ಮೂರು ದಿನಗಳ ಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಸಿಸಿ 2023 (KCC 2023), ಸ್ಯಾಂಡಲ್ವುಡ್ (Sandalwood) ಸೆಲೆಬ್ರಿಟಿಗಳ ಕ್ರಿಕೆಟ್ ಟೂರ್ನಿ ಇಂದು ಅಂತ್ಯವಾಗಿದ್ದು, ಫೈನಲ್ನಲ್ಲಿ ಉಪೇಂದ್ರ (Upendra) ಮುಂದಾಳತ್ವದ ವಿಜಯನಗರ ಪೇಟ್ರಿಯಾಟ್ಸ್ ತಂಡವನ್ನು ಡಾಲಿ ಧನಂಜಯ್ (Daali Dhananjay) ನಾಯಕತ್ವದ ಗಂಗಾ ವಾರಿಯರ್ಸ್ ತಂಡವು ಮಣಿಸಿ ಟ್ರೋಫಿ ತನ್ನದಾಗಿಸಿಕೊಂಡಿದೆ.
ಇಂದು (ಫೆಬ್ರವರಿ 26) ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಧನಂಜಯ್ರ ಗಂಗಾ ವಾರಿಯರ್ಸ್, ಉಪೇಂದ್ರ ಅವರ ವಿಜಯನಗರ ಪೇಟ್ರಿಯಾಟ್ಸ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಈ ಹಿಂದಿನ ಪಂದ್ಯದಲ್ಲಿ ಅಬ್ಬರಿಸಿದ್ದ ವಿಜಯನಗರ ಪೇಟ್ರಿಯಾಟ್ಸ್ ತಂಡ ಫೈನಲ್ ಪಂದ್ಯದಲ್ಲಿ ಗಂಗಾ ವಾರಿಯರ್ಸ್ ತಂಡದ ಬೌಲಿಂಗ್ ಮುಂದೆ ಮಂಕಾಗಿ 10 ಓವರ್ಗಳಿಗೆ ಎಂಟು ವಿಕೆಟ್ ಕಳೆದುಕೊಂಡು 81 ರನ್ನುಗಳನ್ನಷ್ಟೆ ಗಳಿಸಿತು.
ಗೆಲ್ಲಲು 82 ರನ್ಗಳ ಗುರಿ ಪಡೆದ ಡಾಲಿ ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ತಂಡ ಯಾವುದೇ ಶ್ರಮವಿಲ್ಲದೆ ಸುಲಭವಾಗಿ ಗುರಿ ತಲುಪಿ ಕೆಸಿಸಿ 2023 ಟೂರ್ನಿಯ ಚಾಂಪಿಯನ್ ಎನಿಸಿಕೊಂಡಿತು.
ಕೆಸಿಸಿ ಟೂರ್ನಿಯಲ್ಲಿ ಒಡೆಯರ್ ಚಾರ್ಜರ್ಸ್ ತಂಡವನ್ನು ಶಿವರಾಜ್ ಕುಮಾರ್, ಹೊಯ್ಸಳ ಈಗಲ್ಸ್ ತಂಡವನ್ನು ಕಿಚ್ಚ ಸುದೀಪ್, ಕದಂಬ ಲಯನ್ಸ್ ತಂಡವನ್ನು ಗಣೇಶ್, ಗಂಗಾ ವಾರಿಯರ್ಸ್ ತಂಡವನ್ನು ಧನಂಜಯ್, ವಿಜಯನಗರ ಪೇಟ್ರಿಯಾಟ್ಸ್ ತಂಡವನ್ನು ಉಪೇಂದ್ರ ಹಾಗೂ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ಧ್ರುವ ಸರ್ಜಾ ಮುನ್ನಡೆಸಿದರು.
