ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಜೊ ಮುಡಿಗೆ ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟ

ಕೇರಳದ 19 ವರ್ಷದ ಕಾನೂನು ವಿದ್ಯಾರ್ಥಿನಿ ಕಾಜಿಯಾ ಲಿಜ್ ಮೆಜೊ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಜೈಪುರದಲ್ಲಿ ನಡೆದ ಫಿನಾಲೆಯಲ್ಲಿ ವಿಜೇತರಾದ ಇವರು, ಈ ಪ್ರತಿಷ್ಠಿತ ಕಿರೀಟ ಗೆದ್ದ ಕೇರಳದ ಮೊದಲ ಯುವತಿಯಾಗಿದ್ದು, ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಜೊ ಮುಡಿಗೆ ಮಿಸ್ ಯೂನಿವರ್ಸ್ ಇಂಡಿಯಾ 2026 ಕಿರೀಟ
ಮಿಸ್ ಯೂನಿವರ್ಸ್ ಇಂಡಿಯಾ

Updated on: Aug 24, 2026 | 1:30 PM

ಮುಖ್ಯಾಂಶಗಳು

  • ಜೈಪುರದಲ್ಲಿ ಸೌಂದರ್ಯದ ಕದನ
  • 52 ಸ್ಪರ್ಧಿಗಳನ್ನು ಹಿಂದಿಕ್ಕಿ ಗೆದ್ದ ಕಾಜಿಯಾ
  • ಕಾನೂನು ವಿದ್ಯಾರ್ಥಿನಿಯಿಂದ ಮಾಡೆಲಿಂಗ್‌ವರೆಗೆ

ಸೌಂದರ್ಯ ಸ್ಪರ್ಧೆಯ ಕ್ಷೇತ್ರದಲ್ಲಿ ಭಾರತದ ಅತ್ಯಂತ ಪ್ರತಿಷ್ಠಿತ ಕಿರೀಟವನ್ನು ಕೇರಳ ಮೂಲದ 19 ವರ್ಷದ ಯುವತಿ ಕಾಜಿಯಾ ಲಿಜ್ ಮೆಜೊ ಪಡೆದುಕೊಂಡಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಅದ್ದೂರಿ ಗ್ರ್ಯಾಂಡ್ ಫಿನಾಲೆಯಲ್ಲಿ 52 ಸ್ಪರ್ಧಿಗಳನ್ನು ಹಿಂದಿಕ್ಕಿ ಅವರು ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಆಗಿ ಹೊರಹೊಮ್ಮಿದ್ದಾರೆ. ಮುಂಬರುವ ನವೆಂಬರ್ ತಿಂಗಳಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕಾಜಿಯಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಅಂತಿಮ ಸುತ್ತಿನಲ್ಲಿ ತಮಿಳುನಾಡಿನ ವೈಷ್ಣವಿ ಗಣೇಶ್ ಮೊದಲ ರನ್ನರ್ ಅಪ್ ಪಡೆದರೆ, ಗುಜರಾತ್‌ನ ಅನುಶ್ರೀ ಸತವ್ಲೇಕರ್ ಎರಡನೇ ರನ್ನರ್ ಅಪ್ ಜೊತೆಗೆ ‘ಮಿಸ್ ಇಂಟರ್‌ನ್ಯಾಷನಲ್ ಇಂಡಿಯಾ 2026’ ಕಿರೀಟ ಗೆದ್ದರು. 2025ರ ವಿಜೇತೆ ಮಣಿಕಾ ವಿಶ್ವಕರ್ಮ ಹೊಸ ವಿಜೇತರಿಗೆ ಕಿರೀಟ ತೊಡಿಸಿದರು. ಮಾಜಿ ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್ ನೇತೃತ್ವದ ತೀರ್ಪುಗಾರರ ಮಂಡಳಿಯಲ್ಲಿ ಊರ್ವಶಿ ರೌಟೇಲಾ ಮತ್ತು ಸೆಲೀನಾ ಜೇಟ್ಲಿ ಇದ್ದರು.

ಕೇರಳದ ಮಾವೇಲಿಕ್ಕರ ಮೂಲದ ಕಾಜಿಯಾ ಪ್ರಸ್ತುತ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ. ಅವರು ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಗೆದ್ದ ಕೇರಳದ ಮೊದಲ ಯುವತಿಯಾಗಿದ್ದಾರೆ. 2007ರಲ್ಲಿ ಜನಿಸಿದ ಇವರು ಅಬುಧಾಬಿಯಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದರು. 17ನೇ ವಯಸ್ಸಿನಲ್ಲಿ ‘ಮಿಸ್ ಟೀನ್ ದಿವ್ಯಾ 2024’ ಗೆದ್ದಿದ್ದ ಇವರು, ‘ಮಿಸ್ ಟೀನ್ ಇಂಟರ್‌ನ್ಯಾಷನಲ್ 2025’ರಲ್ಲಿ ರನ್ನರ್ ಅಪ್ ಆಗಿದ್ದರು. ಈ ವರ್ಷ ‘ಮಿಸ್ ಯೂನಿವರ್ಸ್ ಕೇರಳ 2026’ ಕಿರೀಟ ಧರಿಸಿದ ಕಿರಿಯ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಇದನ್ನೂ ಓದಿ: ಮಿಸ್ ಯೂನಿವರ್ಸ್ ಆದ ಮೆಕ್ಸಿಕೊ ಸುಂದರಿ; ಕಾಲಿಗೆ ಗಾಜು ಚುಚ್ಚಿದರೂ ಬಿಡಲಿಲ್ಲ ಛಲ

ಮಾಡೆಲಿಂಗ್ ಜೊತೆಗೆ ಕಾಜಿಯಾ 12 ವರ್ಷಗಳ ಕಾಲ ಶಾಸ್ತ್ರೀಯ ನೃತ್ಯ ತರಬೇತಿ ಪಡೆದಿದ್ದಾರೆ. ಗಾಯನ, ಡ್ರಮ್ಸ್ ಹಾಗೂ ವಯಲಿನ್ ನುಡಿಸುವುದರಲ್ಲೂ ಇವರು ಸಿದ್ಧಹಸ್ತರು. ಸಾರ್ವಜನಿಕ ಭಾಷಣಕಾರಿಯೂ ಆಗಿರುವ ಇವರು ಮಲಯಾಳಂನ ‘ಶೈಲಾಕ್’ ಸಿನಿಮಾ ಮೂಲಕ ನಟನೆಗೂ ಪಾದಾರ್ಪಣೆ ಮಾಡಿದ್ದಾರೆ. ಈಗ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕೀರ್ತಿಪತಾಕೆ ಹಾರಿಸಲು ಕಾಜಿಯಾ ಸಜ್ಜಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us