ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಹಾಲಿವುಡ್ ಯುವ ನಟ ಕೆವಿನ್ ಗತ್ರಿ ಅವರಿಗೆ ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ‘ಫೆಂಟಾಸ್ಟಿಕ್ ಬೀಸ್ಟ್’ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಕೆವಿನ್ ನಟಿಸಿದ್ದಾರೆ. ಸದ್ಯ ಇವರಿಗೆ ಜೈಲು ಶಿಕ್ಷೆ ಆಗಿರುವುದು ದೊಡ್ಡಮಟ್ಟದಲ್ಲಿ ಚರ್ಚೆ ಆಗಿದೆ.
2017ರಲ್ಲಿ ಸ್ಕಾಟ್ಲ್ಯಾಂಡ್ನ ಗ್ಲಾಸ್ಗೋವ್ನ ಅಪಾರ್ಟ್ಮೆಂಟ್ ಒಂದರಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ದೂರು ದಾಖಲು ಮಾಡಿದ್ದರು. ಆದರೆ, ಕೆವಿನ್ ಈ ಆರೋಪವನ್ನು ಅಲ್ಲಗಳೆದಿದ್ದರು. ಮಹಿಳೆಗೆ ಅನಾರೋಗ್ಯ ಉಂಟಾಗಿತ್ತು. ಹೀಗಾಗಿ ನಾನು ಅವರಿಗೆ ಸಹಾಯ ಮಾಡಿದ್ದೆ. ಆದರೆ, ಅವರು ಅದನ್ನು ತಪ್ಪಾಗಿ ಅರ್ಥೈಸಿದ್ದಾರೆ ಎಂದು ಹೇಳಿದ್ದರು. ಈ ಮೂಲಕ ಅವರು ತಮ್ಮ ಮೇಲಿನ ಆರೋಪವನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಕೆವಿನ್ ಡಿಎನ್ಎ ಮಹಿಳೆಯ ಒಳ ಉಡುಪಿನಲ್ಲಿ ಸಿಕ್ಕಿತ್ತು. ಕೋರ್ಟ್ನಲ್ಲಿ ನಾಲ್ಕು ದಿನಗಳ ವಿಚಾರಣೆ ಪೂರ್ಣಗೊಂಡಿದೆ. ಈ ವೇಳೆ ಕೆವಿನ್ ತಪ್ಪು ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಸಿಕ್ಕಿದೆ. ಹೀಗಾಗಿ, ಕೋರ್ಟ್ ಕೆವಿನ್ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ನಟ ಸ್ಕಾಟ್ ರೇಡ್ ಅವರ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ. 29 ವರ್ಷದ ಯುವತಿ ಸ್ಕಾಟ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಆದರೆ, ಯುವತಿಗೆ ಅನಾರೋಗ್ಯ ಕಾಡಿದ್ದರಿಂದ ಸ್ಕಾಟ್ ಮನೆಯಲ್ಲೇ ಮಲಗಿದ್ದರು. ಅದೇ ಅಪಾರ್ಟ್ಮೆಂಟ್ನಲ್ಲಿದ್ದ ಕೆವಿನ್ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಎಲ್ಲವೂ ಈಗ ಸಾಬೀತಾಗಿದ್ದರಿಂದ ಕೋರ್ಟ್ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ; ಅತ್ಯಾಚಾರ ಎಸಗಿ ಕೊಂದಿರುವ ಶಂಕೆ