೋಕಿ ಎಂಬ ಹೆಸರಿನಿಂದ ಫೇಮಸ್ ಆದರು. ಬೇಡಿಕೆ ಹೆಚ್ಚಿದ್ದರೂ ಕೂಡ ಅವರು ಸಿನಿಮಾಗಳ ಆಯ್ಕೆಯಲ್ಲಿ ಅವಸರ ತೋರುವುದಿಲ್ಲ. ತಮಗೆ ಇಷ್ಟ ಎನಿಸುವ ಕಥೆ ಮತ್ತು ಪಾತ್ರ ಸಿಕ್ಕರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತಾರೆ. ‘ಓಜಿ’ ಸಿನಿಮಾ ಒಪ್ಪಿಕೊಳ್ಳಲು ಕೂಡ ಅದೇ ಕಾರಣ.

‘ನಿರ್ದೇಶಕ ಸುಜೀತ್ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ನನಗೆ ಸಿಗುತ್ತಿದೆ ಎಂದಾಗ ಖುಷಿ ಆಯಿತು. ಕಥೆ ಕೇಳಿದೆ, ಇಂಟರೆಸ್ಟಿಂಗ್ ಆಗಿರುತ್ತದೆ ಎನಿಸಿತು. ಇದು ತುಂಬಾ ದೊಡ್ಡ ಪ್ರಾಜೆಕ್ಟ್ ಆದ್ದರಿಂದ ಅನುಭವ ಚೆನ್ನಾಗಿ ಇರುತ್ತದೆ. ಸುಜೀತ್ ಅವರು ‘ಸಾಹೋ’ ಮಾಡಿದ ನಿರ್ದೇಶಕರು. ಅಂಥವರ ಜೊತೆ ಕಲಿಯುವುದು ತುಂಬಾ ಇರುತ್ತದೆ ಎಂಬ ಕಾರಣಕ್ಕೆ ‘ಓಜಿ’ ಚಿತ್ರವನ್ನು ಒಪ್ಪಿಕೊಂಡೆ’ ಎಂದು ಸೌರವ್ ಲೋಕೇಶ್ ಅವರು ಹೇಳಿದ್ದಾರೆ.

‘ಪವನ್ ಕಲ್ಯಾಣ್ ಅವರ ಜೊತೆ ಕೆಲಸ ಮಾಡಿದ ಅನುಭವ ಚೆನ್ನಾಗಿತ್ತು. ಇದುವರೆಗೂ ಅವರ ಬಗ್ಗೆ ಕೇಳಿ ತಿಳಿದಿದ್ದೆ. ನೇರವಾಗಿ ಭೇಟಿಯಾಗುವ ಅವಕಾಶ ಸಿಕ್ಕಿದ್ದು ಇದೇ ಮೊದಲು. ಅವರ ಸಿನಿಮಾ ಜರ್ನಿ ಮತ್ತು ರಾಜಕೀಯದ ಜರ್ನಿ ಸ್ಫೂರ್ತಿ ನೀಡುತ್ತದೆ. ಹತ್ತಿರದಿಂದ ಅವರನ್ನು ನೋಡಿದಾಗ ಅವರ ಮೇಲಿದ್ದ ಗೌರವ ಡಬಲ್ ಆಯಿತು. ಉಪ ಮುಖ್ಯಮಂತ್ರಿ ಆದ ಮೇಲೂ ಕೂಡ ಅವರು ಸಿನಿಮಾ ಬಗ್ಗೆ ಬದ್ಧತೆ ಹೊಂದಿದ್ದಾರೆ. ಶ್ರದ್ಧೆಯಿಂದ ಡೈಲಾಗ್ ಕಲಿಯುತ್ತಾರೆ’ ಎಂದಿದ್ದಾರೆ ಸೌರವ್ ಲೋಕೇಶ್.

ಇದನ್ನೂ ಓದಿ: ತಡವಾಗಿ ಬಂದರೂ ಧೂಳೆಬ್ಬಿಸಿದ ‘ಓಜಿ’ ಟ್ರೇಲರ್: ಪವನ್ ಕಲ್ಯಾಣ್ ಆ್ಯಕ್ಷನ್ ಅಬ್ಬರ

‘ಓಜಿ’ ಸಿನಿಮಾದಲ್ಲಿ ಬಾಲಿವುಡ್ ನಟ ಇಮ್ರಾನ್ ಹಷ್ಮಿ ಅವರು ಮುಖ್ಯ ವಿಲನ್ ಆಗಿ ನಟಿಸಿದ್ದಾರೆ. ಅವರ ಜೊತೆ ನಟಿಸುವ ಅವಕಾಶ ಕೂಡ ಸೌರವ್ ಲೋಕೇಶ್ ಅವರಿಗೆ ಸಿಕ್ಕಿದೆ. ಅರ್ಜುನ್ ದಾಸ್ ಕೂಡ ಈ ಚಿತ್ರದಲ್ಲಿ ವಿಲನ್. ದೊಡ್ಡ ಪಾತ್ರವರ್ಗ ಇದೆ. ಟ್ರೇಲರ್​​ನಲ್ಲಿ ಎಲ್ಲರ ಪಾತ್ರಗಳ ಝಲಕ್ ಕಾಣಿಸಿದೆ. ಸೌರವ್ ಲೋಕೇಶ್ ಅವರು ರೆಟ್ರೋ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಟಾಲಿವುಡ್​​ನಲ್ಲಿ ಸೌರವ್ ಲೋಕೇಶ್ ಅವರಿಗೆ ಬೇಡಿಕೆ ಹೆಚ್ಚುತ್ತಿದೆ. ‘ಓಜಿ’ ಸಿನಿಮಾ ಮಾತ್ರವಲ್ಲದೇ ಇನ್ನೂ ಹಲವು ಅವಕಾಶಗಳು ಅವರಿಗೆ ಸಿಗುತ್ತಿವೆ. ‘ಮೆಗಾ ಸ್ಟಾರ್’ ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾದಲ್ಲಿ ಕೂಡ ಸೌರವ್ ಲೋಕೇಶ್ ಅವರು ಅಭಿನಯಿಸುತ್ತಿದ್ದಾರೆ. ಆ ಸಿನಿಮಾದ ಮೇಲೂ ಅವರಿಗೆ ಹೆಚ್ಚು ಭರವಸೆ ಇದೆ. ಕನ್ನಡದಲ್ಲಿ ಹೊಸ ಸಿನಿಮಾವನ್ನು ಸದ್ಯದಲ್ಲೇ ಅನೌನ್ಸ್ ಮಾಡಲಿದ್ದಾರೆ.

Saurav Lokkesh, Emraan Hashmi, Sujeeth

ಸಿನಿಮಾಗಳ ಸಂಖ್ಯೆ ಹೆಚ್ಚಿಸಿಕೊಳ್ಳುವುದಕ್ಕಿಂತಲೂ ನೆನಪಿನಲ್ಲಿ ಉಳಿಯುವಂತಹ ಸಿನಿಮಾಗಳನ್ನು ಮಾಡಬೇಕು ಎಂಬುದು ಸೌರವ್ ಲೋಕೇಶ್ ಅವರ ಉದ್ದೇಶ. ಹಾಗಾಗಿ ಅವರು ಸಿಕ್ಕ ಸಿಕ್ಕ ಸಿನಿಮಾಗಳನ್ನೆಲ್ಲ ಒಪ್ಪಿಕೊಳ್ಳುತ್ತಿಲ್ಲ. ‘ಒಂದಷ್ಟು ವರ್ಷಗಳು ಕಳೆದ ನಂತರ ಸಿನಿಮಾ ಹಿಟ್ ಅಥವಾ ಫ್ಲಾಪ್ ಎಂಬುದನ್ನು ಮರೆತುಬಿಡುತ್ತೇವೆ. ಆದರೆ ಅನುಭವಗಳು ನಮ್ಮ ಜೊತೆ ಉಳಿಯುತ್ತವೆ. ಆ ರೀತಿಯ ಅನುಭವ ನೀಡಿದ ಸಿನಿಮಾ ಓಜಿ’ ಎಂದಿದ್ದಾರೆ ಸೌರವ್ ಲೋಕೇಶ್.

ಇದನ್ನೂ ಓದಿ: ಪವನ್ ಕಲ್ಯಾಣ್ ‘ಓಜಿ’ ಸಿನಿಮಾ ಟಿಕೆಟ್ ಲಕ್ಷಗಳಿಗೆ ಹರಾಜು, ಕೊಂಡವರ್ಯಾರು?

‘ಓಜಿ ಬಳಿಕ ಅವಕಾಶಗಳು ಹೇಗೆ ಬರುತ್ತವೆ ಎಂಬುದರ ಬಗ್ಗೆ ನಾನು ಯೋಚಿಸಲ್ಲ. ಒಂದು ಸಿನಿಮಾ ಮಾಡುತ್ತಿದ್ದೇನೆ ಅಂದರೆ, ಇದು ನನ್ನ ಕೊನೇ ಸಿನಿಮಾ ಎಂದುಕೊಂಡು ಕೆಲಸ ಮಾಡುತ್ತೇನೆ. ಅದಕ್ಕೆ ಎಷ್ಟು ಶ್ರಮಪಡಬೇಕು ಎಂಬುದನ್ನು ನೋಡುತ್ತೇನೆ. ನಿರೀಕ್ಷೆಗಳನ್ನು ಇಟ್ಟುಕೊಳ್ಳಲ್ಲ. ಒಳ್ಳೆಯ ಅವಕಾಶಗಳು ಬಂದರೆ ಖುಷಿ. ಪದೇ ಪದೇ ಕಾಣಿಸಿಕೊಳ್ಳಬೇಕು ಅಥವಾ ದುಡ್ಡು ಮಾಡಬೇಕು ಎಂಬ ಉದ್ದೇಶದಿಂದ ಸಿನಿಮಾ ಮಾಡಲ್ಲ. ನಮ್ಮ ಮನಸ್ಸಿಗೆ ತೃಪ್ತಿ ನೀಡುವಂತಹ ಸಿನಿಮಾ ಮಾಡಬೇಕು. ಹಾಗಾಗಿ ‘ಭಜರಂಗಿ 2’ ಬಳಿಕ ಹಲವು ಅಫರ್ ಬಂದರೂ ಕೂಡ ನಾನು ಒಪ್ಪಿಕೊಳ್ಳಲಿಲ್ಲ’ ಎಂದಿದ್ದಾರೆ ಸೌರವ್ ಲೋಕೇಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:58 pm, Tue, 23 September 25