ಸ್ಟಾರ್ ನಟಿಯಾಗಬೇಕಿದ್ದ ಮಿತಾಲಿ ಶರ್ಮ ಕೊನೆಗೆ ಭಿಕ್ಷುಕಿ ಆದ ಕಣ್ಣೀರಿನ ಕಥೆ

ಭೋಜ್‌ಪುರಿ ಚಿತ್ರರಂಗದ ಭರವಸೆಯ ನಟಿಯಾಗಿದ್ದ ಮಿತಾಲಿ ಶರ್ಮಾ ಅವರ ಕರುಣಾಜನಕ ಕಥೆ ಇದು. ಸಿನಿಮಾ ಅವಕಾಶಗಳು ಕಳೆದುಕೊಂಡು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಕುಟುಂಬದ ಬೆಂಬಲವಿಲ್ಲದೆ, ಮಾನಸಿಕ ಆರೋಗ್ಯ ಕಳೆದುಕೊಂಡಿದ್ದರು. ಒಂದು ಕಾಲದ ಸ್ಟಾರ್ ನಟಿ ಮುಂಬೈನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ ಪತ್ತೆಯಾದ ಘಟನೆ, ಚಿತ್ರರಂಗದ ಕರಾಳ ವಾಸ್ತವವನ್ನು ಅನಾವರಣಗೊಳಿಸಿದೆ. ದುರಂತ ಬದುಕು ಎಲ್ಲರಿಗೂ ಪಾಠ.

ಸ್ಟಾರ್ ನಟಿಯಾಗಬೇಕಿದ್ದ ಮಿತಾಲಿ ಶರ್ಮ ಕೊನೆಗೆ ಭಿಕ್ಷುಕಿ ಆದ ಕಣ್ಣೀರಿನ ಕಥೆ
ಮಿತಾಲಿ

Updated on: May 30, 2026 | 3:04 PM

ಚಿತ್ರರಂಗ ಎಂದರೆ ಕೋಟಿ ಕೋಟಿ ಹಣ, ಗ್ಲಾಮರ್, ಹೆಸರು ಮತ್ತು ಪ್ರಸಿದ್ಧಿ ಮಾತ್ರ ಅಂದುಕೊಳ್ಳುವವರೇ ಹೆಚ್ಚು. ಪ್ರತಿವರ್ಷ ಸಾವಿರಾರು ಜನ ನಟ-ನಟಿಯರಾಗುವ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತು ಮಾಯಾನಗರಿ ಮುಂಬೈಗೆ ಬರುತ್ತಾರೆ. ಆದರೆ, ಇಲ್ಲಿ ಬಣ್ಣದ ಲೋಕದ ಹೋರಾಟದಲ್ಲಿ ಗೆದ್ದು ನಿಲ್ಲುವವರು ಕೆಲವೇ ಕೆಲವು ಮಂದಿ ಮಾತ್ರ. ಇನ್ನು ಕೆಲವರಿಗೆ ಇಲ್ಲಿ ಎದುರಾಗುವ ಸೋಲನ್ನು ತಡೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಅಂತಹದೇ ಒಂದು ಅತ್ಯಂತ ದುಃಖದಾಯಕ ಮತ್ತು ಕರುಣಾಜನಕ ಕಥೆ ಮಾಜಿ ಭೋಜ್‌ಪುರಿ ನಟಿ ಹಾಗೂ ಮಾಡೆಲ್ ಮಿತಾಲಿ ಶರ್ಮ ಅವರದ್ದು.

ಒಂದಾನೊಂದು ಕಾಲದಲ್ಲಿ ಮಿತಾಲಿ ಶರ್ಮ ಭೋಜ್‌ಪುರಿ ಚಿತ್ರರಂಗದ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಕೆಲವು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಅವರು ಮಾಡೆಲಿಂಗ್ ಕೂಡ ಮಾಡುತ್ತಿದ್ದರು. ಆರಂಭದಲ್ಲಿ ಮಿತಾಲಿ ನಟಿಸಿದ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಪ್ರದರ್ಶನ ಕಂಡಿದ್ದವು. ಇದರಿಂದಾಗಿ ಭೋಜ್‌ಪುರಿ ಚಿತ್ರರಂಗದ ಹಲವು ನಿರ್ಮಾಪಕ ಹಾಗೂ ನಿರ್ದೇಶಕರ ನೆಚ್ಚಿನ ನಟಿಯಾಗಿ ಅವರು ಹೊರಹೊಮ್ಮಿದ್ದರು. ಹೀಗಾಗಿ ಅವರು ಸ್ಟಾರ್ ನಟಿ ಆಗುತ್ತಾರೆ ಎಂದೇ ಅನೇಕರು ಭಾವಿಸಿದ್ದರು.

