
ವಿಜಯ್ (Vijay) ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಇನ್ನೂ ಬಿಡುಗಡೆ ಆಗಿಲ್ಲ. ಜನವರಿ ತಿಂಗಳಲ್ಲೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ರಾಜಕೀಯ ಕುತಂತ್ರಗಳಿಗೆ ಸಿಲುಕಿ ಇನ್ನೂ ಬಿಡುಗಡೆ ಆಗಿಲ್ಲ. ವಿತರಕರು, ಪ್ರದರ್ಶಕರು ನಿರ್ಮಾಪಕರಿಗೆ ಭಾರಿ ಮೊತ್ತದ ಹಣ ಕೊಟ್ಟು ಸಿನಿಮಾ ಬಿಡುಗಡೆ ಮಾಡಲು ಕಾಯುತ್ತಿರುವಾಗ, ಸಿನಿಮಾದ ಬಿಡುಗಡೆಯನ್ನು ಹಠಾತ್ತಾಗಿ ತಡೆ ಹಿಡಿಯಲಾಗಿತ್ತು. ಹಣ ಕೊಟ್ಟ ನಿರ್ಮಾಪಕರು ತಿಂಗಳಾನುಗಟ್ಟಲೆ ಕಾದರೂ ಸಹ ಸಿನಿಮಾ ಬಿಡುಗಡೆ ಆಗಿಲ್ಲ. ಇದೀಗ ವಿಜಯ್ ಸೂಚನೆ ಮೇರೆಗೆ ನಿರ್ಮಾಪಕರು ವಿತರಕರ ಹಣ ಮರಳಿಸಿದ್ದಾರೆ ಎನ್ನಲಾಗುತ್ತಿದೆ.
ಕೆವಿಎನ್ ನಿರ್ಮಾಣ ಸಂಸ್ಥೆಯು ‘ಜನ ನಾಯಗನ್’ ನಿರ್ಮಾಣ ಮಾಡಿದ್ದು, ವಿತರಕರಿಂದ ಹಣ ಪಡೆದು ಸಾಕಷ್ಟು ಮಂದಿಗೆ ಸಿನಿಮಾದ ಬಿಡುಗಡೆ ಹಕ್ಕು ನೀಡಿತ್ತು. ಆದರೆ ಸಿನಿಮಾ ಬಿಡುಗಡೆ ಮುಂದೂಡಿ ತಿಂಗಳುಗಳೇ ಕಳೆದರೂ ಸಹ ಸಿನಿಮಾ ಬಿಡುಗಡೆ ಬಗ್ಗೆ ಯಾವುದೇ ಖಾತ್ರಿ ಸಿಗುತ್ತಿಲ್ಲ. ಹೀಗಾಗಿ ವಿತರಕರಿಗೆ ಹಣ ಮರಳಿಸುವಂತೆ ವಿಜಯ್, ನಿರ್ಮಾಪಕರಿಗೆ ಹೇಳಿದ್ದು, ಅದರನ್ವಯ, ನಿರ್ಮಾಣ ಸಂಸ್ಥೆಯೂ ಸಹ ವಿತರಕರಿಗೆ ಹಣ ಮರಳಿಸಿದೆ ಎನ್ನಲಾಗಿದೆ.
ಇದನ್ನೂ ಓದಿ:ಸಿಎಂ ವಿಜಯ್ ಭೇಟಿ ಮಾಡಿದ ‘ಕರುಪ್ಪು’ ಸಿನಿಮಾದ ನಿರ್ದೇಶಕ ಆರ್.ಜೆ. ಬಾಲಾಜಿ
ಕೆವಿಎನ್ ನಿರ್ಮಾಣ ಸಂಸ್ಥೆಯ ಬ್ಯುಸಿನೆಸ್ ಹೆಡ್ ಆಗಿರುವ ಮೋಹಿತ್ ಅವರು ಮಾಧ್ಯಮಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾವು ಎಲ್ಲ ವಿತರಕರಿಗೆ ಹಣ ಮರಳಿಸಿರುವುದಾಗಿ ಹೇಳಿದ್ದಾರಂತೆ. ‘ಸಿನಿಮಾ ಬಿಡುಗಡೆ ಬಗ್ಗೆ ದಿನಾಂಕ ನಿಗದಿ ಆಗದೇ ಇರುವ ಕಾರಣಕ್ಕಾಗಿ, ಚಲನಚಿತ್ರ ವಿತರಕರಿಗೆ ಹಣವನ್ನು ಮರುಪಾವತಿಸಲು ನಿರ್ಧರಿಸಿದ್ದೇವೆ. ಅವರನ್ನು ಕಾಯುವಂತೆ ಮಾಡುವುದು ಅನ್ಯಾಯ ಎಂದು ನಾವು ಭಾವಿಸಿದ್ದೇವೆ, ಆದರೆ ನಾವು ಇನ್ನೂ ಸಂಭವನೀಯ ಬಿಡುಗಡೆ ದಿನಾಂಕಕ್ಕಾಗಿ ಕಾಯುತ್ತಿದ್ದೇವೆ’ ಎಂದಿದ್ದಾರೆ. ಕೆವಿಎನ್ ಅವರ ಈ ಉತ್ತಮ ನಿರ್ಧಾರದ ಹಿಂದೆ ವಿಜಯ್ ಇದ್ದಾರೆ ಎನ್ನಲಾಗುತ್ತಿದೆ.
ವಿಜಯ್ ಅವರು ರಾಜಕೀಯ ಪಕ್ಷ ಘೋಷಿಸಿದ ಬಳಿಕ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುಂಚೆ ‘ಜನ ನಾಯಗನ್’ ತಮ್ಮ ಕೊನೆಯ ಸಿನಿಮಾ ಎಂದಿದ್ದರು. ಕೆವಿಎನ್ ಅವರು ಸಿನಿಮಾಕ್ಕೆ ಬಂಡವಾಳ ಹೂಡಿ, ಎಚ್ ವಿನೋದ್ ನಿರ್ದೇಶನ ಮಾಡಿದ್ದ ‘ಜನ ನಾಯಗನ್’ ಅದ್ಧೂರಿಯಾಗಿ ನಿರ್ಮಾಣವಾಗಿತ್ತು. ಜನವರಿ ತಿಂಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಹಿಂದಿನ ದಿನ ಸಿಬಿಎಫ್ಸಿಯು ಪ್ರಮಾಣ ಪತ್ರ ನೀಡಲು ನಿರಾಕರಿಸಿತು. ಕೆವಿಎನ್ ನಿರ್ಮಾಣ ಸಂಸ್ಥೆ, ಸಿಬಿಎಫ್ಸಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿತಾದರೂ ಅದು ಉಪಯೋಗವಾಗಲಿಲ್ಲ. ಈಗ ವಿಜಯ್ ಸಿಎಂ ಆಗಿದ್ದಾರೆ. ಆದರೂ ಸಹ ಈ ವರೆಗೆ ಸಿನಿಮಾ ಬಿಡುಗಡೆಗೆ ಅನುಮತಿ ದೊರೆತಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