‘ಕೆಡಿ’ ಸಿನಿಮಾ ಟೀಸರ್: ರಕ್ತದ ನದಿ, ಮಚ್ಚಿನ ಮೆರವಣಿಗೆ

KD Kannada Movie Teaser: ಧ್ರುವ ಸರ್ಜಾ ನಟಸಿ ಪ್ರೇಮ್ ನಿರ್ದೇಶನ ಮಾಡಿರುವ ಬಹುತಾರಾಗಣದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ’ಯ ಹಿಂದಿ ಟೀಸರ್ ಇಂದು (ಜುಲೈ 10) ಮುಂಬೈನಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಟೀಸರ್​ನಲ್ಲಿ ರಕ್ತದ ನದಿಯೇ ಹರಿದಿದೆ. ಮಚ್ಚುಗಳ ಮೆರವಣಿಗೆ ನಡೆದಿದೆ. ಪ್ರೇಮ್, ‘ಕೆಡಿ’ ಸಿನಿಮಾನಲ್ಲಿ 70-80ರ ದಶಕದ ರೌಡಿಸಂ ಕತೆ ಹೇಳಿದ್ದಾರೆ.

‘ಕೆಡಿ’ ಸಿನಿಮಾ ಟೀಸರ್: ರಕ್ತದ ನದಿ, ಮಚ್ಚಿನ ಮೆರವಣಿಗೆ
Dhruva Sarja

Updated on: Jul 10, 2025 | 5:59 PM

ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಪ್ರೇಮ್ ನಿರ್ದೇಶಿಸಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಬಿಡುಗಡೆ ಆಗಲಿದ್ದು, 70-80ರ ದಶಕದ ರೌಡಿಸಂ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಧ್ರುವ ಸರ್ಜಾ, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ಸಂಜಯ್ ದತ್ ಇನ್ನೂ ಕೆಲವು ಸ್ಟಾರ್ ನಟರು ನಟಿಸಿದ್ದು, ಸಿನಿಮಾದ ಟೀಸರ್ ಇಂದು (ಜೂನ್ 10) ಮುಂಬೈನಲ್ಲಿ ಬಿಡುಗಡೆ ಆಗಿದೆ.

ಇಂದು, ಮುಂಬೈನಲ್ಲಿ ಸಿನಿಮಾದ ಹಿಂದಿ ಆವೃತ್ತಿಯ ಟೀಸರ್ ಬಿಡುಗಡೆ ಆಗಿದ್ದು, ಟೀಸರ್​ನಲ್ಲಿ ಸಿನಿಮಾದ ಎಲ್ಲ ಪಾತ್ರಗಳು ಸಖತ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿವೆ. ಟೀಸರ್ ತುಂಬೆಲ್ಲ ಮಚ್ಚುಗಳ ಮೆರವಣಿಗೆಯೇ ನಡೆದಿದೆ. ಧ್ರುವ ಸರ್ಜಾ, ಸಂಜಯ್ ದತ್, ರೊಮ್ಯಾಂಟಿಕ್ ಹೀರೋ ರಮೇಶ್ ಅರವಿಂದ್ ಸಹ ಈ ಸಿನಿಮಾನಲ್ಲಿ ಮಚ್ಚು ಹಿಡಿದಿದ್ದಾರೆ.

ಕೆಡಿ ಸಿನಿಮಾ ಹಿಂದಿ ಟೀಸರ್

ಈಗ ಬಿಡುಗಡೆ ಆಗಿರುವ ಟೀಸರ್ ನೋಡಿದರೆ ಸಿನಿಮಾ ಸಂಪೂರ್ಣ ಸೆಟ್​ನಲ್ಲೇ ಚಿತ್ರೀಕರಣಗೊಂಡಂತೆ ಕಾಣುತ್ತಿದೆ. ಸಿನಿಮಾದ ಕತೆಯ ಕಾಲಕ್ಕೆ ಅನುಸಾರವಾಗಿ ಉಡುಗೆಗಳನ್ನು ಧರಿಸಿ ನಟ-ನಟಿಯರು ಭಿನ್ನವಾಗಿ ಕಾಣುತ್ತಿದ್ದಾರೆ. ಧ್ರುವ ಸರ್ಜಾ, ಸಂಜಯ್ ದತ್ ಅಂತೂ ಸಖತ್ ಮಾಸ್ ಆಗಿ ಟೀಸರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿಯ ಪಾತ್ರವನ್ನೂ ಸಹ ಮಾಸ್ ರೀತಿಯಲ್ಲೇ ತೋರಿಸಲಾಗಿದೆ. ಜೊತೆಗೆ ಅವರ ಪಾತ್ರಕ್ಕೆ ಸೆಂಟಿಮೆಂಟ್ ಹಿನ್ನೆಲೆಯೂ ಇದ್ದಂತೆ ತೋರುತ್ತದೆ. ಟೀಸರ್​ನಲ್ಲಿ ಕಾಣಿಸಿರುವ ಸೆಟ್​ಗಳು ‘ಕೆಜಿಎಫ್’ ‘ಕಬ್ಜ’ ಸೆಟ್​ಗಳನ್ನು ನೆನಪಿಸುವಂತಿವೆ.

ಇದನ್ನೂ ಓದಿ:ಕನ್ನಡ ಚಿತ್ರರಂಗವನ್ನು ಕೊಂಡಾಡಿದ ನಟಿ ಶಿಲ್ಪಾ ಶೆಟ್ಟಿ

ಟೀಸರ್​ನ ಅಂತ್ಯದಲ್ಲಿ ಸಂಜಯ್ ದತ್, ತಲೆಯೊಂದನ್ನು ಕತ್ತರಿಸಿ ತಂದು ಪೊಲೀಸರ ಮುಂದಿಡುವ ದೃಶ್ಯ ಬಲು ಮಾಸ್ ಆಗಿದೆ. ಹಿಂದಿಗೆ ಒಂದು ಟೀಸರ್, ಕನ್ನಡಕ್ಕೆ ಪ್ರತ್ಯೇಕ ಟೀಸರ್ ಅನ್ನು ಬಿಡುಗಡೆ ಮಾಡುವ ಆಲೋಚನೆ ಪ್ರೇಮ್ ಅವರಿಗೆ ಇದ್ದಂತಿದೆ. ಇದೇ ಕಾರಣಕ್ಕೆ ಇಂದಿನ ಟೀಸರ್​ನಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ ಅವರ ಪಾತ್ರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಧ್ರುವ ಸರ್ಜಾರ ಹಲವು ಮಾಸ್ ದೃಶ್ಯಗಳು ಸಹ ಇವೆ. ರೀಷ್ಮಾ ನಾಣಯ್ಯ ಕಾಣಿಸಿಕೊಳ್ಳುತ್ತಾರಷ್ಟೆ.

‘ಕೆಡಿ’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದು, ಪ್ರೇಮ್ಸ್ ನಿರ್ದೇಶಿಸಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿ. ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ವಿಲನ್ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಸಂಗೀತ ನೀಡಿರುವುದು ಅರ್ಜುನ್ ಜನ್ಯ. ಸಿನಿಮಾದ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಣೆ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Thu, 10 July 25