
ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ತೆಲುಗು ಚಿತ್ರರಂಗದ ಲೆಜೆಂಡರಿ ನಟ. ಹಲವು ದಶಕಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆದಿದ್ದಾರೆ ಚಿರಂಜೀವಿ. ಒಂದು ಸಮಯದಲ್ಲಿ ಅಮಿತಾಬ್ ಬಚ್ಚನ್ ಅವರಿಗಿಂತಲೂ ದೊಡ್ಡ ಸ್ಟಾರ್ ಆಗಿದ್ದ ಚಿರಂಜೀವಿ, ಬಚ್ಚನ್ ಅವರಿಗಿಂತಲೂ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದರು. ತೀರ ಇತ್ತೀಚೆಗಿನ ವರೆಗೂ ಸಹ ಮೆಗಾಸ್ಟಾರ್ ಅನ್ನು ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಹಿಂದಿಕ್ಕುವವರಿರಲಿಲ್ಲ. ಆದರೆ ರಾಜಕೀಯಕ್ಕೆ ಹೋಗಿ ಮರಳಿದ ಬಳಿಕ ಚಿರಂಜೀವಿ ಸತತ ಸೋಲುಗಳನ್ನೇ ಕಂಡಿದ್ದರು. ಯಾವ ಸಿನಿಮಾ ಸಹ ದೊಡ್ಡ ಹಿಟ್ ಆಗಿರಲಿಲ್ಲ. ಆದರೆ ಇದೀಗ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಮೂಲಕ ಹಲವು ವರ್ಷಗಳ ಬಳಿಕ ದೊಡ್ಡ ಯಶಸ್ಸನ್ನು ಚಿರಂಜೀವಿ ಕಂಡಿದ್ದಾರೆ.
‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಹಿಟ್ ಆಗಿದೆ. ಪ್ರಸ್ತುತ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆದ ಪ್ರಭಾಸ್ ಸಿನಿಮಾವನ್ನು ಸಹ ಹಿಂದಿಕ್ಕಿ ಸಂಕ್ರಾಂತಿಯ ವಿನ್ನರ್ ಎನಿಸಿಕೊಂಡಿದೆ. ಇದಕ್ಕಿಂತಲೂ ಮುಖ್ಯವಾಗಿ, ಸತತ ಸೋಲು ಕಂಡು ಕಂಗಾಲಾಗಿದ್ದ ಚಿರಂಜೀವಿ ಅವರಿಗೆ ಅತ್ಯಂತ ಅವಶ್ಯಕವಾದ ಗೆಲುವನ್ನು ತಂದುಕೊಟ್ಟಿದೆ. ಮೆಗಾಸ್ಟಾರ್ ಅನ್ನು ಮತ್ತೆ ಗೆಲುವಿನ ಹಳಿಗೆ ತಂದಿದೆ.
ತಮ್ಮನ್ನು ಸೋಲಿನ ಸುಳಿಯಿಂದ ಮೇಲೆತ್ತಿದ ನಿರ್ದೇಶಕನಿಗೆ ಮೆಗಾಸ್ಟಾರ್ ಚಿರಂಜೀವಿ ಭರ್ಜರಿ ಉಡುಗೊರೆಯನ್ನೇ ಕೊಟ್ಟಿದ್ದಾರೆ. ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾದ ನಿರ್ದೇಶಕ ಅನಿಲ್ ರವಿಪುಡಿ ಅವರಿಗೆ ಚಿರಂಜೀವಿ ಅವರು ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅನಿಲ್ ರವಿಪುಡಿ ಅವರಿಗೆ ಅತ್ಯಂತ ಐಶಾರಾಮಿ ರೇಂಜ್ ರೋವರ್ ಸ್ಪೋರ್ಟ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನೂ ಓದಿ:ಚಿರಂಜೀವಿ ಕ್ರೇಜ್: ಒಂದೇ ಕುಟುಂಬದ 140 ಮಂದಿಯಿಂದ ಸಿನಿಮಾ ವೀಕ್ಷಣೆ
ಚಿರಂಜೀವಿ ಉಡುಗೊರೆ ನೀಡಿರುವ ಕಾರಿನ ಪ್ರಾರಂಭಿಕ ಬೆಲೆಯೇ 1.70 ಕೋಟಿ ರೂಪಾಯಿಗಳಿದೆ. ಟಾಪ್ ಮಾಡೆಲ್ ಬೆಲೆ 3.39 ಕೋಟಿ ರೂಪಾಯಿಗಳಿದೆ. ಅತ್ಯಂತ ಐಶಾರಾಮಿ ಸೌಲಭ್ಯಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ಕಾರು, ಭಾರತದಲ್ಲಿ ಸ್ಟೇಟಸ್ ಸಿಂಬಲ್ ಎನಿಸಿಕೊಂಡಿದೆ. ಕಾರನ್ನು ಉಡುಗೊರೆಯಾಗಿ ಪಡೆದಿರುವ ಅನಿಲ್ ರವಿಪುಡಿ ಖುಷ್ ಆಗಿದ್ದಾರೆ. ಚಿರಂಜೀವಿ ಅವರು ಕಾರು ಉಡುಗೊರೆ ನೀಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ಕೆಲ ತಿಂಗಳ ಹಿಂದೆ ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸಹ ತಮ್ಮ ಸಿನಿಮಾ ‘ಓಜಿ’ಯನ್ನು ನಿರ್ದೇಶಿಸಿದ್ದ ಸುಜೀತ್ ಅವರಿಗೆ ಹೀಗೆಯೇ ಒಂದು ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಪವನ್ ಕಲ್ಯಾಣ್, ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಅದರ ಬೆಲೆ ಸುಮಾರು 3 ಕೋಟಿ ರೂಪಾಯಿಗಳಾಗಿತ್ತು. ಇದೀಗ ಪವನ್ ಅವರ ಅಣ್ಣ ಚಿರಂಜೀವಿ ಸಹ ದುಬಾರಿ ಕಾರನ್ನು ನಿರ್ದೇಶಕನಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