
ಶಿವರಾಜ್ ಕುಮಾರ್ (Shiva Rajkumar) ಕನ್ನಡದ ಸ್ಟಾರ್ ನಟ, ಅವರು ನಟನೆಯಿಂದ ಮಾತ್ರವಲ್ಲದೆ ತಮ್ಮ ವ್ಯಕ್ತಿತ್ವದಿಂದಲೂ ಅಭಿಮಾನಿಗಳಿಗೆ, ಚಿತ್ರರಂಗದವರಿಗೆ ಹತ್ತಿರವಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ನೆರೆಯ ಚಿತ್ರರಂಗಗಳಲ್ಲಿಯೂ ಶಿವಣ್ಣನಿಗೆ ಬಹಳ ಒಳ್ಳೆಯ ಹೆಸರಿದೆ. ಇದೇ ಕಾರಣಕ್ಕೆ ಪರ ಭಾಷೆ ಸಿನಿಮಾಗಳಿಂದಲೂ ಶಿವರಾಜ್ ಕುಮಾರ್ ಅವರಿಗೆ ಒಳ್ಳೆಯ ಆಫರ್ಗಳು ಬರುತ್ತಲೇ ಇರುತ್ತವೆ. ಶಿವಣ್ಣ ಸಹ ಗೌರವಪೂರ್ವಕವಾಗಿ ಪಾತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿರುತ್ತಾರೆ. ಇತ್ತೀಚೆಗಷ್ಟೆ ಟಾಲಿವುಡ್ ಸ್ಟಾರ್ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಶಿವಣ್ಣ ನಟಿಸಿದ್ದು, ಸಿನಿಮಾ ಜೊತೆಗೆ ಪಾತ್ರವೂ ಹಿಟ್ ಆಗಿದೆ.
ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಪುತ್ರ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಬಗ್ಗೆ ಮಾತನಾಡುತ್ತಾ ಶಿವಣ್ಣ ಅವರನ್ನು ಕೊಂಡಾಡಿದ್ದಾರೆ. ‘ಶಿವರಾಜ್ ಕುಮಾರ್, ನಮ್ಮ ಶಿವಣ್ಣ ಆ ಪಾತ್ರವನ್ನು ಒಪ್ಪಿಕೊಂಡು, ನಟಿಸುತ್ತೀನಿ ಎಂದಿದ್ದೇ ನಮ್ಮ ಪಾಲಿಗೆ ಮೊದಲ ಯಶಸ್ಸು, ಅದು ನಿನ್ನ ಅದೃಷ್ಟ’ ಎಂದು ನಿರ್ದೇಶಕ ಬುಚ್ಚಿಬಾಬು ಸನಾಗೆ ಚಿರಂಜೀವಿ ಹೇಳಿದ್ದಾರೆ.
‘ಅವರೊಬ್ಬ ಅದ್ಭುತವಾದ ನಟ, ಅಷ್ಟೇ ಅದ್ಭುತವಾದ ವ್ಯಕ್ತಿ. ಪಾತ್ರವೇ ಅವರಾಗಿ ಅವರು ನಟಿಸಿದ್ದಾರೆ. ಚರಣ್ ಅನ್ನು ಗದರಿಸುವುದಾಗಲಿ, ಬೈಯ್ಯುವುದಾಗಲಿ ಮಾಡಬೇಕು ಎಂದರೆ ಅದಕ್ಕೆ ಒಳ್ಳೆಯ ಖಡಕ್ ಆದ ನಟನೆ ಆಗಿರಬೇಕು, ಶಿವಣ್ಣ ಆ ಸಿನಿಮಾನಲ್ಲಿ ರಾಮ್ ಚರಣ್ ಪಾತ್ರವನ್ನು ಬೈಯ್ಯುತ್ತಿದ್ದರೆ ಒಬ್ಬ ತಂದೆಯೇ ಮಗನನ್ನು ಬೈಯ್ಯುತ್ತಿರುವಂತೆ ಶಿಸ್ತು ಕಲಿಸುತ್ತಿರುವಂತೆ ಕಾಣುತ್ತದೆ, ಬಹಳ ಚೆನ್ನಾಗಿ ಅವರಿಬ್ಬರ ಸೀನ್ಗಳು ಮೂಡಿ ಬಂದಿವೆ’ ಎಂದಿದ್ದಾರೆ ಚಿರಂಜೀವಿ.
ಇದನ್ನೂ ಓದಿ:ವಿಕಲಚೇತನ ಯುವಕನ ಚಿತ್ರಕಲೆ ಮೆಚ್ಚಿದ ಶಿವರಾಜ್ ಕುಮಾರ್
ಚಿರಂಜೀವಿ ಅವರು ದಶಕಗಳಿಂದಲೂ ದೊಡ್ಮನೆಯೊಟ್ಟಿಗೆ ಆಪ್ತ ಬಂಧ ಹೊಂದಿರುವವರು. ರಾಜ್ಕುಮಾರ್ ಅವರೊಟ್ಟಿಗೆ ಚಿರಂಜೀವಿ ಅವರಿಗೆ ಆಪ್ತ ಬಂಧವಿತ್ತು. ಈಗ ಶಿವಣ್ಣ ತೆಲುಗಿನಲ್ಲಿ ನಟಿಸಿರುವಂತೆ ಚಿರಂಜೀವಿ ಸಹ ಕನ್ನಡದಲ್ಲಿ ನಟಿಸಿದ್ದಾರೆ. ರವಿಚಂದ್ರನ್ ನಟನೆಯ ‘ಸಿಪಾಯಿ’ ಮತ್ತು ಅರ್ಜುನ್ ಸರ್ಜಾ ನಟನೆಯ ‘ಶ್ರೀ ಮಂಜುನಾಥ’ ಸಿನಿಮಾಗಳಲ್ಲಿ ಚಿರಂಜೀವಿ ಅವರು ಅತಿಥಿ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ಇಲ್ಲಿಯೂ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ಶಿವರಾಜ್ ಕುಮಾರ್ ಅವರು ‘ಪೆದ್ದಿ’ ಸಿನಿಮಾನಲ್ಲಿ ಗೌರ ನಾಯ್ಡು ಹೆಸರಿನ ಕುಸ್ತಿ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ರಾಮ್ ಚರಣ್ಗೆ ಕುಸ್ತಿ ಹೇಳಿಕೊಟ್ಟು ಆ ಪಾತ್ರದ ವ್ಯಕ್ತಿತ್ವ ಬದಲಿಸುವ ಪಾತ್ರ ಶಿವಣ್ಣ ಅವರದ್ದು. ಶಿವಣ್ಣನಿಗೆ ಕೆಲವು ಮಾಸ್ ಸೀನ್ಗಳ ಜೊತೆಗೆ ಭಾವುಕ ದೃಶ್ಯಗಳು ಸಹ ಸಿನಿಮಾನಲ್ಲಿ ಇವೆ. ‘ಪೆದ್ದಿ’ ಶಿವಣ್ಣ ನಟಿಸಿರುವ ಎರಡನೇ ತೆಲುಗು ಸಿನಿಮಾ. ಈ ಹಿಂದೆ ‘ಗೌತಮಿ ಪುತ್ರ ಶಾತಕರ್ಣಿ’ ಸಿನಿಮಾನಲ್ಲಿ ಶಿವಣ್ಣ ಅತಿಥಿ ಪಾತ್ರದಲ್ಲಿ ನಟಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:29 pm, Tue, 16 June 26