ಆದರೆ, ಕಾಲ ಉರುಳಿದಂತೆ ಮಿತಾಲಿ ಅವರ ಸಿನಿಮಾ ಬದುಕು ತಲೆಕೆಳಗಾಯಿತು. ದಿನಕಳೆದಂತೆ ಸಿನಿಮಾಗಳ ಅವಕಾಶಗಳು ಕಡಿಮೆಯಾಗುತ್ತಾ ಬಂದು, ಒಂದು ಹಂತದಲ್ಲಿ ಮಿತಾಲಿ ಕೈಯಲ್ಲಿ ಕೆಲಸಗಳೇ ಇಲ್ಲದಂತಾದವು. ಸಿನಿಮಾಗಳಿಲ್ಲದ ಕಾರಣ ಅವರ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿತು. ಸದಾ ಅವಕಾಶಕ್ಕಾಗಿ ಹೋರಾಡುವ ಇತರ ಕಲಾವಿದರಂತೆ, ಇವರಿಗೂ ಕೂಡ ಯಾವುದೇ ಸ್ಥಿರವಾದ ಆದಾಯವಿಲ್ಲದೆ ಬದುಕು ನಡೆಸುವುದು ಕಷ್ಟವಾಯಿತು. ವರದಿಗಳ ಪ್ರಕಾರ, ಅವರ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ ದಿನನಿತ್ಯದ ಜೀವನಕ್ಕೂ ಅವರು ತೀವ್ರ ಕಷ್ಟಪಡಬೇಕಾಯಿತು.

ಮೂಲತಃ ದೆಹಲಿಯವರಾದ ಮಿತಾಲಿ ಶರ್ಮ, ನಟಿಯಾಗಬೇಕು ಎಂಬ ಒಂದೇ ಒಂದು ದೊಡ್ಡ ಕನಸನ್ನು ಹೊತ್ತು ತಂದೆ-ತಾಯಿಯನ್ನು ಬಿಟ್ಟು ಮುಂಬೈಗೆ ಬಂದಿದ್ದರು. ಆದರೆ ಅವರು ಮುಂಬೈಗೆ ಬಂದ ನಂತರ, ಅವರ ಕುಟುಂಬದವರು ಕೂಡ ಇವರಿಂದ ದೂರ ಸರಿದು ಸಂಬಂಧವನ್ನು ಕಡಿದುಕೊಂಡಿದ್ದರು ಎನ್ನಲಾಗಿದೆ. ಒಂದೆಡೆ ಕೈಯಲ್ಲಿ ಕೆಲಸವಿಲ್ಲ, ಮತ್ತೊಂದೆಡೆ ಕಷ್ಟ ಕಾಲದಲ್ಲಿ ಸಾಂತ್ವನ ಹೇಳಲು ಕುಟುಂಬದ ಬೆಂಬಲವೂ ಇಲ್ಲ, ಜೊತೆಗೆ ಹೆಚ್ಚುತ್ತಿದ್ದ ಸಾಲದ ಸುಳಿಗೆ ಸಿಲುಕಿದ ಮಿತಾಲಿ ಅವರ ಮಾನಸಿಕ ಆರೋಗ್ಯ ಕೂಡ ಸಂಪೂರ್ಣವಾಗಿ ಕೈಕೊಟ್ಟಿತು.

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಗಟ್ಟಿ ನಾಯಕತ್ವದ ಅವಶ್ಯಕತೆ ಇದೆ: ಸುಮಲತಾ

ಅವರ ಜೀವನದ ಅತ್ಯಂತ ಆಘಾತಕಾರಿ ತಿರುವು ಎದುರಾಗಿದ್ದು ಮುಂಬೈನ ಲೋಖಂಡ್‌ವಾಲಾ ಬೀದಿಯಲ್ಲಿ. ಖ್ಯಾತ ನಟಿಯಾಗಿದ್ದ ಮಿತಾಲಿ ಶರ್ಮ ಹಸಿವಿನಿಂದ ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವುದು ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ, ಹೊಟ್ಟೆಪಾಡಿಗಾಗಿ ಬೀದಿಯಲ್ಲಿ ಕಳ್ಳತನ ಮಾಡಲು ಹೋಗಿ ಅವರು ಸಿಕ್ಕಿಬಿದ್ದಿದ್ದರು ಎಂದು ವರದಿಯಾಗಿದೆ. ಈ ವೇಳೆ ಮುಂಬೈ ಪೊಲೀಸರು ಅವರನ್ನು ವಶಕ್ಕೆ ಪಡೆದು, ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕೈಕೋಳ ಹಾಕಲು ಪ್ರಯತ್ನಿಸಿದಾಗ, ಮಾನಸಿಕ ಸಮತೋಲನ ಕಳೆದುಕೊಂಡಿದ್ದ ಮಿತಾಲಿ ಆ ಅಧಿಕಾರಿಗೆ ಬೈದು ಅಲ್ಲಿಂದ ಓಡಿಹೋಗಲು ಯತ್ನಿಸಿದ್ದರು. ಸದ್ಯ ಈ ಘಟನೆ ಇಡೀ ಬಣ್ಣದ ಲೋಕದ ಕರಾಳ ಮುಖವನ್ನು ಜಗತ್ತಿನೆದುರು ಬಿಚ್ಚಿಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us