ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರು ಇಂದು (ಆಗಸ್ಟ್ 9) ಜನ್ಮದಿನ ಆಚರಿಸಿಕೊಂಡಿದ್ದಾರೆ. ಸ್ಟಾರ್ ನಟರ ಹುಟ್ಟುಹಬ್ಬದ ದಿನ ಹೊಸ ಘೋಷಣೆಗಳನ್ನು ಮಾಡಲಾಗುತ್ತದೆ. ಸಿನಿಮಾಗಳ ಬಗ್ಗೆ ಅಪ್ಡೇಟ್ ಸಿಗುತ್ತದೆ ಎಂದು ಫ್ಯಾನ್ಸ್ ಕಾದಿರುತ್ತಾರೆ. ಇಂದು ಮಹೇಶ್ ಬಾಬು ಅವರ ಅಭಿಮಾನಿಗಳಿಗೆ ನಿರ್ದೇಶಕ ರಾಜಮೌಳಿ ಕಡೆಯಿಂದ ಏನಾದರೂ ಸಿಹಿ ಸುದ್ದಿ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರಿಂದ ‘SSMB 29’ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಆದ್ದರಿಂದ ಫ್ಯಾನ್ಸ್ ಇನ್ನಷ್ಟು ದಿನ ಕಾಯುವುದು ಅನಿವಾರ್ಯ ಆಗಿದೆ.
ಮಹೇಶ್ ಬಾಬು ನಟನೆಯ 29ನೇ ಸಿನಿಮಾಗೆ ರಾಜಮೌಳಿ ನಿರ್ದೇಶನ ಮಾಡಲಿದ್ದಾರೆ. ಶೀರ್ಷಿಕೆ ಬಹಿರಂಗ ಆಗದ ಈ ಸಿನಿಮಾವನ್ನು ಸದ್ಯಕ್ಕೆ ‘SSMB 29’ ಎಂದು ಕರೆಯಲಾಗುತ್ತಿದೆ. ಮಹೇಶ್ ಬಾಬು ಅವರ ಜನ್ಮದಿನದ ಪ್ರಯುಕ್ತ ಆ ಚಿತ್ರದ ಟೈಟಲ್ ಅನಾವರಣ ಆಗಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಆ ಊಹೆ ಸುಳ್ಳಾಗಿದೆ. ಟೈಟಲ್ ಏನು ಎಂಬುದು ಗೊತ್ತಾಗಲು ಇನ್ನಷ್ಟು ಸಮಯ ಹಿಡಿಯಲಿದೆ.
ರಾಜಮೌಳಿ ಅವರು ಯಾವುದೇ ಸಿನಿಮಾ ಮಾಡಿದರೂ ಅದಕ್ಕೆ ಸಾಕಷ್ಟು ಟೈಮ್ ತೆಗೆದುಕೊಳ್ಳುತ್ತಾರೆ. ಸ್ಕ್ರಿಪ್ಟ್ ಬರವಣಿಗೆ, ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಹೀಗೆ ಎಲ್ಲ ಕೆಲಸಗಳನ್ನೂ ಅವರು ಅಚ್ಚುಕಟ್ಟಾಗಿ ಮಾಡುತ್ತಾರೆ. ಈಗ ಅವರ ಸಂಪೂರ್ಣ ಗಮನ SSMB 29 ಸಿನಿಮಾ ಮೇಲಿದೆ. ಮಹೇಶ್ ಬಾಬು ಕೂಡ ಈ ಸಿನಿಮಾಗಾಗಿ ಹೆಚ್ಚು ಸಮಯ ಮೀಸಲಿಡಬೇಕಿದೆ. ಇದರ ನಡುವೆ ಅವರು ಬೇರೆ ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುವಂತಿಲ್ಲ.
ಇದನ್ನೂ ಓದಿ: Modern Masters: ರಾಜಮೌಳಿ ಜೀವನದ ಅಪರೂಪದ ಮಾಹಿತಿ ತಿಳಿಸಿದ ಹೊಸ ಸಾಕ್ಷ್ಯಚಿತ್ರ
ಕೆಲವೇ ದಿನಗಳ ಹಿಂದೆ ಒಂದು ಗಾಸಿಪ್ ಕೇಳಿಬಂದಿತ್ತು. ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ನ ಸಿನಿಮಾಗೆ ‘ಗೋಲ್ಡ್’ ಎಂದು ಶೀರ್ಷಿಕೆ ಇಡಲಾಗಿದೆ ಎಂಬ ಗುಸುಗುಸು ಹಬ್ಬಿತ್ತು. ಮಹೇಶ್ ಬಾಬು ಅವರ ಜನ್ಮದಿನದ ಸಂಭ್ರಮದಲ್ಲಿ ಈ ಟೈಟಲ್ ಅನಾವರಣ ಆಗಲಿದೆ ಎಂದು ಬಹುತೇಕರು ಊಹಿಸಿದ್ದರು. ಆದರೆ ಆ ರೀತಿ ಆಗಿಲ್ಲ. ಹಾಗಾಗಿ ಈ ಮಾಹಿತಿ ನಿಜವಲ್ಲ ಎಂಬ ನಿರ್ಧಾರಕ್ಕೆ ಅಭಿಮಾನಿಗಳು ಬಂದಿದ್ದಾರೆ. ಆದಷ್ಟು ಬೇಗ ಟೈಟಲ್ ಬಹಿರಂಗ ಆಗಲಿದೆ ಎಂದು ಫ್ಯಾನ್ಸ್ ಆಶಿಸಿದ್ದಾರೆ. ಈ ಸಿನಿಮಾ ಸಲುವಾಗಿ ಮಹೇಶ್ ಬಾಬು ಅವರು ಸಾಕಷ್ಟು ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಅವರ ಗೆಟಪ್ ಬದಲಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.