
ಮಲಯಾಳಂ ಚಿತ್ರರಂಗದಲ್ಲಿ 4 ದಶಕಗಳಿಂದ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಮೋಹನ್ಲಾಲ್. ಇಂದಿನ ಯುವ ನಟರಿಗೂ ಪೈಪೋಟಿ ನೀಡುತ್ತ ಅವರು ಡಿಮ್ಯಾಂಡ್ ಉಳಿಸಿಕೊಂಡಿದ್ದಾರೆ. ಒಂದಕ್ಕಿಂತ ಒಂದು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಇಂದು (ಮೇ 21) ಅವರ ಜನ್ಮದಿನದ (Mohanlal Birthday) ಪ್ರಯುಕ್ತ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. 62ನೇ ವಯಸ್ಸಿಗೆ ಕಾಲಿಟ್ಟಿರುವ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಮೋಹನ್ಲಾಲ್ (Mohanlal) ಜೊತೆ ಕೆಲಸ ಮಾಡಬೇಕು ಎಂದು ಅನೇಕ ಯುವ ನಿರ್ದೇಶಕರು ಹಂಬಲ ವ್ಯಕ್ತಪಡಿಸುತ್ತಿದ್ದಾರೆ. ಅವರು ನಟಿಸಿದ ‘ದೃಶ್ಯಂ’ ಮತ್ತು ‘ದೃಶ್ಯಂ 2’ ಸಿನಿಮಾವನ್ನು ಇಡೀ ದೇಶವೇ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ‘ಪುಲಿಮುರುಗನ್’, ‘ಮರಕ್ಕರ್’ ಮುಂತಾದ ಅದ್ದೂರಿ ಸಿನಿಮಾಗಳಲ್ಲಿ ನಟಿಸುವ ಮೂಲಕವೂ ಮೋಹನ್ಲಾಲ್ ಸೈ ಎನಿಸಿಕೊಂಡಿದ್ದಾರೆ. ವಿಶೇಷ ಎಂದರೆ, ನಟನಾಗುವುದಕ್ಕೂ ಮುನ್ನ ಅವರು ವೃತ್ತಿಪರ ಕುಸ್ತಿಪಟು ಆಗಿದ್ದರು. ಕುಸ್ತಿಯಲ್ಲಿ ಅವರು ರಾಜ್ಯ ಮಟ್ಟದ ಚಾಂಪಿಯನ್ ಕೂಡ ಆಗಿದ್ದರು. ಆದರೆ ಅವರು ಬದುಕು ಕಟ್ಟಿಕೊಂಡಿದ್ದು ಬಣ್ಣದ ಲೋಕದಲ್ಲಿ. ಹಾಗಾದರೆ ಕುಸ್ತಿ (Wrestling) ಪಟು ಆಗಬೇಕಿದ್ದ ಮೋಹನ್ಲಾಲ್ ಅವರು ನಟನಾಗಿ ಮುಂದುವರಿದಿದ್ದಕ್ಕೆ ಕಾರಣ ಏನು? ಇಲ್ಲಿದೆ ವಿವರ..
ಸ್ಟಾರ್ ನಟನಾಗುವುದಕ್ಕೂ ಮುನ್ನ ಮೋಹನ್ಲಾಲ್ ಅವರಿಗೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇತ್ತು. ಅವರು ಅತ್ಯುತ್ತಮ ಕುಸ್ತಿ ಪಟು ಆಗಿದ್ದರು. ರಾಜ್ಯ ಮಟ್ಟದ ಚಾಂಪಿಯನ್ ಆಗಿದ್ದ ಅವರು ರಾಷ್ಟ್ರ ಮಟ್ಟದ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು. ದೆಹಲಿಯಲ್ಲಿ ಆಯೋಜನೆಗೊಂಡಿದ್ದ ಸ್ಪರ್ಧೆಗೆ ಅವರು ತೆರಳಬೇಕಿತ್ತು. ಆದರೆ ಮೊದಲ ಸಿನಿಮಾಗೆ ಆಡಿಷನ್ ನೀಡಲು ತೆರಳಿದ್ದರಿಂದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಮಿಸ್ ಆಯಿತು. ಬಳಿಕ ಅವರು ಚಿತ್ರರಂಗದಲ್ಲೇ ಭವಿಷ್ಯ ಕಟ್ಟಿಕೊಂಡರು.
ನೂರಾರು ಸಿನಿಮಾಗಳಲ್ಲಿ ನಟಿಸಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಮೋಹನ್ಲಾಲ್ ಅವರು ಅನೇಕರಿಗೆ ಸ್ಫೂರ್ತಿ ಆಗಿದ್ದಾರೆ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ದಿಗ್ಗಜ ನಟನಿಗೆ ಶುಭ ಕೋರುತ್ತಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮೋಹನ್ಲಾಲ್ ಅವರಿಗೆ ಬೇರೆ ಭಾಷೆಯ ಚಿತ್ರರಂಗದ ಜೊತೆಗೂ ನಂಟು ಇದೆ. ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ನಟಿಸಿದ್ದ ‘ಮೈತ್ರಿ’ ಚಿತ್ರದಲ್ಲಿ ಮೋಹನ್ಲಾಲ್ ಕೂಡ ಅಭಿನಯಸಿದ್ದರು. ಆ ಸಿನಿಮಾ 2015ರಲ್ಲಿ ತೆರೆಕಂಡಿತು. ತಮಿಳು ಮತ್ತು ತೆಲುಗಿನ ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಎಲ್ಲ ಭಾಷೆಯ ಚಿತ್ರರಂಗದಿಂದಲೂ ಅಭಿಮಾನಿಗಳು ಅವರ ಹುಟ್ಟುಹಬ್ಬದ ಸಲುವಾಗಿ ವಿಶ್ ಮಾಡುತ್ತಿದ್ದಾರೆ.
ನಟನಾಗಿ ಮಾತ್ರವಲ್ಲದೇ ಕಿರುತೆರೆ ಕಾರ್ಯಕ್ರಮಗಳ ನಿರೂಪಕನಾಗಿಯೂ ಮೋಹನ್ಲಾಲ್ ಫೇಮಸ್ ಆಗಿದ್ದಾರೆ. ಮಲಯಾಳಂ ಬಿಗ್ ಬಾಸ್ ನಾಲ್ಕು ಸೀಸನ್ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಅವರು ಜಡ್ಜ್ ಆಗಿ ಕೆಲಸ ಮಾಡಿದ್ದಾರೆ. ಸಿನಿಮಾ ನಿರ್ಮಾಪಕನಾಗಿ, ವಿತರಕನಾಗಿಯೂ ಅವರು ದಶಕಗಳ ಅನುಭವ ಹೊಂದಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಮೋಹನ್ಲಾಲ್ ಬಾಚಿಕೊಂಡಿದ್ದಾರೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.