
ಸಂಕ್ರಾಂತಿಗೆ ತೆಲುಗಿನ ಹಲವು ಸಿನಿಮಾಗಳು ಬಿಡುಗಡೆ ಆಗಿವೆ. ಪ್ರಭಾಸ್ (Prabhas) ಸಿನಿಮಾ ಸೇರಿದಂತೆ, ಒಟ್ಟು ಐದು ದೊಡ್ಡ ಸಿನಿಮಾಗಳೇ ಬಿಡುಗಡೆ ಆಗಿವೆ. ಆದರೆ ಗೆದ್ದಿರುವುದು ಮೆಗಾಸ್ಟಾರ್ ಚಿರಂಜೀವಿ ಮಾತ್ರ. ಚಿರಂಜೀವಿ ನಟಿಸಿರುವ ‘ಮನ ಶಂಕರ ವರ ಪ್ರಸಾದ್ ಗಾರು’ (MSVPG) ಸಿನಿಮಾ ಇತರೆ ಸಿನಿಮಾಗಳನ್ನು ಬಾಕ್ಸ್ ಆಫೀಸ್ನಲ್ಲಿ ಹಿಂದಿಕ್ಕಿದೆ. ಅದು ಮಾತ್ರವೇ ಅಲ್ಲದೆ ಈ ಸಿನಿಮಾ ತೆಲುಗು ಚಿತ್ರರಂಗದ ಇತ್ತೀಚೆಗಿನ ಟಾಪ್ ಸಿನಿಮಾಗಳಲ್ಲಿ ಒಂದಾಗಿರುವ ‘ಆರ್ಆರ್ಆರ್’ ಸಿನಿಮಾದ ಒಂದು ದಾಖಲೆಯನ್ನೇ ಮುರಿದು ಹಾಕಿದೆ.
‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಜನವರಿ 12 ರಂದು ಬಿಡುಗಡೆ ಆಗಿದ್ದು, ಬಿಡುಗಡೆ ಆದ ಮೊದಲ ದಿನ ಸುಮಾರು 84 ಕೋಟಿ ಹಣ ಗಳಿಸಿತ್ತು. ಅದಾದ ಬಳಿಕವೂ ಸಹ ಸಿನಿಮಾ ಕಲೆಕ್ಷನ್ನಲ್ಲಿ ಇಳಿಕೆ ಆಗಿಲ್ಲ. ಅದರಲ್ಲೂ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲೆಕ್ಷನ್ ಗಮನಾರ್ಹ ಮಟ್ಟದಲ್ಲಿ ಸಮತೋಲನ ಕಾಯ್ದುಕೊಂಡಿದೆ. ಸಿನಿಮಾ ಬಿಡುಗಡೆ ಆಗಿ ವಾರವಾಗುತ್ತಾ ಬರುತ್ತಿದ್ದರೂ ಸಿನಿಮಾ ಈಗಲೂ ಡಬಲ್ ಡಿಜಿಟ್ ಗಳಿಕೆ ಮಾಡುತ್ತಿದೆ.
‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಬಿಡುಗಡೆ ಆದ ಐದನೇ ದಿನ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ 14.50 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಇದು ಕಡಿಮೆ ಮೊತ್ತವಲ್ಲ. ‘ಆರ್ಆರ್ಆರ್ಆರ್’ ಸಿನಿಮಾ ಸಹ ಬಿಡುಗಡೆ ಆದ ಐದನೇ ದಿನ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿರಲಿಲ್ಲ. ‘ಆರ್ಆರ್ಆರ್’ ಸಿನಿಮಾ ಐದನೇ ದಿನ ಗಳಿಸಿದ್ದಿದ್ದು 13 ಕೋಟಿ ರೂಪಾಯಿಗಳು ಆದರೆ ‘ಶಂಕರ ವರ ಪ್ರಸಾದ್’ ಗಳಿಸಿರುವುದು 14.50 ಕೋಟಿ. ಆ ಮೂಲಕ ‘ಆರ್ಆರ್ಆರ್’ ಸಿನಿಮಾದ ದಾಖಲೆಯನ್ನೇ ಮುರಿದಿದೆ ಚಿರಂಜೀವಿ ಸಿನಿಮಾ. ಆ ಮೂಲಕ ತಮ್ಮ ಪುತ್ರ ರಾಮ್ ಚರಣ್ ಅವರ ದಾಖಲೆಯನ್ನೇ ಮುರಿದಂತಾಗಿದೆ ಚಿರಂಜೀವಿ.
ಇದನ್ನೂ ಓದಿ:ಒಂದೇ ದಿನ ರಚಿತಾ ರಾಮ್ ಎರಡು ಸಿನಿಮಾಗಳು ರಿಲೀಸ್; ಫ್ಯಾನ್ಸ್ಗೆ ಹಬ್ಬ
‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಐದು ದಿನಗಳಲ್ಲಿ 200 ಕೋಟಿಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿದೆ. ಚಿರಂಜೀವಿ ಅವರ ಸಿನಿಮಾ ಒಂದು ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತ ಗಳಿಸಿರುವುದು ಇದೇ ಮೊದಲು. 2019 ರಲ್ಲಿ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಾಗಿನಿಂದಲೂ ಸಹ ಚಿರಂಜೀವಿಗೆ ಇಷ್ಟು ದೊಡ್ಡ ಜಯ ಲಭಿಸಿರಲಿಲ್ಲ. ಚಿರಂಜೀವಿ ನಟಿಸಿದ ಸಿನಿಮಾಗಳು ಸತತವಾಗಿ ಬಾಕ್ಸ್ ಆಫೀಸ್ನಲ್ಲಿ ಸೋಲುತ್ತಲೇ ಇದ್ದವು. ಆದರೆ ಇದೀಗ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಮೂಲಕ ಚಿರಂಜೀವಿಗೆ ಮತ್ತೆ ಗೆಲುವು ಲಭಿಸಿದೆ.
‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ನಯನತಾರಾ ನಾಯಕಿ. ವಿಕ್ಟರಿ ವೆಂಕಟೇಶ್ ಸಹ ಸಿನಿಮಾನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಸ್ಯದ ಜೊತೆಗೆ ಸಖತ್ ಆಕ್ಷನ್ ಸಹ ಸಿನಿಮಾನಲ್ಲಿದೆ. ಈ ಸಿನಿಮಾನಲ್ಲಿ ವಿಂಟೇಜ್ ಚಿರಂಜೀವಿ ಕಾಣಿಸುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