
ಸೆಲೆಬ್ರಿಟಿ ಆಗಿರುವುದು ಅಷ್ಟು ಸುಲಭವಲ್ಲ. ಸಾರ್ವಜನಿಕ ವಲಯದಲ್ಲಿ ಇರುವವರೆಗೆ ಅನೇಕ ತಾಪತ್ರಯಗಳು ಎದುರಾಗುತ್ತವೆ. ಅದರಲ್ಲೂ ತಂತ್ರಜ್ಞಾನ ಮುಂದುವರಿದಿರುವ ಈ ಕಾಲದಲ್ಲಿ ಸೆಲೆಬ್ರಿಟಿಗಳ ಫೋಟೋಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚಿದೆ. ಈಗಾಗಲೇ ಅನೇಕ ನಟಿಯರು ಈ ರೀತಿಯ ಸೈಬರ್ ಕ್ರೈಂ (Cyber Crime) ಬಗ್ಗೆ ದೂರು ನೀಡಿದ್ದಿದೆ. ಈಗ ಜನಪ್ರಿಯ ನಟಿ ಮಾಳವಿಕಾ ಮೋಹನನ್ (Malavika Mohanan) ಅವರು ಗರಂ ಆಗಿದ್ದಾರೆ. ಅವರ ಫೋಟೋವನ್ನು ಯಾರೋ ಕೆಟ್ಟದಾಗಿ ಎಡಿಟ್ ಮಾಡಿದ್ದಾರೆ. ಈ ನಟಿಯ ಒಂದು ಚಂದದ ಫೋಟೋವನ್ನು ಇಟ್ಟುಕೊಂಡು, ಅದನ್ನು ಅಶ್ಲೀಲವಾಗಿ ಎಡಿಟ್ ಮಾಡಲಾಗಿದೆ. ಅಲ್ಲದೇ, ಆ ಅಶ್ಲೀಲ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಅದನ್ನು ನೋಡಿದ ಎಲ್ಲರಿಗೂ ಅಚ್ಚರಿ ಆಗಿದೆ. ಮಾಳವಿಕಾ ಮೋಹನನ್ ಅವರ ಅಭಿಮಾನಿಗಳು ಕೂಡ ಒಂದು ಕ್ಷಣ ಶಾಕ್ ಆದರು. ಪರಿಶೀಲಿಸಿ ನೋಡಿದಾಗ ಮಾಳವಿಕಾ ಮೋಹನನ್ ಅವರ ಫೋಟೋ ಈ ರೀತಿ ದುರ್ಬಳಕೆ ಆಗಿದೆ ಎಂಬುದು ತಿಳಿಯಿತು. ತಕ್ಷಣಕ್ಕೆ ಈ ಎಡಿಟೆಡ್ ಫೇಕ್ ಫೋಟೋ (Fake Photo) ನೋಡಿದ ಕೆಲವು ಮಾಧ್ಯಮಗಳು ಕೂಡ ಯಾಮಾರಿವೆ. ಅಶ್ಲೀಲ ಫೋಟೋವನ್ನು ನಿಜವೆಂದು ತಿಳಿದು ಆ ಕುರಿತು ಸುದ್ದಿ ಪ್ರಕಟಿಸಿವೆ. ಅದರ ವಿರುದ್ಧ ಮಾಳವಿಕಾ ಮೋಹನನ್ ಗುಡುಗಿದ್ದಾರೆ.
