
ನಿರ್ದೇಶಕ ಮಣಿರತ್ನಂ (Mani Ratnam) ಅವರು ಮತ್ತೆ ಮ್ಯಾಜಿಕ್ ಮಾಡಿದ್ದಾರೆ. ಮನಸೆಳೆಯುವ ಪ್ರೇಮಕಥೆಗಳನ್ನು ತೆರೆಗೆ ತರುವಲ್ಲಿ ಫೇಮಸ್ ಆದ ಅವರು ಈ ಬಾರಿ ಐತಿಹಾಸಿಕ ಕಥಾಹಂದರದ ‘ಪೊನ್ನಿಯಿನ್ ಸೆಲ್ವನ್’ (Ponniyin Selvan) ಚಿತ್ರದ ಮೂಲಕ ಜನಮನ ಗೆದ್ದಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಭರ್ಜರಿ ಕಮಾಯಿ ಮೂಡುತ್ತಿದೆ. ವಿಶ್ವಾದ್ಯಂತ 4 ದಿನಕ್ಕೆ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದು ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಹೆಚ್ಚುಗಾರಿಕೆ. ಈ ಸಿನಿಮಾ ನೋಡಿದ ಅಭಿಮಾನಿಗಳು ಭೇಷ್ ಎನ್ನುತ್ತಿದ್ದಾರೆ. ಅಂತಿಮವಾಗಿ ಬಾಕ್ಸ್ ಆಫೀಸ್ ಕಲೆಕ್ಷನ್ (Ponniyin Selvan Collection) ಎಷ್ಟಾಗಲಿದೆ ಎಂಬುದನ್ನು ತಿಳಿಯುವ ಕುತೂಹಲ ನಿರ್ಮಾಣ ಆಗಿದೆ.
ಹಲವು ಕಾರಣಗಳಿಂದಾಗಿ ಪ್ರೇಕ್ಷಕರು ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ಈ ಚಿತ್ರ ಯಶಸ್ವಿ ಆಗಿದೆ. ಸಿನಿಮಾ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ. ಇದರಿಂದ ಚಿತ್ರಕ್ಕೆ ಉತ್ತಮವಾಗಿ ಬಾಯಿ ಮಾತಿನ ಪ್ರಚಾರ ಸಿಕ್ಕಿದೆ. ದಸರಾ ಹಬ್ಬದ ರಜಾ ದಿನಗಳು ಹಾಗೂ ವೀಕೆಂಡ್ ಕೂಡ ಪಸ್ಲ್ ಪಾಯಿಂಟ್ ಆಗಿದೆ. ಈ ಎಲ್ಲ ಕಾರಣದಿಂದ ‘ಪೊನ್ನಿಯಿನ್ ಸೆಲ್ವನ್’ ಚಿತ್ರ ಜಯಭೇರಿ ಬಾರಿಸಿದೆ.
ಈ ಸಿನಿಮಾದಲ್ಲಿ ಬಹುತಾರಾಗಣ ಇದೆ. ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ಕಾರ್ತಿ, ಜಯಂ ರವಿ, ತ್ರಿಶಾ, ಪ್ರಕಾಶ್ ರಾಜ್ ಮುಂತಾದವರು ನಟಿಸಿರುವ ಕಾರಣ ಸಿನಿಮಾದ ಮೆರುಗು ಹೆಚ್ಚಿದೆ. ಚೋಳರ ಕಥೆಯನ್ನು ದೊಡ್ಡ ಪರದೆಯಲ್ಲಿ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಇಂದಿಗೂ ಅನೇಕ ಕಡೆಗಳಲ್ಲಿ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಟ್ರೇಡ್ ಅನಲಿಸ್ಟ್ ರಮೇಶ್ ಬಾಲಾ ಅವರು ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದ ಕಲೆಕ್ಷನ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ವಿಶ್ವಾದ್ಯಂತ 4 ದಿನದಲ್ಲಿ ಈ ಸಿನಿಮಾ 250 ಕೋಟಿ ರೂಪಾಯಿ ಗಳಿಸಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ತಮಿಳಿನ ಈ ಸಿನಿಮಾ ತಮಿಳುನಾಡು ಪಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದು, ತಮಿಳಿನ ಜೊತೆಗೆ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರ ತೆರೆಕಂಡಿದೆ.
‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಮೂಲಕ ಐಶ್ವರ್ಯಾ ರೈ ಬಚ್ಚನ್ ಅವರು ಕಾಲಿವುಡ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಬ್ಲಾಕ್ ಬಸ್ಟರ್ ಮೂಲಕ ಅವರು ರೀ-ಎಂಟ್ರಿ ನೀಡಿರುವುದು ತಮಿಳುನಾಡಿನಲ್ಲಿರುವ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ವಿಮರ್ಶಕರು ಐಶ್ವರ್ಯಾ ನಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:19 pm, Tue, 4 October 22