ಲೀಗ್ ಹಂತದಲ್ಲಿ ಎಲ್ಲ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಿದರು. ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದ ಡಾಲಿಯ ಗಂಗಾ ವಾರಿಯರ್ಸ್ ಫೈನಲ್ ಪ್ರವೇಶಿಸಿತು. ಶಿವರಾಜ್ ಕುಮಾರ್ ಅವರ ತಂಡದ ಹೊರತಾಗಿ ಇನ್ನುಳಿದ ತಂಡಗಳು ತಲಾ ಒಂದು ಪಂದ್ಯದಲ್ಲಿ ಗೆದ್ದರು. ಶಿವಣ್ಣನ ತಂಡ ಯಾವುದೇ ಪಂದ್ಯವನ್ನು ಗೆಲ್ಲಲಿಲ್ಲ. ನೆಟ್ ರನ್ರೇಟ್ ಆಧಾರದಲ್ಲಿ ಉಪೇಂದ್ರ ಅವರ ವಿಜಯನಗರ ಪೇಟ್ರಿಯಾಟ್ಸ್ ತಂಡ ಫೈನಲ್ ಪ್ರವೇಶಿಸಿತು.
ಎಲ್ಲ ತಂಡಗಳಲ್ಲಿಯೂ ತಲಾ ಒಬ್ಬೊಬ್ಬ ವಿಶ್ವ ಮಟ್ಟದ ಕ್ರಿಕೆಟಿಗರು ಆಡಿದರು. ಸುದೀಪ್ ತಂಡದಲ್ಲಿ ಕ್ರಿಸ್ ಗೇಲ್, ಡಾಲಿ ತಂಡದಲ್ಲಿ ಸುರೇಶ್ ರೈನಾ, ಗಣೇಶ್ ತಂಡದಲ್ಲಿ ತಿಲಕರತ್ನೆ ದಿಲ್ಶಾನ್, ಉಪೇಂದ್ರ ಹರ್ಷಲ್ ಗಿಬ್ಸ್, ಶಿವಣ್ಣ ತಂಡದಲ್ಲಿ ಬ್ರಿಯನ್ ಲಾರಾ, ಧ್ರುವ ಸರ್ಜಾ ತಂಡದಲ್ಲಿ ಎಸ್ ಬದ್ರಿನಾಥ್ ಅವರುಗಳು ಸಹ ಆಡಿದರು.
ಗಂಗಾ ವಾರಿಯರ್ಸ್ v/s ಹೊಯ್ಸಳ ಈಗಲ್ಸ್ – ಗಂಗಾ ವಾರಿಯರ್ಸ್ ಗೆಲುವು
ಹೊಯ್ಸಳ ಈಗಲ್ಸ್ v/s ಒಡೆಯರ್ ಚಾರ್ಜರ್ಸ್ – ಹೊಯ್ಸಳ ಈಗಲ್ಸ್ ಗೆಲುವು
ಕದಂಬ ಲಯನ್ಸ್ v/s ರಾಷ್ಟ್ರಕೂಟ ಪ್ಯಾಂಥರ್ಸ್ – ಕದಂಬ ಲಯನ್ಸ್ ಗೆಲುವು
ಕದಂಬ ಲಯನ್ಸ್ v/s ವಿಜಯನಗರ ಪೇಟ್ರಿಯಾಟ್ಸ್ – ವಿಜಯನಗರ ಪೇಟ್ರಿಯಾಟ್ಸ್ ಗೆಲುವು
ಗಂಗಾ ವಾರಿಯರ್ಸ್ v/s ಒಡೆಯರ್ ಚಾರ್ಜರ್ಸ್ – ಗಂಗಾ ವಾರಿಯರ್ಸ್ ಗೆಲುವು
ವಿಜಯನಗರ ಪೇಟ್ರಿಯಾಟ್ಸ್ v/s ರಾಷ್ಟ್ರಕೂಟ ಪ್ಯಾಂಥರ್ಸ್ – ರಾಷ್ಟ್ರಕೂಟ ಪ್ಯಾಂಥರ್ಸ್ ಗೆಲುವು
ವಿಜಯನಗರ ಪೇಟ್ರಿಯಾಟ್ಸ್ v/s ಗಂಗಾ ವಾರಿಯರ್ಸ್ – ಗಂಗಾ ವಾರಿಯರ್ಸ್ ಚಾಂಪಿಯನ್
Published On - 12:07 pm, Sun, 26 February 23