ದಕ್ಷಿಣ ಭಾರತದಲ್ಲಿ ಮಾಳವಿಕಾ ಮೋಹನನ್ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ‘ಮಾಸ್ಟರ್’ ಸಿನಿಮಾದಲ್ಲಿ ದಳಪತಿ ವಿಜಯ್ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಅವರ ಖ್ಯಾತಿ ಹೆಚ್ಚಿತು. 2016ರಲ್ಲಿ ತೆರೆಕಂಡ ಕನ್ನಡದ ‘ನಾನು ಮತ್ತು ವರಲಕ್ಷ್ಮೀ’ ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ. ವಿಶ್ವವಿಖ್ಯಾತ ನಿರ್ದೇಶಕ ಮಜಿದ್ ಮಜಿದಿ ನಿರ್ದೇಶನ ಮಾಡಿದ್ದ ‘ಬಿಯಾಂಡ್ ದಿ ಕ್ಲೌಡ್ಸ್’ ಸೀರಿಸ್ನಲ್ಲಿ ಅವರು ಅಭಿನಯಿಸುವ ಅವಕಾಶ ಪಡೆದಿದ್ದರು. ಇಷ್ಟೆಲ್ಲ ಜನಪ್ರಿಯತೆ ಇರುವ ನಟಿಗೆ ಈಗ ಎಡಿಟೆಡ್ ಫೋಟೋದಿಂದ ಕಿರಿಕಿರಿ ಆಗಿದೆ.
ತಮ್ಮ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿದವರಿಗೆ ಮಾಳವಿಕಾ ಮೋಹನನ್ ಛೀಮಾರಿ ಹಾಕಿದ್ದಾರೆ. ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಒರಿಜಿನಲ್ ಫೋಟೋವನ್ನು ಸಾಕ್ಷಿಯಾಗಿ ಇಟ್ಟುಕೊಂಡು ಅವರು ತಮ್ಮ ಮಾತನ್ನು ಸಾಬೀತುಪಡಿಸಿದ್ದಾರೆ. ‘ಕೆಲವೇ ತಿಂಗಳ ಹಿಂದೆ ತೆಗೆದ ಫೋಟೋ ಇದು. ಇದನ್ನು ಬಳಸಿಕೊಂಡು ಯಾರೋ ಅಶ್ಲೀಲವಾಗಿ ಎಡಿಟ್ ಮಾಡಿದ್ದಾರೆ. ಕೆಲವು ಮಾಧ್ಯಮಗಳೂ ಸೇರಿದಂತೆ ಅನೇಕರು ಅಶ್ಲೀಲ ಫೋಟೋವನ್ನು ವೈರಲ್ ಮಾಡುತ್ತಿದ್ದಾರೆ. ಅದು ಸರಿಯಲ್ಲ. ನಿಮಗೆ ಫೇಕ್ ಫೋಟೋ ಕಾಣಿಸಿದರೆ ಅದನ್ನು ರಿಪೋರ್ಟ್ ಮಾಡಿ’ ಎಂದು ಮಾಳವಿಕಾ ಮೋಹನನ್ ಬರೆದುಕೊಂಡಿದ್ದಾರೆ.
ಈ ರೀತಿ ಫೇಕ್ ಫೋಟೋದ ಹಾವಳಿಗೆ ಬೇಸರ ಮಾಡಿಕೊಂಡಿರುವುದು ಮಾಳವಿಕಾ ಮೋಹನನ್ ಮಾತ್ರವಲ್ಲ. ಈ ಹಿಂದೆ ನಟಿಯರಾದ ಶ್ರುತಿ ಹಾಸನ್, ಪಾಯಲ್ ರಜಪೂತ್ ಮುಂತಾದವರಿಗೂ ಕೂಡ ಇದೇ ರೀತಿ ಕಿರಿಕಿರಿ ಆಗಿತ್ತು.
ಇದನ್ನೂ ಓದಿ:
‘ನಾನು ಅಶ್ಲೀಲ ಸಿನಿಮಾ ಮಾಡಿಲ್ಲ, ಮುಖ ಮುಚ್ಕೊಂಡು ಓಡಾಡಲ್ಲ’; ಮೌನ ಮುರಿದ ರಾಜ್ ಕುಂದ್ರಾ
ನಟಿಯರ ಫೋಟೋ ನೋಡಿ ಯಾಮಾರಬೇಡಿ; ಇಲ್ಲಿದೆ ‘ವರದನಾಯಕ’ ಹೀರೋಯಿನ್ ಅಸಲಿ ಕಥೆ