ನಟ ಮೋಹನ್ಲಾಲ್ (Mohanlal) ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗ ಅವರಿಗೆ 63 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಮೈನವಿರೇಳಿಸುವಂತಹ ಸ್ಟಂಟ್ಸ್ ಮಾಡುತ್ತಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಅನಾಯಾಸವಾಗಿ ನಟಿಸುತ್ತಾರೆ. ಆದರೆ ಇದರ ಹಿಂದೆ ಅವರು ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಪ್ರತಿ ದಿನ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ. ಮೋಹನ್ಲಾಲ್ ಅವರ ಕಸರತ್ತು ಹೇಗಿರುತ್ತದೆ ಎಂಬುದರ ಝಲಕ್ ತೋರಿಸುವಂತಹ ಒಂದು ವಿಡಿಯೋ (Mohanlal Gym Video) ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೋಹನ್ಲಾಲ್ ಅವರು ಬರೋಬ್ಬರಿ 100 ಕೆಜಿ ತೂಕವನ್ನು ಅನಾಯಾಸವಾಗಿ ಎತ್ತುವ ದೃಶ್ಯ ಇದೆ. ಇದನ್ನು ಕಂಡು ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ನಿಜವಾಗಿಯೂ ಮೋಹನ್ಲಾಲ್ ಅವರಿಗೆ 63 ವರ್ಷ (Mohanlal Age) ಆಗಿದೆಯೇ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ಮೋಹನ್ಲಾಲ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಅವರ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತವೆ. ಫಿಟ್ನೆಸ್ ಬಗ್ಗೆ ಮೋಹನ್ಲಾಲ್ ಅವರು ಹೆಚ್ಚು ಆಸಕ್ತಿ ವಹಿಸುತ್ತಾರೆ ಎಂಬುದಕ್ಕೆ ಈಗ ವೈರಲ್ ಆಗಿರುವ ವಿಡಿಯೋ ಸಾಕ್ಷಿ. ಹಿರಿಯ ನಟನ ಬದ್ಧತೆ ನೋಡಿ ಎಲ್ಲರೂ ವಾವ್ ಎನ್ನುತ್ತಿದ್ದಾರೆ. ಜಿಮ್ಗೆ ಹೋಗಲು ಸೋಮಾರಿತನ ತೋರುವ ಹದಿಹರೆಯದವರು ನಾಚುವಂತಿದೆ ಮೋಹನ್ಲಾಲ್ ಅವರ ಈ ವಿಡಿಯೋ.
ಎಲ್ಲ ಕಡೆಗಳಲ್ಲಿ ಮಳೆ ಸುರಿಯುತ್ತಿದೆ. ವಾತಾವರಣ ತುಂಬ ಕೂಲ್ ಆಗಿದೆ. ಇಂಥ ಸಮಯದಲ್ಲಿ ಮನೆಯಲ್ಲೇ ಇದ್ದುಕೊಂಡು ಬಿಸಿಬಿಸಿ ಕಾಫಿ, ಟೀ ಕುಡಿಯುತ್ತ, ಕುರುಕಲು ತಿಂಡಿ ತಿನ್ನುತ್ತ ಕಾಲ ಕಳೆಯುವವರೇ ಹೆಚ್ಚು. ಚಳಿ ಎಂಬ ನೆಪ ಹೇಳಿ ಜಿಮ್ಗೆ ಚಕ್ಕರ್ ಹಾಕುವವರಿಗೂ ಲೆಕ್ಕವಿಲ್ಲ. ಆದರೆ ಮೋಹನ್ಲಾಲ್ ಅವರು ಇಂಥ ಯಾವುದೇ ನೆಪವನ್ನೂ ಹೇಳುತ್ತಿಲ್ಲ. ಕಷ್ಟಪಟ್ಟು ಜಿಮ್ನಲ್ಲಿ ಬೆವರು ಹರಿಸುತ್ತಿದ್ದಾರೆ. ತಮ್ಮ ಅಭಿಮಾನಿಗಳಿಗೂ ಅವರು ಮಾದರಿ ಆಗಿದ್ದಾರೆ.
ಇದನ್ನೂ ಓದಿ: Mohanlal: ವೈರಲ್ ಆಗಿದೆ ‘ಮಲೈಕೋಟೈ ವಾಲಿಬನ್’ ಫಸ್ಟ್ ಲುಕ್; 62ರ ಪ್ರಾಯದಲ್ಲೂ ಮೋಹನ್ಲಾಲ್ ಸಾಹಸ
‘ಮಲೈಕೋಟೈ ವಾಲಿಬನ್’ ಸಿನಿಮಾದಲ್ಲಿ ಮೋಹನ್ಲಾಲ್ ಅವರು ನಟಿಸುತ್ತಿದ್ದಾರೆ. ‘ಲೂಸಿಫರ್ 2’, ‘ವೃಷಭ’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ. ಕಾರಣಾಂತರಗಳಿಂದ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ‘ಲೂಸಿಫರ್ 2’ ಸಿನಿಮಾದ ಶೂಟಿಂಗ್ ವಿಳಂಬ ಆಗಿದೆ. ‘ವೃಷಭ’ ಚಿತ್ರಕ್ಕೆ ಕನ್ನಡದ ನಿರ್ದೇಶಕ ನಂದಕಿಶೋರ್ ಅವರು ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈ ಎಲ್ಲ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಮೋಹನ್ಲಾಲ್ ಅವರ ಪುತ್ರ ಪ್ರಣವ್ ಮೋಹನ್ಲಾಲ್ ಕೂಡ ನಟನಾಗಿ ಮಿಂಚುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.